ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ 40 ರನ್‌ಗಳಿಂದ ಪರಾಭವಗೊಂಡಿತು. ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬ್ಯಾಟಿಂಗ್ ವೈಫಲ್ಯದಿಂದಾಗಿ ತಂಡ ಸತತ 4ನೇ ಸೋಲು ಅನುಭವಿಸಿತು. ಮಿಚೆಲ್‌ ಮಾರ್ಷ್‌ ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.

ಲಖನೌ: ರಿಷಭ್‌ ಪಂತ್‌ ನಾಯಕತ್ವದ ಲಖನೌ ತಂಡದ ಕಳಪೆ ಆಟ ಮುಂದುವರಿದಿದೆ. ಬುಧವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣದ ಲಖನೌ, 40 ರನ್‌ಗಳಿಂದ ಪರಾಭವಗೊಂಡಿತು. ತಂಡ ಸತತ 4ನೇ, ಒಟ್ಟಾರೆ 5ನೇ ಸೋಲಿನ ಮುಖಭಂಗಕ್ಕೆ ತುತ್ತಾಗಿದೆ. ರಾಯಲ್ಸ್‌ 7 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ್ದು, ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲು ಬ್ಯಾಟ್‌ ಮಾಡಿದ ರಾಯಲ್ಸ್‌ 6 ವಿಕೆಟ್‌ ನಷ್ಟದಲ್ಲಿ 159 ರನ್‌ ಕಲೆಹಾಕಿತು. ಜೈಸ್ವಾಲ್‌(22), ವೈಭವ್‌(8), ಧ್ರುವ್‌ ಜುರೆಲ್‌(0) ಅಬ್ಬರಿಸಲಿಲ್ಲ. ರಿಯಾನ್‌ ಪರಾಗ್(20), ಹೆಟ್ಮೇಯರ್‌(22) ಕೂಡಾ ಮಿಂಚಲು ವಿಫಲವಾದ ಬಳಿಕ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದ ಜಡೇಜಾ, 29 ಎಸೆತಕ್ಕೆ ಔಟಾಗದೆ 43 ರನ್‌ ಸಿಡಿಸಿದರು. ಫೆರಿಯೆರಾ 20, ಶುಭಂ ದುಬೆ 19 ರನ್‌ ಕೊಡುಗೆ ನೀಡಿದರು. ಶಮಿ, ಮೊಹ್ಸಿನ್‌, ಪ್ರಿನ್ಸ್‌ ಯಾದವ್‌ ತಲಾ 2 ವಿಕೆಟ್‌ ಕಿತ್ತರು.

ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಖನೌ

ಸ್ಪರ್ಧಾತ್ಮಕ ಗುರಿ ಪಡೆದ ಲಖನೌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆರಂಭಿಕ ನಾಲ್ವರಲ್ಲಿ ಆಯುಶ್‌ ಬದೋನಿ, ರಿಷಭ್‌ ಪಂತ್‌, ಮಾರ್ಕ್‌ರಮ್‌ ರನ್‌ ಖಾತೆಯನ್ನೇ ತೆರೆಯಲಿಲ್ಲ. ಮಿಚೆಲ್‌ ಮಾರ್ಷ್‌(55) ಏಕಾಂಗಿ ಹೋರಾಟ ತಂಡಕ್ಕೆ ನೆರವಾಗಲಿಲ್ಲ. ಪೂರನ್‌ 22 ರನ್‌ ಗಳಿಸಲು 25 ಎಸೆತ ತೆಗೆದುಕೊಂಡರು. ತಂಡ 18 ಓವರ್‌ನಲ್ಲಿ 119ಕ್ಕೆ ಆಲೌಟಾಯಿತು.

ಉಭಯ ತಂಡಗಳ ಸಂಕ್ಷಿಪ್ತ ಸ್ಕೋರ್‌: 

ರಾಜಸ್ಥಾನ 20 ಓವರ್‌ನಲ್ಲಿ 159/6 (ಜಡೇಜಾ ಔಟಾಗದೆ 43, ಜೈಸ್ವಾಲ್‌ 22, ಮೊಹ್ಸಿನ್‌ 2-17, ಪ್ರಿನ್ಸ್‌ 2-29), ಲಖನೌ 18 ಓವರ್‌ನಲ್ಲಿ 119/10 (ಮಾರ್ಷ್‌ 55, ಆರ್ಚರ್‌ 3-20, ಬ್ರಿಜೇಶ್‌ 2-18)

07ನೇ ಸೋಲು: ಲಖನೌ ಜೈಂಟ್ಸ್‌ ತಂಡ ತವರಿನಲ್ಲಿ ಸತತ 7ನೇ ಪಂದ್ಯದಲ್ಲೂ ಸೋಲು ಕಂಡಿದೆ.