- Home
- Entertainment
- Cine World
- ಖ್ಯಾತ ಗಾಯಕಿ ಮಂಗ್ಲಿ ಬರ್ತಡೇ ಪಾರ್ಟೀಲಿ ಗಾಂಜಾದ ಮತ್ತೇ ಗಮ್ಮತ್ತು! ಮಿತಿ ಮೀರಿದ್ದಕ್ಕೆ ಬಂತು ಆಪತ್ತು!
ಖ್ಯಾತ ಗಾಯಕಿ ಮಂಗ್ಲಿ ಬರ್ತಡೇ ಪಾರ್ಟೀಲಿ ಗಾಂಜಾದ ಮತ್ತೇ ಗಮ್ಮತ್ತು! ಮಿತಿ ಮೀರಿದ್ದಕ್ಕೆ ಬಂತು ಆಪತ್ತು!
ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿವೆ. ಹೈದರಾಬಾದ್‌ನ ಹೊರವಲಯದಲ್ಲಿ ನಡೆದ ಪಾರ್ಟಿಯಲ್ಲಿ ಪೊಲೀಸರು ದಾಳಿ ನಡೆಸಿ, ಗಾಂಜಾ ಮತ್ತು ವಿದೇಶಿ ಮದ್ಯ ವಶಪಡಿಸಿಕೊಂಡಿದ್ದಾರೆ. ಎಲ್ಲರನ್ನು ವಶಕ್ಕೆ ಪಡೆದು ಮಾದಕ ದ್ರವ್ಯ ಪರೀಕ್ಷೆ ನಡೆಸಲಾಗಿದೆ.

ತೆಲುಗು ಚಿತ್ರರಂಗದಲ್ಲಿ ಮತ್ತೊಮ್ಮೆ ಮಾದಕ ದ್ರವ್ಯಗಳ ಸದ್ದು ಕೇಳಿಬಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಮಾದಕ ದ್ರವ್ಯಗಳು, ಗಾಂಜಾ ಮತ್ತು ವಿದೇಶಿ ಮದ್ಯ ಪತ್ತೆಯಾಗಿದೆ. ಈ ಘಟನೆ ಮಂಗಳವಾರ ರಾತ್ರಿ ಹೈದರಾಬಾದ್‌ನ ಹೊರವಲಯ ಚೇವೆಲ್ಲ ಮಂಡಲದ ತ್ರಿಪುರ ರೆಸಾರ್ಟ್‌ನಲ್ಲಿ ನಡೆದಿದೆ.
ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಆಚರಣೆಗಾಗಿ ತ್ರಿಪುರ ರೆಸಾರ್ಟ್‌ನಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಿತ್ರರಂಗ ಮತ್ತು ರಾಜಕೀಯ ವಲಯದ ಪ್ರಮುಖರು, ಯುವ ತಾರೆಯರು ಸೇರಿದಂತೆ ಹಲವರು ಆಗಮಿಸಿದ್ದರು. ಆದರೆ, ಈ ಪಾರ್ಟಿಯಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸ್ಥಳೀಯ ಪೊಲೀಸರು ರಾತ್ರಿ ದಾಳಿ ನಡೆಸಿದರು.
ಪೊಲೀಸರ ದಾಳಿಯಲ್ಲಿ ಹೆಚ್ಚಿನ ಪ್ರಮಾಣದ ಗಾಂಜಾ, ವಿವಿಧ ರೀತಿಯ ವಿದೇಶಿ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾರ್ಟಿಯಲ್ಲಿದ್ದ ಹಲವರನ್ನು ವಶಕ್ಕೆ ಪಡೆದು ಮಾದಕ ದ್ರವ್ಯ ಪರೀಕ್ಷೆ ನಡೆಸಲಾಯಿತು. ಕೆಲವರಿಗೆ ಗಾಂಜಾ, ಇನ್ನು ಕೆಲವರಿಗೆ ಇತರ ಮಾದಕ ದ್ರವ್ಯಗಳ ಪರೀಕ್ಷೆಗಳು ಪಾಸಿಟಿವ್ ಎಂದು ತಿಳಿದುಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪಾರ್ಟಿಯಲ್ಲಿ ಯಾರಾರು ಭಾಗವಹಿಸಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮಂಗ್ಲಿ ಮಾದಕ ದ್ರವ್ಯ ಸೇವಿಸಿದ್ದಾರೋ ಇಲ್ಲವೋ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ದಾಳಿಯಲ್ಲಿ ಹಲವು ಪ್ರಮುಖರ ಮಕ್ಕಳೂ ಇದ್ದರು ಎನ್ನಲಾಗಿದೆ. ಮಾದಕ ದ್ರವ್ಯಗಳನ್ನು ಪೂರೈಸಿದವರ ಮೇಲೆ ದೃಷ್ಟಿ ನೆಟ್ಟಿರುವ ಪೊಲೀಸರು, ಈ ಮಾದಕ ದ್ರವ್ಯ ಜಾಲದ ಹಿಂದಿರುವ ಮೂಲ ಗ್ಯಾಂಗ್ ಅನ್ನು ಹಿಡಿಯಲು ತನಿಖೆ ತೀವ್ರಗೊಳಿಸಿದ್ದಾರೆ.
