0-4 ಅಂತರದ ಹೀನಾಯ ಸೋಲು -ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಗೂಬೆ ಕೂರಿಸಿದ್ದು ಯಾರ ಮೇಲೆ?
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸಿರೀಸ್‌ನಲ್ಲಿ ಟೀಂ ಇಂಡಿಯಾ ಒಂದೇ ಒಂದು ಮ್ಯಾಚ್ ಗೆಲ್ಲಲಿಲ್ಲ. ಸೋಲಿನ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರಾಸೆಗೊಂಡಿದ್ದಾರೆ. ಇನ್ನು ಸೋಲಿಗೆ ನಾಯಕ ಅಯ್ಯರ್, ಮೈದಾನದ ಮೇಲೆ ಗೂಬೆ ಕೂರಿಸಿದ್ದಾರೆ.

ಪಂದ್ಯದ ಹೈಲೈಟ್ಸ್
ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಸರಣಿ ಸೋತು ಸುಣ್ಣವಾಗಿದ್ದ ಟೀಂ ಇಂಡಿಯಾ ಮತ್ತೊಮ್ಮೆ ದೊಡ್ಡ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-ಪಂದ್ಯದಲ್ಲಿ ಒಂದೇ ಒಂದು ಮ್ಯಾಚ್ ಗೆಲ್ಲದೇ ಭಾರೀ ಮುಖಭಂಗ ಅನುಭವಿಸಿದೆ. ಟಿ-20 ಸರಣಿಯ ಕೊನೆಯ ಪಂದ್ಯ ನಿನ್ನೆ ನಡೆಯಿತು.
ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಭಾರತ ಸೋಲೊಪ್ಪಿಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 4-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 258 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, 201 ರನ್‌ಗಳಿಗೆ ಆಟ ಮುಗಿಸಿ 56 ರನ್‌ಗಳ ಸೋಲು ಕಂಡಿತು.
ಬೌಲರ್‌ಗಳ ವೈಫಲ್ಯ, ಕಳಪೆ ಫೀಲ್ಡಿಂಗ್
ಸರಣಿಯುದ್ದಕ್ಕೂ ಕಂಡುಬಂದ ಬೌಲಿಂಗ್ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಇಂಗ್ಲೆಂಡ್ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಇದಕ್ಕೆ ಪೂರಕವೆಂಬಂತೆ ಭಾರತದ ಫೀಲ್ಡಿಂಗ್ ಕೂಡ ಅತ್ಯಂತ ಕಳಪೆಯಾಗಿತ್ತು. ಹಲವು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ಭಾರಿ ಹೊಡೆತ ನೀಡಿತು.
ಸೋಲಿಗೆ ಸ್ಟೇಡಿಯಂ ಕಾರಣ ಎಂದರಾ ಅಯ್ಯರ್?
ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್ ಸೋಲಿಗೆ ಹಲವು ಕಾರಣಗಳನ್ನು ನೀಡಿದರು. ಫೀಲ್ಡಿಂಗ್ ವೈಫಲ್ಯವನ್ನು ಒಪ್ಪಿಕೊಂಡ ಅವರು, ಸ್ಟೇಡಿಯಂನ ವಿಭಿನ್ನ ಆಯಾಮಗಳ (Dimensions) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೈದಾನದ ಗಾತ್ರ ಮತ್ತು ಬೌಂಡರಿಗಳ ಡೈಮೆನ್ಷನ್ ಕೂಡ ನಮ್ಮ ಸೋಲಿಗೆ ಒಂದು ಕಾರಣವಾಯಿತು. ಬ್ಯಾಟಿಂಗ್ ಮಾಡುವಾಗ ನಾವು ಉತ್ತಮ ಪಾಲುದಾರಿಕೆ ನಿರ್ಮಿಸುವ ಬದಲು, ಆರಂಭದಿಂದಲೇ ದೊಡ್ಡ ಗುರಿಯನ್ನು ಬೆನ್ನಟ್ಟಲು ಹೋಗಿ ವಿಕೆಟ್ ಕಳೆದುಕೊಂಡೆವು ಎಂದು ಅಯ್ಯರ್ ವಿಶ್ಲೇಷಿಸಿದರು.
