RCB ಪ್ಲೇಆಫ್ ತಲುಪದಿದ್ದರೆ, ಬೆಂಗಳೂರಿಗೆ ಯಾವ ಎರಡು ತಂಡಗಳು ಸವಾಲು? ಇಲ್ಲಿದೆ ನೋಡಿ ಲೆಕ್ಕಾಚಾರ!
IPL 2025 Points Table: ಐಪಿಎಲ್ ಸೀಸನ್ 18ರಲ್ಲಿ ಆರ್‌ಸಿಬಿ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿದೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ.
ಈ ಬಾರಿಯ ಐಪಿಎಲ್ ಸೀಸನ್ 18ರ ಎಲ್ಲಾ ಲೀಗ್ ಪಂದ್ಯಗಳು ಕೊನೆಯ ಹಂತದಲ್ಲಿವೆ.ಈ ಬಾರಿ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, ಕಪ್ ಗೆಲ್ಲುವ ಭರವಸೆಯನ್ನು ಮೂಡಿಸಿದೆ.
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಬೆಂಗಳೂರು ಟೀಂ ಪ್ಲೇ ಆಫ್ ತಲುಪದಿದ್ರೆ ಪಾಟೀದಾರ್ ಬಳಗಕ್ಕೆ ಎರಡು ತಂಡಗಳು ದೊಡ್ಡ ಸವಾಲು ನೀಡಲಿವೆ. ಆ ಎರಡು ತಂಡಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
ಐಪಿಎಲ್ ಸೀಸನ್ 18ರಲ್ಲಿ ಆರ್‌ಸಿಬಿ ಈವರೆಗೆ 9 ಪಂದ್ಯಗಳನ್ನು ಆಡಿದೆ. 9ರಲ್ಲಿ 6 ಪಂದ್ಯಗಳನ್ನು ಗೆದ್ದಿದ್ದು, 3ರಲ್ಲಿ ಸೋತಿದೆ. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಬೆಂಗಳೂರು ತಂಡ 12 ಅಂಕಗಳನ್ನು ಪಡೆದುಕೊಂಡಿದೆ. ಗುಜರಾತ್ ಮತ್ತು ದೆಹಲಿ ತಂಡಗಳು ಸಹ 12 ಅಂಕಗಳನ್ನು ಗಳಿಸಿದ್ದು, ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಆದ್ರೆ ಗುಜರಾತ್ ಮತ್ತು ದೆಹಲಿ ತಂಡಗಳು ಈವರೆಗೆ 8 ಪಂದ್ಯಗಳನ್ನು ಆಡಿವೆ.
ಇನ್ನು ಪಂಜಾಬ್ ಮತ್ತು ಮುಂಬೈ ಕ್ರಮವಾಗಿ 11 ಮತ್ತು 10 ಅಂಕ ಗಳಿಸುವ ಮೂಲಕ 4 ಮತ್ತು 5ನೇ ಸ್ಥಾನದಲ್ಲಿವೆ. ಗುಜರಾತ್ ಮತ್ತು ದೆಹಲಿ ತಂಡಗಳ ಮುಂದಿನ ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಹೆಚ್ಚು ವ್ಯತ್ಯಾಸಗಳಾಗುವ ಎಲ್ಲಾ ಸಾಧ್ಯತೆಗಳಿವೆ.
ಆರ್‌ಸಿಬಿಗೆ 2 ತಂಡಗಳು ಅಪಾಯಕಾರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಟೀಂ ಸವಾಲು ನೀಡಬಹುದು. ಆರಂಭದಲ್ಲಿ ಸೋತ ಮುಂಬೈ ಇಂಡಿಯನ್ಸ್, ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ, ಜಯದ ಲಯಕ್ಕೆ ಮರಳಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಇದುವರೆಗೆ 9 ಪಂದ್ಯಗಳಲ್ಲಿ 5 ಗೆದ್ದು 10 ಅಂಕಗಳನ್ನು ಗಳಿಸಿ, ನಾಲ್ಕರಲ್ಲಿ ಸೋತಿದೆ. ಮುಂಬೈ ತಂಡದ ಗೆಲುವಿನ ಓಟ ಹೀಗೆ ಮುಂದುವರಿದ್ರೆ ಪಾಯಿಂಟ್ಸ್ ಪಟ್ಟಿಯಲ್ಲಿ ಮುನ್ನಡೆ ಪಡೆದುಕೊಳ್ಳಲಿದೆ.
ಮುಂಬೈ ಇಂಡಿಯನ್ಸ್ ತಂಡದಷ್ಟೇ ಪಂಜಾಬ್ ಕಿಂಗ್ಸ್ ಸಹ ಆರ್‌ಸಿಬಿಗೆ ಸವಾಲು ಒಡ್ಡಬಹುದು. ಪಂಜಾಬ್ ತಂಡ 9 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ, 3 ರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಡ್ರಾ ಆಗಿದೆ. ಪಿಬಿಕೆಎಸ್ ತಂಡ 11 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ದೆಹಲಿ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸಬೇಕಾದ್ರೆ ಮುಂದಿನ 5 ಪಂದ್ಯಗಳಲ್ಲಿ ಎರಡನ್ನು ಕಡ್ಡಾಯವಾಗಿ ಗೆಲ್ಲಲೇಬೇಕು. ಇಂದು ದೆಹಲಿ ವಿರುದ್ಧ ಬೆಂಗಳೂರು ತಂಡ ಆಡಲಿದೆ. ತವರಿನಲ್ಲಾದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ ಬೆಂಗಳೂರು ತಂಡವಿದೆ. ಇಂದಿನ ಆರ್‌ಸಿಬಿ ಮತ್ತು ಡಿಸಿ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ದೆಹಲಿ ವಿರುದ್ಧ ಬೆಂಗಳೂರು ಗೆದ್ದರೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿರುತ್ತೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.