ಈ ಘಟನೆಯಿಂದ ಟಾಲಿವುಡ್‌ನಲ್ಲಿ ಮತ್ತೆ ಮಾದಕ ದ್ರವ್ಯಗಳ ವಿಚಾರದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಹಿಂದೆ ಮಾದಕ ದ್ರವ್ಯ ಪ್ರಕರಣಗಳಿಂದ ವಿವಾದಕ್ಕೆ ಸಿಲುಕಿದ್ದ ಚಿತ್ರರಂಗ ಮತ್ತೊಮ್ಮೆ ಇಂತಹ ಆರೋಪಗಳಿಂದ ಸುದ್ದಿಯಲ್ಲಿದೆ. ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಪಾರ್ಟಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.
ಕನ್ನಡದಲ್ಲಿ ಮಂಗ್ಲಿ ಹಾಡು ಕಮಾಲ್:
ಇನ್ನು ತೆಲುಗು ಮೂಲದ ಗಾಯಕಿ ಮಂಗ್ಲಿ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಕಮಾಲ್ ಮಾಡಿದ್ದಾರೆ. ಕನ್ನಡದಲ್ಲಿಯೂ ಕಳೆದ 4 ವರ್ಷಗಳಿಂದ ಹಾಡುಗಳನ್ನು ಹಾಡುತ್ತಿದ್ದು, ಈವರೆಗೆ 9 ಹಾಡುಗಳನ್ನು ಹಾಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ.. ಹಾಡು ಭಾರೀ ಹಿಟ್ ಆಗಿತ್ತು.
ಇದಾದ ನಂತರ ಏಕ್ ಲವ್ ಯಾ ಸಿನಿಮಾದ ಎಣ್ಣೆಗು, ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ..., ವೇದ ಸಿನಿಮಾದಲ್ಲಿ ಗಿಲ್ಲಕ್ಕೋ ಶಿವ..., ಕಾಟೇರ ಸಿನಿಮಾದ ಪಸಂದಾಗವ್ನೆ..., ದಿಲ್ ಪಸಂದ್ ಹಾಡಿನಲ್ಲಿ ರಾಮ ರಾಮ ರಾಮ..., ತ್ರಿಬಲಗ್ ರೈಡಿಂಗ್ ಸಿನಿಮಾದಲ್ಲಿ ಯಟ್ಟ ಯಟ್ಟ ಯಟ್ಟ.., ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ... ಹಾಡುಗಳನ್ನು ಹಾಡಿದ್ದಾರೆ.
ಬೆಂಗಳೂರಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದ ನಟಿ ಹೇಮಾ:
ಕಳೆದ ವರ್ಷವಷ್ಟೇ ಟಾಲಿವುಡ್ ನಟಿ ಹೇಮಾ ಅವರು ಬೆಂಗಳೂರಿನ ಹೊರವಲಯದಲ್ಲಿ ಉದ್ಯಮಿಯೊಬ್ಬರು ಆಯೋಜನೆ ಮಾಡಲಾಗಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆಗ ನಟಿ ಹೇಮಾ ಅವರು ಡ್ರಗ್ಸ್ ಸೇವನೆ ಮಾಡಿದ್ದರು. ನಂತರ ಪೊಲೀಸ್ ಇಲಾಖೆ ದಿಕ್ಕು ತಪ್ಪಿಸಲು ತಾನು ಬೆಂಗಳೂರಿಗೆ ಬಂದೇ ಇಲ್ಲ, ಹೈದರಾಬಾದ್‌ನಲ್ಲಿದ್ದೇನೆ ಎಂದೆಲ್ಲಾ ವಿಡಿಯೋ ವೈರಲ್ ಮಾಡಿ ಮತ್ತಷ್ಟು ವೈರಲ್ ಆಗಿದ್ದರು. ಇದಾದ ನಂತರ ಮೆಡಿಕಲ್ ಟೆಸ್ಟ್‌ನಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿತ್ತು. ಡ್ರಗ್ಸ್ ಸೇವನೆ ಕೇಸಿನಲ್ಲಿ ಇನ್ನೂ ಬೆಂಗಳೂರಿಗೆ ಅಲೆದಾಡುತ್ತಿದ್ದಾರೆ.