ಟೀಂ ಇಂಡಿಯಾಗೆ ಬಿಗ್ ಶಾಕ್..! ಕೆ ಎಲ್ ರಾಹುಲ್ ಏಷ್ಯಾಕಪ್‌ಗೆ ಡೌಟ್; ಮತ್ತೋರ್ವ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..?
ಬೆಂಗಳೂರು: ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದು ಬೀಗಿರುವ ಟೀಂ ಇಂಡಿಯಾ. ಕೆರಿಬಿಯನ್ ಪ್ರವಾಸದ ಕೊನೆಯ ಹಂತಕ್ಕೆ ಬಂದು ತಲುಪಿದೆ. ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ, ಎರಡು ಮಹತ್ವದ ಸರಣಿಗೆ ಸಜ್ಜಾಗುತ್ತಿದೆ. ಹೀಗಿರುವಾಗಲೇ ರೋಹಿತ್ ಶರ್ಮಾ ಪಡೆಗೆ ದೊಡ್ಡ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಮುಂಬರುವ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ವರೆಗೆ ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಜರುಗಲಿದೆ. ಭಾರತ ಸೇರಿದಂತೆ 6 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ಟೂರ್ನಿ ಈ ಬಾರಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಹೀಗಿರುವಾಗಲೇ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಬಹುತೇಕ ಅನುಮಾನ ಎನಿಸಿದೆ. ಇದು ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಹೌದು, ಸ್ನಾಯು ಸೆಳೆತದಿಂದ ಬಳಲುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್, ಇದೀಗ ಚೇತರಿಸಿಕೊಳ್ಳುತ್ತಿದ್ದು, ಏಷ್ಯಾಕಪ್ ಟೂರ್ನಿಯ ವೇಳೆಗೆ ಸಂಪೂರ್ಣ ಫಿಟ್ ಆಗುವ ಕುರಿತಂತೆ ಯಾವುದೇ ಖಚಿತತೆ ಇಲ್ಲ. ಕೆ ಎಲ್ ರಾಹುಲ್, ಐರ್ಲೆಂಡ್ ಎದುರಿನ ಸರಣಿಗೂ ಅಲಭ್ಯರಾಗಿದ್ದಾರೆ.
ಇನ್ನು ಮತ್ತೂ ಆಘಾತಕಾರಿ ಸಂಗತಿಯೆಂದರೆ, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್, ಏಷ್ಯಾಕಪ್ ಮಾತ್ರವಲ್ಲದೇ, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ.
ಈ ಕಾರಣಕ್ಕಾಗಿಯೇ ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಯಾವಾಗ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಾಸ್ಸಾಗಲಿದ್ದಾರೆ ಎನ್ನುವ ಕುರಿತಂತೆ ಇದುವರೆಗೂ ತುಟಿಬಿಚ್ಚಿಲ್ಲ. ಇದು ಮುಂಬರುವ ಸರಣಿಗಳಿಗೆ ಟೀಂ ಇಂಡಿಯಾಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ದುರಾದೃಷ್ಟವಶಾತ್ ಶ್ರೀಲಂಕಾದ ಇಬ್ಬನಿ ಬೀಳುವ ವಾತಾವರಣದಲ್ಲಿ ಕೆ ಎಲ್ ರಾಹುಲ್ & ಶ್ರೇಯಸ್ ಅಯ್ಯರ್ 50 ಓವರ್ ಆಡುವಷ್ಟು ಫಿಟ್ ಆಗಿಲ್ಲ. ಆದರೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಏಷ್ಯಾಕಪ್ ಬಳಿಕ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತದಲ್ಲಿ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಸರಣಿಯ ವೇಳೆಗೆ ರಾಹುಲ್ ಫಿಟ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ
ಇನ್ನು ಅಯ್ಯರ್ ವಿಚಾರದ ಬಗ್ಗೆ ಹೇಳಬೇಕೆಂದರೆ, ಅವರು 100% ಫಿಟ್ ಆದರಷ್ಟೇ ತಂಡದಲ್ಲಿ ಸ್ಥಾನ ನೀಡಲು ಟೀಂ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಟಿ20 ಮಾದರಿಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವುದು ಸುಲಭ. ಆದರೆ 50 ಓವರ್ ಕ್ರಿಕೆಟ್ ಅಷ್ಟು ಸುಲಭವಲ್ಲ. ಈ ಕುರಿತಂತೆ ನಾವು ಇನ್ನಷ್ಟು ಕಾಲದ ಬಳಿಕ ತೀರ್ಮಾನಿಸಲಿದ್ದೇವೆ ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕೆ ಎಲ್ ರಾಹುಲ್ ಸದ್ಯ, ಬೆಂಗಳೂರಿನ ಎನ್‌ಸಿಎನಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಸ್ನಾಯು ಸೆಳೆತದಿಂದ ಈಗಷ್ಟೇ ಚೇತರಿಸಿಕೊಂಡಿರುವ ರಾಹುಲ್ ಅವರನ್ನು ಏಷ್ಯಾಕಪ್‌ಗೆ ಕಣಕ್ಕಿಳಿಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗುತ್ತಿದೆ.
ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್, ವಿಕೆಟ್ ಕೀಪಿಂಗ್ ಜತೆಗೆ 5ನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡಬೇಕಿದೆ. ಹೀಗಾಗಿ ರಾಹುಲ್‌ಗೆ ಇನ್ನಷ್ಟು ವಿಶ್ರಾಂತಿ ನೀಡಿ ವಿಶ್ವಕಪ್‌ಗೆ ಸಜ್ಜಾಗಲು ಸಮಯಾವಕಾಶ ನೀಡುವ ಸಾಧ್ಯತೆಯಿದೆ.