ಚಂದ್ರಯಾನ 3 ಸಕ್ಸಸ್ ಬೆನ್ನಲ್ಲೇ ಟೀಂ ಇಂಡಿಯಾದಲ್ಲೂ ಹುಮ್ಮಸ್ಸು..! ಈ ಸಲ ಕಪ್ ನಮ್ದೇ ಬಾಸೂ..!
ಬೆಂಗಳೂರು(ಆ.24): ಕೋಟ್ಯಾಂತರ ಭಾರತೀಯರ ಹರಕೆ, ಹಾರೈಕೆಯೊಂದಿಗೆ ಬಾಹ್ಯಾಕಾಶ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಟಿಸಿರುವ ಭಾರತ, ಚಂದ್ರನ ಮೇಲೆ ಯಶಸ್ವಿಯಾಗಿ 'ಚಂದ್ರಯಾನ-3' ನೌಕೆ ಇಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಚಂದ್ರಯಾನ 3 ಸಕ್ಸಸ್ ಬೆನ್ನಲ್ಲೇ, ಟೀಂ ಇಂಡಿಯಾ ಪಾಳಯದಲ್ಲೂ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ಹುಮ್ಮಸ್ಸು ಇಮ್ಮಡಿಗೊಳಿಸಿದೆ. ಚಂದ್ರಯಾನ ಸಕ್ಸಸ್‌ಗೂ, ಟೀಂ ಇಂಡಿಯಾ ಕಪ್ ಗೆಲ್ಲಲಿರುವುದಕ್ಕೂ ಏನು ಸಂಬಂಧ ಅಂತೀರಾ ಈ ಸ್ಟೋರಿ ನೋಡಿ.
ನಿರೀಕ್ಷೆಯಂತೆಯೇ ಆಗಸ್ಟ್ 23ರ ಸಂಜೆ 6.04 ನಿಮಿಷಕ್ಕೆ ಸುರಕ್ಷಿತವಾಗಿ ಚಂದ್ರನ ಮೇಲೆ ಇಸ್ರೋ ವಿಕ್ರಮ್ ಲ್ಯಾಂಡರ್ ಇಳಿಸುವಲ್ಲಿ ಯಶಸ್ವಿಯಾಗಿದೆ. ಇದು ಇಡೀ ದೇಶವೇ ಸಂಭ್ರಮಿಸುವಂತ ಸಾಧನೆ ಮಾಡಿದೆ.
ಚಂದ್ರಯಾನ್ 3 ಯಶಸ್ವಿಯಾದ ಬೆನ್ನಲ್ಲೇ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ 4ನೇ ದೇಶ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ.
ಇದಷ್ಟೇ ಅಲ್ಲದೇ ಈವರೆಗೂ ಯಾವ ದೇಶವೂ ಕಾಲಿಡದ ಚಂದ್ರನ ದಕ್ಷಿಣ ಧೃವದಲ್ಲಿ ನೌಕೆ ಇಳಿಸಿದ ಜಗತ್ತಿನ ಮೊದಲ ದೇಶ ಎನ್ನುವ ಕೀರ್ತಿಗೂ ಭಾತ ಪಾತ್ರವಾಗಿದೆ. ಈಗಾಗಲೇ ಚಂದ್ರನ ಮೇಲ್ಮೈ ಫೋಟೋಗಳನ್ನು ಇಸ್ರೋಗೆ ರವಾನಿಸಲಾಗಿದೆ.
ಇನ್ನು ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಂಚಿಕೊಂಡ ಒಂದು ಟ್ವೀಟ್ ಭಾರತೀಯ ಕ್ರಿಕೆಟ್ ಅಭಿಮಾನಿಗಳು ರೋಮಾಂಚಿತಗೊಳ್ಳುವಂತೆ ಮಾಡಿದೆ.
ಹೌದು, 2019ರಲ್ಲಿ ಇಸ್ರೋ ಚಂದ್ರಯಾನ-2 ಮಾಡಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡಿಂಗ್ ವೇಳೆ ವೈಫಲ್ಯ ಅನುಭವಿಸಿತ್ತು.ಇನ್ನು 2019ರಲ್ಲೇ ಟೀಂ ಇಂಡಿಯಾ, ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು.
ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಒಂದು ಕಡೆ ಚಂದ್ರಯಾನ 2ನ ನೇತೃತ್ವ ವಹಿಸಿದ್ದ ಹಾಗೂ ಇಸ್ರೋ ಮುಖ್ಯಸ್ಥರಾಗಿದ್ದ ಕೆ ಶಿವನ್ ಕಣ್ಣೀರಿಡುತ್ತಿರುವ ಫೋಟೋ ಹಾಗೂ ಮತ್ತೊಂದೆಡೆ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ರೋಹಿತ್ ಶರ್ಮಾ ನಿರಾಸೆಯಲ್ಲಿರುವ ಫೋಟೋ ಹಂಚಿಕೊಂಡಿದೆ.
ಇನ್ನು ಇದರ ಕೆಳಭಾಗದಲ್ಲಿ ಇದೀಗ ಚಂದ್ರಯಾನ 3 ಯಶಸ್ಸಿನ ರೂವಾರಿ ಹಾಗೂ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಖುಷಿಯಲ್ಲಿರುವ ಫೋಟೋ ಹಂಚಿಕೊಂಡಿದ್ದು, ಮತ್ತೊಂದೆಡೆ ಲೋಡಿಂಗ್ ಚಿತ್ರ ಹಂಚಿಕೊಳ್ಳುವ ಮೂಲಕ ಈ ಬಾರಿ ವಿಶ್ವಕಪ್ ಗೆಲ್ಲುವ ಮುನ್ಸೂಚನೆ ನೀಡಿದೆ.
ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೂ ನಡೆಯಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ.
ಭಾರತ ತಂಡವು 2011ರಲ್ಲಿ ಕೊನೆಯ ಬಾರಿಗೆ ಎಂ ಎಸ್ ಧೋನಿ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಮತ್ತೊಮ್ಮೆ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ.
ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಂ ಇಂಡಿಯಾ, ಟಿ20 ಸರಣಿಯನ್ನಾಡಲು ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. ಕೊನೆಯ ಪಂದ್ಯ ಆರಂಭಕ್ಕೂ ಮುನ್ನ ಚಂದ್ರಯಾನ -3 ಯಶಸ್ವಿಯಾಗಿದ್ದನ್ನು ಟಿವಿಯಲ್ಲಿ ನೋಡಿ ಸಂಭ್ರಮಿಸಿತು. ಇನ್ನು 3ನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಭಾರತ 2-0 ಅಂತರದಲ್ಲಿ ಟಿ20 ಸರಣಿಯನ್ನು ಜಯಿಸಿತು.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭವಿಷ್ಯ ನಿಜವಾಗಲಿ ಹಾಗೂ 2023ರ ಏಕದಿನ ವಿಶ್ವಕಪ್ ಈ ಸಲ ನಮ್ಮದಾಗಲಿ ಎನ್ನುವುದು ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.