ಕಲಿಕೆ ಮುಖ್ಯ ಎಂದ ನಾಯಕ
ಸರಣಿ ಸೋಲಿನ ನಡುವೆಯೂ ಸಕಾರಾತ್ಮಕ ಅಂಶಗಳ ಬಗ್ಗೆ ಮಾತನಾಡಿದ ಅಯ್ಯರ್, ಇಂಗ್ಲೆಂಡ್ ವಿರುದ್ಧದ ಈ ಸರಣಿಯಿಂದ ನಮಗೆ ಸಾಕಷ್ಟು ಪಾಠಗಳು ಸಿಕ್ಕಿವೆ. ಇಲ್ಲಿನ ವಾತಾವರಣ ಮತ್ತು ಪಿಚ್‌ಗೆ ತಕ್ಕಂತೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಅರಿತಿದ್ದೇವೆ. ಐದನೇ ಪಂದ್ಯದ ಪಿಚ್ ಬ್ಯಾಟಿಂಗ್‌ಗೆ ಅತ್ಯುತ್ತಮವಾಗಿತ್ತು. ಒಬ್ಬ ವೃತ್ತಿಪರ ಆಟಗಾರನಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಆಡುವುದನ್ನು ನಾವು ಕಲಿಯಬೇಕಿದೆ ಎಂದಿದ್ದಾರೆ.
ಪ್ರಶ್ನೆ: ಈ ಸರಣಿಯಿಂದ ನೀವು ಏನನ್ನು ಕಲಿತಿದ್ದೀರಿ?
ಶ್ರೇಯಸ್ ಅಯ್ಯರ್: ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಲಿಯಲು ಸಾಕಷ್ಟು ವಿಷಯಗಳಿವೆ. ಮೊದಲನೆಯದಾಗಿ ಇಲ್ಲಿನ ಪರಿಸ್ಥಿತಿಗಳು (Conditions), ಅರಿವು (Awareness) ಮತ್ತು ವಿಕೆಟ್‌ಗಳಿಗೆ ತಕ್ಕಂತೆ ಹೊಂದಿಕೊಳ್ಳುವುದು (Adaptation). ನಾವು ಈ ಸರಣಿಯಲ್ಲಿ ಆಡಿದ ಎಲ್ಲಾ ಮೈದಾನಗಳ ಪೈಕಿ, ಇದು ಬಹುಶಃ ಬ್ಯಾಟಿಂಗ್‌ಗೆ ಅತ್ಯುತ್ತಮವಾದ ವಿಕೆಟ್ ಆಗಿತ್ತು. ಅದಕ್ಕಾಗಿಯೇ ಇಂದು ನಮ್ಮ ಬ್ಯಾಟಿಂಗ್ ಶೈಲಿ ಸಂಪೂರ್ಣವಾಗಿ ಭಿನ್ನವಾಗಿತ್ತು. ಎಲ್ಲವೂ ಪರಿಸ್ಥಿತಿಗೆ ಹೊಂದಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಮೊದಲ ಪಂದ್ಯದಿಂದಲೂ ವಾತಾವರಣ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇದ್ದವು. ಒಬ್ಬ ವೃತ್ತಿಪರ ಆಟಗಾರರಾಗಿ ನಾವು ಇವೆಲ್ಲವನ್ನೂ ಅರ್ಥಮಾಡಿಕೊಂಡು ಕಲಿಯಬೇಕಿದೆ.
ಪ್ರಶ್ನೆ: ಮುಖ್ಯವಾಗಿ ನೀವು ಗುರುತಿಸಿದ ಪಾಠಗಳು ಯಾವುವು?
ಶ್ರೇಯಸ್ ಅಯ್ಯರ್: ನಾವು ಈ ಬಗ್ಗೆ ತಂಡದಲ್ಲಿ ಪರಸ್ಪರ ಹೆಚ್ಚು ಚರ್ಚಿಸುವುದು ಬಹಳ ಮುಖ್ಯ, ವಿಶೇಷವಾಗಿ ನಾವು ಇಲ್ಲಿ ಏನು ಮಾಡಬಹುದಿತ್ತು ಎಂಬ ಬಗ್ಗೆ. ಪಂದ್ಯಗಳನ್ನು ಗೆಲ್ಲುವಲ್ಲಿ ಫೀಲ್ಡಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಆ ಒಂದು ವಿಭಾಗದಲ್ಲಿ ನಾವು ಕಠಿಣವಾಗಿ ಕೆಲಸ ಮಾಡಬೇಕಿದೆ. ಅದರಲ್ಲೂ ವಿದೇಶಿ ಮೈದಾನಗಳಿಗೆ ಬಂದಾಗ, ಮೈದಾನದ ಆಯಾಮಗಳು ಸಂಪೂರ್ಣವಾಗಿ ವಿಭಿನ್ನವಾಗಿರುತ್ತವೆ. ನಾವು ಎಷ್ಟು ಬೇಗ ಅದಕ್ಕೆ ಹೊಂದಿಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು.
ಪ್ರಶ್ನೆ: Choice of deliveries ಇನ್ನೂ ಉತ್ತಮವಾಗಿರಬಹುದಿತ್ತೇ?
