ಬೆಟ್ಟಿಂಗ್ ಆ್ಯಪ್ ಬೆಂಬಲಿಸಿದ ಸುರೇಶ್ ರೈನಾಗೆ ಸಂಕಷ್ಟ; ಮಾಜಿ ಕ್ರಿಕೆಟಿಗನಿಗೆ ED ಸಮನ್ಸ್!
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇದೀಗ ಸಂಕಷ್ಟ ಎದುರಾಗಿದೆ. ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್ ಬೆಂಬಲಿಸಿದ ಮಾಜಿ ಕ್ರಿಕೆಟಿಗನಿಗೆ ಇದೀಗ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದು, ಇದೀಗ ತನಿಖೆಗೆ ಹಾಜರಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಇಂದು ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಕಾನೂನು ಬಾಹಿರ ಬೆಟ್ಟಿಂಗ್ ಆ್ಯಪ್ ಸಂಬಂಧ ರೈನಾ ಅವರ ಹೇಳಿಕೆಯನ್ನು ಇಂದು ಇ.ಡಿ. ರೆಕಾರ್ಡ್ ಮಾಡಿಕೊಳ್ಳಲಿದೆ.
ಹಲವು ಸೆಲಿಬ್ರಿಟಿಗಳು ಕಾನೂನು ಬಾಹಿರ ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿದ್ದರು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿ ಹಲವು ಸೆಲಿಬ್ರಿಟಿಗಳಿಗೆ ನೋಟಿಸ್ ನೀಡಿತ್ತು.
ಕಳೆದ ಮೇ ತಿಂಗಳಿನಲ್ಲಿ ತೆಲಂಗಾಣ ಪೊಲೀಸರು ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಸೇರಿದಂತೆ 25 ಪ್ರಖ್ಯಾತ ನಟ-ನಟಿಯರ ಮೇಲೆ ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್ ಬೆಂಬಲಿಸಿದ್ದಕ್ಕೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಇಬ್ಬರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಆರೋಪವನ್ನು ಅಲ್ಲಗಳೆದಿದ್ದರು.
ಈ ಮೊದಲು ರಾಣಾ ದಗ್ಗುಬಾಟಿಗೆ ಜುಲೈ 23ರಂದು ಜಾರಿ ನಿರ್ದೇಶನಾಲಯ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ ಫಿಲ್ಮ್ ಹಾಗೂ ಇನ್ನಿತರ ಕಮಿಟ್ಮೆಂಟ್ ಇರುವುದರಿಂದ ತಮಗೆ ಕೊಂಚ ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದರು.
ಹೀಗಾಗಿ ರಾಣಾಗೆ ಆಗಸ್ಟ್ 11ರಂದು ಹೈದರಾಬಾದ್‌ನಲ್ಲಿರುವ ಇ.ಡಿ. ಕಚೇರಿಗೆ ಬರುವಂತೆ ಸಮನ್ಸ್ ನೀಡಲಾಗಿತ್ತು.
ಇದೀಗ ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್ ಬೆಂಬಲಿಸಿದ ಸಲುವಾಗಿ ಸೋಮವಾರ ರಾಣಾ ದಗ್ಗುಬಾಟಿ ಹೈದರಾಬಾದ್‌ನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದರು.