ಸದ್ದು ಸುದ್ದಿ ಇಲ್ಲದೆ ಬಹುಕಾಲದ ಗೆಳತಿಯೊಂದಿಗೆ ವಿವಾಹವಾದ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್!
ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ಅವರು ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಅವರನ್ನು ವಿವಾಹವಾಗಿದ್ದಾರೆ. ಖಾಸಗಿ ಸಮಾರಂಭದಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ನೆರವೇರಿದೆ. ಮದುವೆ ಬಗ್ಗೆ ಯಾವುದೇ ಸುಳಿವಿಲ್ಲದೆ ಮದುವೆಯಾಗಿದ್ದು, ಫೋಟೋವನ್ನು ಹಂಚಿಕೊಂಡ ಬಳಿಕವಷ್ಟೇ ಅವರ ಅಭಿಮಾನಿಗಳಿಗೆ ಮದುವೆಯಾಗಿರುವ ವಿಚಾರ ತಿಳಿದಿದೆ. ಈ ಮೂಲಕ ಅರ್ಮಾನ್ ಸಪ್ರೈಸ್ ನೀಡಿದ್ದಾರೆ.
ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ (Armaan Malik) ಅವರು ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜತೆ ಮದುವೆಯಾಗಿರುವ ಫೋಟೋ ಹಂಚಿಕೊಂಡಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ತೀರಾ ಖಾಸಗಿಯಾಗಿ ಇವರಿಬ್ಬರ ವಿವಾಹ ನೆರವೇರಿದೆ. ಮದುವೆಯಲ್ಲಿ ಆಪ್ತರಿಗಷ್ಟೇ ಆಹ್ವಾನವಿತ್ತು.
ಜನಪ್ರಿಯ ಫ್ಯಾಷನ್ ಡಿಸೈನರ್ ಜೊತೆಗೆ ಮಾಡೆಲ್ ಕೂಡ ಆಗಿರುವ ಆಶ್ನಾ ಶ್ರಾಫ್ ಅವರ ಜೊತೆಗೆ ಗಾಯಕ ಆಗಸ್ಟ್ 28ರಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದು, ತೂ ಹೀ ಮೇರಾ ಘರ್ (ನೀನೇ ನನ್ನ ಮನೆ) ಎಂದು ಬರೆದುಕೊಂಡಿದ್ದಾರೆ.
ಆಶ್ನಾ ಕಿತ್ತಳೆ ಬಣ್ಣದ ಲೆಹೆಂಗಾದಲ್ಲಿ ಅತ್ಯಂತ ಸುಂದರವಾಗಿ ಕಾಣಸಿದರೆ ಅರ್ಮಾನ್ ತಿಳಿ ಬಣ್ಣದ ಶೆರ್ವಾನಿ ಸೂಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವೇ ಹರಿಸಿದ್ದಾರೆ.
ಆಶ್ನಾ ಶ್ರಾಫ್ ಜನಪ್ರಿಯ ಪ್ಯಾಷನ್ ಡಿಸೈನರ್, ಮಾಡೆಲ್ ಮಾತ್ರವಲ್ಲ ಬ್ಯೂಟಿ ಬ್ಲಾಗರ್ ಮತ್ತು ಯೂಟ್ಯೂಬರ್ ಕೂಡ ಹೌದು. 2023 ರ ವರ್ಷದ ಕಾಸ್ಮೋಪಾಲಿಟನ್ ಐಷಾರಾಮಿ ಫ್ಯಾಷನ್ ಪ್ರಭಾವಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಹಿಂದಿ, ತೆಲುಗು, ಇಂಗ್ಲಿಷ್, ಬೆಂಗಾಲಿ, ಕನ್ನಡ, ಮರಾಠಿ, ತಮಿಳು, ಗುಜರಾತಿ, ಪಂಜಾಬಿ, ಉರ್ದು ಮತ್ತು ಮಲಯಾಳಂ ಮುಂತಾದ ಭಾಷೆಗಳಲ್ಲಿ ಹಾಡಿ ಜನಪ್ರಿಯರಾಗಿದ್ದಾರೆ. ಈವರೆಗೆ 300ಕ್ಕೂ ಹೆಚ್ಚು ಹಾಡುಗಳು ಮತ್ತು 100ಕ್ಕೂ ಹೆಚ್ಚು ಜಿಂಗಲ್ಸ್ ಹಾಡಿದ್ದಾರೆ. ಸಂಗೀತ ಸಂಯೋಜಕ ಅಮಲ್ ಮಲಿಕ್ ಅವರ ಸಹೋದರ ಅರ್ಮಾನ್ ಮಲಿಕ್ . 2020ರಲ್ಲಿ, ಮಲಿಕ್ ಟಾಪ್ ಟ್ರಿಲ್ಲರ್ ಗ್ಲೋಬಲ್ ಬಿಲ್‌ಬೋರ್ಡ್ ಚಾರ್ಟ್‌ಗಳಲ್ಲಿ ಎರಡು ಬಾರಿ ನಂ. 1 ಸ್ಥಾನ ಗಳಿಸಿದ ಮೊದಲ ಕಲಾವಿದ.
ಕನ್ನಡಲ್ಲಿ ಮುಂಗಾರು ಮಳೆ 2 ಚಿತ್ರದ ಸರಿಯಾಗಿ ನೆನಪಿದೆ ನನಗೆ, ಚಕ್ರವರ್ತಿ ಸಿನೆಮಾದ ಒಂದು ಮಳೆಬಿಲ್ಲು ಒಂದು ಮಳೆ ಮೋಡ, ಎಕ್ ಲವ್ ಯಾ ಚಿತ್ರದ ಯಾರೇ ಯಾರೇ ಸಾಂಗ್ ಸೇರಿದಂತೆ ಕನ್ನಡದ 50ಕ್ಕೂ ಹೆಚ್ಚು ಹಾಡುಗಳಿಗೆ ಅರ್ಮಾನ್ ದನಿಯಾಗಿದ್ದು, ಕನ್ನಡದಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.