ಶ್ರೇಯಸ್ ಅಯ್ಯರ್: ಹೌದು, ಖಂಡಿತವಾಗಿಯೂ. ಬ್ಯಾಟಿಂಗ್‌ಗೆ ಪೂರಕವಾಗಿದ್ದ ಇಂತಹ ಪಿಚ್‌ನಲ್ಲಿ ನಾವು ಬೌಲಿಂಗ್‌ನಲ್ಲಿ ಎದುರಾಳಿಯನ್ನು ಇನ್ನಷ್ಟು ಚಾಣಾಕ್ಷತನದಿಂದ ವಂಚಿಸಬೇಕಿತ್ತು. ಜೊತೆಗೆ ನಾವು ಕೆಲವು ಕ್ಯಾಚ್‌ಗಳನ್ನು ಕೈಬಿಟ್ಟೆವು, ಅದು ಅವರ ಮೊತ್ತವನ್ನು ಹೆಚ್ಚಿಸುವಲ್ಲಿ ಕಾರಣವಾಯಿತು. ಒಂದು ವೇಳೆ ನಾವು 220 ರಿಂದ 225 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದರೆ, ಅದು ನಮಗೆ ಅತ್ಯುತ್ತಮ ಚೇಸಿಂಗ್ ಅವಕಾಶವಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ನಮಗೆ ಆ ಅವಕಾಶ ಸಿಗಲಿಲ್ಲ. ಆದರೂ ಇದೊಂದು ದೊಡ್ ಪಾಠ.
ಪ್ರಶ್ನೆ: ಪವರ್‌ಪ್ಲೇನಲ್ಲಿ ಹೆಚ್ಚು ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಕಾರಣವಾಯಿತೇ?
ಶ್ರೇಯಸ್ ಅಯ್ಯರ್: ಹೌದು, ನಾವು ಗುಂಪುಗುಂಪಾಗಿ ವಿಕೆಟ್ ಕಳೆದುಕೊಂಡೆವು. ಉತ್ತಮ Partnerships ನಿರ್ಮಿಸುವ ಬದಲು, ನಾವು ಕೇವಲ ರನ್ ಬೆನ್ನಟ್ಟುವ ಧಾವಂತಕ್ಕೆ ಬಿದ್ದೆವು. ಇಂತಹ ವಿಕೆಟ್‌ಗಳಲ್ಲಿ ಆ ರೀತಿ ಆಡಲು ಸಾಧ್ಯವಿಲ್ಲ. ವಿಕೆಟ್ ಹೇಗೆ ವರ್ತಿಸುತ್ತಿದೆ ಎಂಬ ಅರಿವು ನಮಗೆ ಇರಬೇಕಿತ್ತು. ಸ್ವಲ್ಪ ಸಮಯ ತೆಗೆದುಕೊಂಡು, ನಿರ್ದಿಷ್ಟ ಬೌಲರ್‌ಗಳನ್ನು ಗುರಿಯಾಗಿಸಿಕೊಳ್ಳಬೇಕಿತ್ತು. ಆದರೆ ಇಂಗ್ಲೆಂಡ್ ಬೌಲರ್‌ಗಳು ತಮ್ಮ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತಂದರು. ಅವರು ಇಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವುದರಿಂದ ಅವರ ಹಿಡಿತ ಚೆನ್ನಾಗಿತ್ತು.
ಪ್ರಶ್ನೆ: ಬಟ್ಲರ್ ಮತ್ತು ಬ್ರೂಕ್ ಅವರಂತಹ ಪಾಲುದಾರಿಕೆ ಒಬ್ಬ ನಾಯಕನಿಗೆ ಕಷ್ಟ ತರುತ್ತದೆಯೇ?
ಶ್ರೇಯಸ್ ಅಯ್ಯರ್: ಹೌದು, ಜೋಸ್ ಬಟ್ಲರ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಹ್ಯಾರಿ ಬ್ರೂಕ್ ಬಂದು ಪಂದ್ಯದ ವೇಗವನ್ನು ಅವರತ್ತ ತಿರುಗಿಸಿದರು. ಆ ಪಾಲುದಾರಿಕೆ ಅವರ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಿತು. ನಾವು ಕೆಲವು ಕ್ಯಾಚ್‌ಗಳನ್ನು ಕೈಬಿಟ್ಟೆವು, ಅದು ಪಂದ್ಯದ ಲಯವನ್ನು ಬದಲಿಸಬಹುದಿತ್ತು.
ಸರಣಿಯುದ್ದಕ್ಕೂ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಹೀಗೆ ಮೂರೂ ವಿಭಾಗಗಳಲ್ಲಿ ಭಾರತ ಮಕಾಡೆ ಮಲಗಿದ್ದು, ಮುಂಬರುವ ಸರಣಿಗಳಲ್ಲಿ ಟೀಮ್ ಇಂಡಿಯಾ ಈ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

