ಹಿಂದಿ, ತೆಲುಗು, ತಮಿಳು ನಟರನ್ನು ಮೀರಿಸಿ ವಿಶ್ವದ ಅತಿ ಎತ್ತರದ ಕಟೌಟ್ ಹೊಂದಿದ ಕೀರ್ತಿ ಪಡೆದ ಕನ್ನಡಿಗ!
ಬೆಂಗಳೂರು (ಜು.19): ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಸಿನಿಮಾ ನಟರನ್ನು ಹಾಗೂ ನಟಿಯರನ್ನು ತೀವ್ರವಾಗಿ ಆರಾಧಿಸುವ ಅಭಿಮಾನಿಗಳಿದ್ದಾರೆ. ಆದರೆ, ನಟರ ಮೇಲಿನ ಅಭಿಮಾನ ಪ್ರದರ್ಶನ ಮಾಡಲು ಅವರ ಸಿನಿಮಾ ರಿಲೀಸ್ ಆದಾಗ ದೊಡ್ಡ ಕಟೌಟ್ ನಿರ್ಮಿಸಿ ಸಂಭ್ರಮಿಸುತ್ತಾರೆ. ಈವರೆಗೆ ಅತ್ಯಂತ ದೊಡ್ಡ ಕಟೌಟ್‌ಗಳನ್ನು ನಿರ್ಮಿಸುತ್ತಿದ್ದ ತೆಲುಗು, ತಮಿಳು ಸಿನಿಮಾ ನಾಯಕರನ್ನು ಮೀರಿಸಿ ಅತ್ಯಂತ ಎತ್ತರದ ಕಟೌಟ್ ಅನ್ನು ಹೊಂದಿರುವ ಕೀರ್ತಿಗೆ ಕನ್ನಡಿಗ ನಾಯಕನಟ ಭಾಜನರಾಗಿದ್ದಾರೆ.
ಬಾಲಕೃಷ್ಣ : ನಟ ಬಾಲಕೃಷ್ಣ ಅವರು ಎನ್‌ಟಿಆರ್ ಕಥಾನಾಯಕುಡು ಸಿನಿಮಾದಲ್ಲಿ ನಟಿಸಿದ ವೇಳೆ ಅವರ ಅಭಿಮಾನಿಗಳು 100 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು. ಇದು ದೇಶದ 8ನೇ ಅತಿ ಎತ್ತರದ ಕಟೌಟ್ ಎಂಬ ಖ್ಯಾತಿ ಪಡೆದಿದೆ.
ಮಹೇಶ್ ಬಾಬು: ತೆಲುಗು ಸಿನಿಮಾ ಇಂಡಸ್ಟ್ರಿಯ ಮತ್ತೊಬ್ಬ ನಟ ಪ್ರಿನ್ಸ್ ಮಹೇಶ್ ಬಾಬು ಅವರ 'ಆಗಡು' ಸಿನಿಮಾ ರಿಲೀಸ್ ಆದ ನಂತರ 100 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು. ಈ ಕಟೌಟ್ 8ನೇ ಅತಿ ಎತ್ತರದ ಕಟೌಟ್ ಎಂಬ ಖ್ಯಾತಿಯನ್ನು ಬಾಲಕೃಷ್ಣ ಅವರ ಕಟೌಟ್‌ನೊಂದಿಗೆ ಹಂಚಿಕೊಂಡಿದೆ.
ಜ್ಯೂನಿಯರ್ ಎನ್‌ಟಿಆರ್: ತೆಲುಗು ಚಿತ್ರರಂಗದ ಮತ್ತೊಬ್ಬ ನಟ ಜ್ಯೂನಿಯರ್ ಎನ್‌ಟಿಆರ್ ನಟನೆಯ ಅದುರ್ಸ್ ಸಿನಿಮಾ ಬಿಡುಗಡೆ ಆದ ವೇಲೆ ಅವರ ಅಭಿಮಾನಿಗಳು ಬರೋಬ್ಬರಿ 120 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು.
