- Home
- Sports
- Cricket
- ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ! ಮ್ಯಾಕ್ಸ್‌ವೆಲ್ ರೆಕಾರ್ಡ್ ನುಚ್ಚುನೂರು
ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಐಪಿಎಲ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ! ಮ್ಯಾಕ್ಸ್‌ವೆಲ್ ರೆಕಾರ್ಡ್ ನುಚ್ಚುನೂರು
ಲಖನೌ: 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಇದರ ಜತೆಗೆ ಆಸೀಸ್ ಮೂಲದ ದಿಗ್ಗಜ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿದ್ದ ದಾಖಲೆ ನುಚ್ಚುನೂರು ಮಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ವೈಭವ್
ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅತಿ ವೇಗವಾಗಿ 500 ರನ್ ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಲಖನೌ ಎದುರು ಒಂದಂಕಿ ಮೊತ್ತಕ್ಕೆ ವೈಭವ್ ಔಟ್
ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿನ್ಸ್ ಯಾದವ್ ಎಸೆದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ವೈಭವ್ ಈ ದಾಖಲೆ ನಿರ್ಮಿಸಿದರು. ಆದರೆ, ಈ ಪಂದ್ಯದಲ್ಲಿ ಅವರಿಗೆ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. 11 ಎಸೆತಗಳಲ್ಲಿ 8 ರನ್ ಗಳಿಸಿದ್ದ ವೈಭವ್ ಅವರನ್ನು ಮೊಹ್ಸಿನ್ ಖಾನ್ ಔಟ್ ಮಾಡಿದರು.
ಅತಿವೇಗವಾಗಿ 500 ರನ್ ಬಾರಿಸಿದ ಸಾಧನೆ ಮಾಡಿದ ವೈಭವ್
ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಈ 15 ವರ್ಷದ ಹುಡುಗ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಪುಡಿ ಮಾಡಿದ್ದಾರೆ. ವೈಭವ್ ಕೇವಲ 222 ಎಸೆತಗಳಲ್ಲಿ 500 ರನ್ ಗಡಿ ದಾಟಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆ ಮುರಿದ ವೈಭವ್
ಈ ಹಿಂದೆ ಆಸ್ಟ್ರೇಲಿಯಾ ಮೂಲದ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ 260 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ವೈಭವ್ ಸೂರ್ಯವಂಶಿಯ ಆರ್ಭಟದ ಮುಂದೆ ಮ್ಯಾಕ್ಸಿ ರೆಕಾರ್ಡ್ ನುಚ್ಚುನೂರಾಗಿದೆ.
ಸದ್ಯ ಈ ಸೀಸನ್‌ನ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ವೈಭವ್‌ಗೆ 4ನೇ ಸ್ಥಾನ
ಇನ್ನು ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈವರೆಗೆ ಆಡಿದ ಏಳು ಪಂದ್ಯಗಳಿಂದ ಈ 15 ವರ್ಷದ ಆಟಗಾರ 254 ರನ್ ಗಳಿಸಿದ್ದಾರೆ. 78 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ. ವೈಭವ್ 36.28ರ ಸರಾಸರಿ ಮತ್ತು 220.86ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್
ಈ ಸೀಸನ್‌ನಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ ಭರ್ಜರಿ ಆರಂಭ ಪಡೆದಿದ್ದ ರಾಜಸ್ಥಾನ ರಾಯಲ್ಸ್, ಕಳೆದ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ರಾಯಲ್ಸ್ ಮತ್ತೆ ಗೆಲುವಿನ ಹಳಿಗೆ ಮರಳಿದ್ದು, 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ ಲಖನೌ 7 ಪಂದ್ಯಗಳಲ್ಲಿ 5 ಸೋಲು ಎರಡು ಗೆಲುವುಗಳೊಂದಿಗೆ ಕೇವಲ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಾರಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

