ಉತ್ತರಪ್ರದೇಶದ ಅನ್‌ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್, ಐಪಿಎಲ್ ಹರಾಜಿನಲ್ಲಿ 14.20 ಕೋಟಿ ರುಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ. ಕಡುಬಡತನದಿಂದ ಬಂದ ಇವರು, ಪ್ರತಿದಿನ 14 ಕಿ.ಮೀ ಸೈಕಲ್ ತುಳಿದು ಅಭ್ಯಾಸ ನಡೆಸಿ ಈ ಸಾಧನೆ ಮಾಡಿರುವುದು ಹಲವರಿಗೆ ಸ್ಪೂರ್ತಿಯಾಗಿದೆ.
ಬೆಂಗಳೂರು: ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಸದ್ದು ಮಾಡಿದ ಹೆಸರೆಂದರೆ ಅದು ಅನ್‌ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್ ಅವರದ್ದು. ಉತ್ತರಪ್ರದೇಶದ ಅಮೇಥಿಯ 20 ವರ್ಷದ ಈ ಸ್ಪಿನ್ ಆಲ್ರೌಂಡರ್‌ಗೆ 30 ಲಕ್ಷ ರುಪಾಯಿ ನಿಗದಿಯಾಗಿತ್ತು. ಆದರೆ ಇದೀಗ ಪ್ರಶಾಂತ್ ವೀರ್ ಐಪಿಎಲ್ ಹರಾಜು ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಅನ್‌ಕ್ಯಾಪ್ಡ್ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ರವೀಂದ್ರ ಜಡೇಜಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಈ ಪ್ರಶಾಂತ್ ವೀರ್ ಅವರ ಮೇಲೆ ಜಿದ್ದಿಗೆ ಬಿದ್ದಂತೆ ಬಿಡ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 14.20 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕಡುಬಡತನದ ಹಿನ್ನಲೆಯಿಂದ ಬಂದ ಪ್ರಶಾಂತ್ ವೀರ್ ಅವರ ಕ್ರಿಕೆಟ್ ಜರ್ನಿಯೇ ಹಲವರಿಗೆ ಸ್ಪೂರ್ತಿಯಾಗಿದೆ.
ಪ್ರಶಾಂತ್ ಕಷ್ಟದ ದಿನಗಳನ್ನು ಮೆಲುಕು ಹಾಕಿದ ಸ್ನೇಹಿತರು:
ಪ್ರಶಾಂತ್ ವೀರ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗುತ್ತಿದ್ದಂತೆಯೇ ಅವರ ಗ್ರಾಮ ಗುಜಿಪುರ (ಸಂಗ್ರಾಂಪುರ್ ಪೊಲೀಸ್ ಠಾಣೆ) ದಿಂದ ಇಡೀ ಅಮೇಥಿ ಜಿಲ್ಲೆಯವರೆಗೆ ಸಂಭ್ರಮಾಚರಣೆಗಳು ಭುಗಿಲೆದ್ದವು. ಭೀಮ್‌ರಾವ್ ಅಂಬೇಡ್ಕರ್ ಸ್ಟೇಡಿಯಂನಲ್ಲಿ ಪ್ರಶಾಂತ್ ಅವರ ಜತೆ ಕ್ರಿಕೆಟ್ ಆಡುತ್ತಿದ್ದ ಅವರ ಹಳೆಯ ಸ್ನೇಹಿತರು, ಅಕ್ಷರಶಃ ಭಾವುಕರಾಗಿದ್ದಾರೆ. ಅವರ ಆತ್ಮೀಯ ಸ್ನೇಹಿತ ಸಚಿನ್ ಈ ಬಗ್ಗೆ ತಮ್ಮ ಮೊದಲ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಶಾಂತ್ ಅವರೊಬ್ಬ ಆಕ್ರಮಣಕಾರಿ ಹಾಗೂ ಆತ್ಮವಿಶ್ವಾಸದಿಂದ ಕೂಡಿರುವ ಆಟಗಾರ. ನಮ್ಮ ಜತೆ ಆಡಿದ ಸ್ನೇಹಿತ ಇವತ್ತು ಐಪಿಎಲ್ ಆಡುತ್ತಿರುವುದರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
14 ಕಿಲೋ ಮೀಟರ್ ಸೈಕಲ್‌ನಲ್ಲೇ ಸ್ಟೇಡಿಯಂಗೆ ಬರ್ತಿದ್ದ ಪ್ರಶಾಂತ್:
ಪ್ರಶಾಂತ್ ಆಡುತ್ತಿದ್ದ ತಂಡದ ನಾಯಕ ಅಕ್ಬರ್, ಪ್ರಶಾಂತ್ ಅವರ ದೊಡ್ಡ ಶಕ್ತಿಯೆಂದರೇ ಅವರ ಪರಿಶ್ರಮ. ಅವರು ಪ್ರತಿದಿನ ಬೆಳಗ್ಗೆ 12ರಿಂದ 14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದರು. ಮಳೆಯಿರಲಿ, ಚಳಿಯಿರಲಿ ಅವರು ಅಭ್ಯಾಸ ಮಾಡುವುದನ್ನು ನಿಲ್ಲಿಸುತ್ತಿರಲಿಲ್ಲ.ಅವರ ಕೋಚ್ ಗಾಲೀಬ್ ಅವರ ಮಾರ್ಗದರ್ಶನದಲ್ಲಿ ಹೆಚ್ಚು ಪರಿಪಕ್ವವಾದರು ಎಂದು ಹೇಳಿದ್ದಾರೆ.
ಹರಾಜು ನೋಡಿ ಮಜಾ ಬರುತ್ತಿದೆ ಎಂದ ಪ್ರಶಾಂತ್ ವೀರ್:
20 ವರ್ಷದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್, ಐಪಿಎಲ್ ಹರಾಜಿನ ವೇಳೆಯಲ್ಲಿ ಉತ್ತರ ಪ್ರದೇಶ ತಂಡದ ಜತೆ ಬಸ್‌ನಲ್ಲಿದ್ದರು. ಆ ತಂಡದ ಜತೆ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಕೂಡಾ ಇದ್ದರು. ಈ ವೇಳೆ ಹರಾಜಿನ ಬಗ್ಗೆ ಏನನ್ನಿಸುತ್ತಿದೆ ಎಂದಾಗ ಪ್ರಶಾಂತ್ ವೀರ್, ಮಜಾ ಬರುತ್ತಿದೆ ಎನ್ನುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