ವಿಜಯ್: ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ತಲಪತಿ ವಿಜಯ್ ಅವರ ಅಭಿಮಾನಿಗಳು ಸರ್ಕಾರ್ ಸಿನಿಮಾ ರಿಲೀಸ್ ವೇಳೆ 175 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು.
ಧನುಷ್: ತಮಿಳ್ ಸಿನಿಮಾ ರಂಗದ ಮತ್ತೊಬ್ಬ ನಟ ಧನುಷ್ ಅವರ ಮಾರಿ 2 ಸಿನಿಮಾ ರಿಲೀಸ್ ವೇಳೆ 180 ಅಡಿ ಎತ್ತರದ ಕಟೌಟ್ ನಿರ್ಮಿಸಿ ಸಂಭ್ರಮಿಸಿದ್ದರು.
ಅಜಿತ್ ಕುಮಾರ್: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರ ಅಭಿಮಾನಿಗಳು ಕೂಡ ನಾವು ಕಡಿಮೆಯೇನಿಲ್ಲ ಎಂದು ತೋರಿಸಲು ಬರೋಬ್ಬರಿ 190 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು.
ಸೂರ್ಯ : ಮತ್ತೊಬ್ಬ ದಕ್ಷಿಣ ಭಾರತದ ಪ್ರಸಿದ್ಧ ನಟ ಸೂರ್ಯ ಅವರ ಎನ್‌ಜಿಕೆ ಸಿನಿಮಾ ಬಿಡುಗಡೆಯಾದ ವೇಳೆ 215 ಅಡಿ ಎತ್ತರದ ಕಟೌಟ್ ನಿರ್ಮಿಸುವ ಮೂಲಕ ಅಭಿಮಾನವನ್ನು ತೋರಿಸಿದ್ದರು.
ರಾಕಿಂಗ್ ಸ್ಟಾರ್ ಯಶ್ : ಕರ್ನಾಟಕದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರ ಕೆಜಿಎಫ್ ಸಿನಿಮಾ ರಿಲೀಸ್ ವೇಳೆ ಅವರ ಡೈ ಹಾರ್ಡ್ ಅಭಿಮಾನಿಗಳು ಬರೋಬ್ಬರಿ 217 ಅಡಿ ಎತ್ತರದ ಕಟೌಟ್ ಅನ್ನು ನಿರ್ಮಿಸುವ ಮೂಲಕ ಅಭಿಮಾನವನ್ನು ತೋರಿಸಿದ್ದಾರೆ. ಈ ಮೂಲಕ ಜಗತ್ತಿನಲ್ಲಿಯೇ ಅತಿ ಎತ್ತರದ ಕಟೌಟ್ ಹೊಂದಿದ ಖ್ಯಾತಿಯನ್ನು ನಟ ಯಶ್ ಹೊಂದಿದ್ದಾರೆ.
ಕಿಚ್ಚ ಸುದೀಪ್ : ಭಾರತೀಯ ಚಿತ್ರರಂಗದಲ್ಲಿ ಅತಿ ಎತ್ತರದ ಕಟೌಟ್ ಹೊಂದಿರುವುದು ಒಂದೆಡೆಯಾದರೆ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿರುವ 716 ಅಡಿ ಎತ್ತರದ ಬುರ್ಜ್ ಖಲೀಫಾ ಟವರ್ ಮೇಲೆ ಕಿಚ್ಚ ಸುದೀಪ್ ಅವರ ವಿಡಿಯೋ ಮತ್ತು ಭಾವಚಿತ್ರ ಪ್ರದರ್ಶನ ಮಾಡಲಾಗಿದೆ. ಈ ಮೂಲಕ ಅತ್ಯಂತ ಎತ್ತರದ ಮತ್ತು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡ ಖ್ಯಾತಿಯನ್ನು ಸುದೀಪ್ ತಮ್ಮದಾಗಿಸಿಕೊಂಡಿದ್ದಾರೆ.