ಬಾಕ್ಸ್‌ಆಫೀಸ್‌ನಲ್ಲಿ ಮಕಾಡೆ ಮಲಗಿದ ಕಂಗುವಾ: ನಿರ್ಮಾಪಕರ ನೆರವಿಗೆ ಮುಂದೆ ಬಂದ ನಟ ಸೂರ್ಯ
ತಮಿಳಿನ ಖ್ಯಾತ ನಟ ಸೂರ್ಯ ನಟಿಸಿದ್ದ ಬಹುನಿರೀಕ್ಷಿತ 'ಕಂಗುವಾ' ಸಿನಿಮಾ ನಿರೀಕ್ಷಿತಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಹೀಗಾಗಿ ಭಾರೀ ಪ್ರಮಾಣದಲ್ಲಿ ಹಣ ಸುರಿದಿದ್ದ ನಿರ್ಮಾಪಕರು ನಷ್ಟ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಸೂರ್ಯ ಅವರು ನಿರ್ಮಾಪಕರ ನೆರವಿಗೆ ಮುಂದೆ ಬಂದಿದ್ದಾರೆ.
ತಮಿಳಿನ ಬಾಹುಬಲಿ ಎಂಬ ಪ್ರಚಾರ ಪಡೆದ ಕಂಗುವಾ ಚಿತ್ರವನ್ನು ಶಿವ ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ನಿರ್ದೇಶಿಸಿದ್ದಾರೆ. ಸೂರ್ಯ ಕಂಗುವ ಮತ್ತು ಫ್ರಾನ್ಸಿಸ್ ಎಂಬ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದಿನ ಯೋಧನಾಗಿ ಸೂರ್ಯ ಅವರ ಲುಕ್ ಮತ್ತು ಮ್ಯಾನರಿಸಂಗಳು ಗಮನ ಸೆಳೆದವು. ಟ್ರೇಲರ್ ಕೂಡ ಉತ್ತಮವಾಗಿತ್ತು.
ಸುಮಾರು 300 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಕಂಗುವಾ ಚಿತ್ರಕ್ಕಾಗಿ ಸೂರ್ಯ ಎರಡು ವರ್ಷಗಳ ಕಾಲ ಶ್ರಮಪಟ್ಟಿದ್ದರು. ಆದರೆ ಚಿತ್ರ ಮಾತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಮೊದಲ ಪ್ರದರ್ಶನದಿಂದಲೇ ನಕಾರಾತ್ಮಕ ಟೀಕೆಗಳು ಕೇಳಿಬಂದವು. ಚಿತ್ರದಲ್ಲಿ ಒಳ್ಳೆಯ ಕಥೆಯಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟರು. ಚಿತ್ರದ ಉದ್ದ, ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಹೊಡೆತ ನೀಡಿತು.
ಕಂಗುವಾ ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನ ಮುಕ್ತಾಯಗೊಂಡಿದೆ. ವಿಶ್ವಾದ್ಯಂತ ಕೇವಲ 100 ಕೋಟಿ ಗಳಿಕೆ ಕಂಡಿದೆ. ತಮಿಳುನಾಡಿನಲ್ಲೂ ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ನಿರ್ಮಾಪಕರಿಗೆ ಸುಮಾರು 130 ಕೋಟಿ ನಷ್ಟವಾಗಿದೆ ಎನ್ನಲಾಗಿದೆ. ಕೆ.ಈ. ಜ್ಞಾನವೇಲ್ ರಾಜ ಚಿತ್ರವನ್ನು ನಿರ್ಮಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿತ್ತು.
ಸೂರ್ಯ ಮತ್ತು ಜ್ಞಾನವೇಲ್ ರಾಜ ನಡುವೆ ಉತ್ತಮ ಬಾಂಧವ್ಯವಿದೆ. ಕಂಗುವಾ ಚಿತ್ರದಿಂದ ಜ್ಞಾನವೇಲ್ ರಾಜರಿಗೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಸೂರ್ಯ ಅವರಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ. ಯಾವುದೇ ಸಂಭಾವನೆ ಪಡೆಯದೆ ಮತ್ತೊಂದು ಚಿತ್ರ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಚಿತ್ರಮಂದಿರಗಳಲ್ಲಿ ಕಂಗುವಾ ನಿರೀಕ್ಷಿತ ಯಶಸ್ಸು ಕಾಣದ ಕಾರಣ ನಿಗದಿತ ಸಮಯಕ್ಕಿಂತ ಮುಂಚೆಯೇ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ 8 ರಿಂದ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ಸೂರ್ಯ ಪ್ರಸ್ತುತ ತಮ್ಮ 44ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ.
ಸೂರ್ಯ ಅವರ 45ನೇ ಚಿತ್ರವನ್ನು ಆರ್.ಜೆ. ಬಾಲಾಜಿ ನಿರ್ದೇಶಿಸಲಿದ್ದಾರೆ. ಬಾಲಾಜಿ ನಟ ಕೂಡ. ಸೂರ್ಯ ತಮ್ಮ ಕುಟುಂಬ ಸಮೇತರಾಗಿ ಚೆನ್ನೈಯಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ.