ಲೈಟ್ಸ್, ಕ್ಯಾಮೆರಾ,ಆಕ್ಷನ್ ಎಂದೇ ಬಿಟ್ರು ನಟಿ ಅಲ್ಲ… ನಿರ್ದೇಶಕಿ ರಂಜನಿ ರಾಘವನ್
ನಟಿಯಾಗಿ ಚಿರಪರಿಚಿತರಾಗಿದ್ದ ರಂಜನಿ ರಾಘವನ್ ಇದೀಗ ನಿರ್ದೇಶಕಿಯಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಈಗಾಗಲೇ ತಮ್ಮ ಸಿನಿಮಾ ಶೂಟಿಂಗ್ ಕೂಡ ಆರಂಭಿಸಿದ್ದಾರೆ.

ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮೆಚ್ಚಿನ ನಟಿಯಾಗಿ ಗುರುತಿಸಿಕೊಂಡವರು ರಂಜನಿ ರಾಘವನ್ (RRanjani Raghavan). ಇವರ ಅದ್ಭುತ ನಟನೆಯನ್ನು ಮೆಚ್ಚಿಕೊಳ್ಳದವರೇ ಇಲ್ಲ, ಅಷ್ಟೊಂದು ಇಷ್ಟಪಟ್ಟಿದ್ರು ಜನ ಇವರ ನಟನೆಯನ್ನು.

ಪುಟ್ಟ ಗೌರಿಯ ಮದುವೆ (Putta Gowriya Maduve)ಧಾರಾವಾಹಿಯಲ್ಲಿ ಗೌರಿಯ ಪಾತ್ರಕ್ಕೆ ಜೀವ ತುಂಬುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ರಂಜನಿ ರಾಘವನ್, ನಂತರ ತಮಿಳು ಧಾರಾವಾಹಿಯಲ್ಲೂ ಗುರುತಿಸಿಕೊಂಡರು. ಇವರಿಗೆ ಹೆಚ್ಚು ಜನಪ್ರಿಯತೆ ಹೆಸರು ತಂದು ಕೊಟ್ಟಿದ್ದು, ಕನ್ನಡತಿ ಸೀರಿಯಲ್.
ಕನ್ನಡತಿ ಧಾರಾವಾಹಿಯಲ್ಲಿ (Kannadathi Serial) ಕನ್ನಡ ಟೀಚರ್ ಭುವಿ ಪಾತ್ರಕ್ಕೆ ಬಣ್ಣ ಹಚ್ಚಿ, ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಭುವಿ ಮತ್ತು ಹರ್ಷ ಪಾತ್ರಗಳನ್ನು ಜನರು ಇಂದಿಗೂ ಇಷ್ಟ ಪಡ್ತಾರೆ ಅಂದ್ರೆ ಅದಕ್ಕೆ ಅವರ ನಟನೆಯೇ ಕಾರಣ.
ಬೆಳ್ಳಿ ತೆರೆಯಲ್ಲೂ ಅದೃಷ್ಟ ಪರೀಕ್ಷಿಸಿದ್ದ ರಂಜನಿ ರಾಘವನ್ ರಾಜಹಂಸ, ಸತ್ಯಂ, ಕಾಂಗಾರೂ, ಕ್ಷಮಿಸಿ ನಮ್ಮ ಖಾತೆಯಲ್ಲಿ ಹಣವಿಲ್ಲ, ಮತ್ತೊಂದೆರಡು ಸಿನಿಮಾದಲ್ಲೂ ನಟಿಸಿದ್ದರು. ಅಷ್ಟೇ ಯಾಕೆ ಇವರೊಬ್ಬ ಅದ್ಭುತ ಲೇಖಕಿಯೂ ಹೌದು. ಈಗಾಗಲೆ ಇವರು ಬರೆದಿರುವ ಎರಡು ಪುಸ್ತಕಗಳು ಬಿಡುಗಡೆಯಾಗಿವೆ. ಇದೀಗ ಹೊಸ ಸಾಹಕ್ಕೆ ನಟಿ ಕೈ ಹಾಕಿದ್ದಾರೆ.
ಇದೇ ಜನವರಿ ಆರಂಭದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದ ರಂಜನಿ ರಾಘವನ್ ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ (director)ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ,ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ ಎಂದಿದ್ದರು.
ಅಲ್ಲದೇ ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್ (Ilayaraja). 1000 ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ ಎನ್ನುತ್ತಾ, ಸಂಗೀತ ಮಾಂತ್ರಿಕ ಇಳಯರಾಜ ಅವರು ರಂಜನಿ ರಾಘವನ್ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬರೋದಾಗಿ ತಿಳಿಸಿದ್ದರು. ಅಷ್ಟೇ ಅಲ್ಲ ಅವರ ಜೊತೆ ಫೋಟೊ ಕೂಡ ಶೇರ್ ಮಾಡಿದ್ದರು ರಂಜನಿ.
ಇದೀಗ ರಂಜನಿ ಹೊಸದಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದು, ನಿರ್ದೇಶಕಿಯಾಗಿ ಮೊದಲ ಬಾರಿಗೆ ಲೈಟ್ ಕ್ಯಾಮೆರಾ, ಆಕ್ಷನ್ ಹೇಳುವ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳೋದಕ್ಕೂ ಕೂಡ ರೆಡಿಯಾಗಿದ್ದಾರೆ ರಂಜನಿ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊ ಜೊತೆಗೆ ಒಂದು ಕಥೆ, ಒಂದು ಕನಸು, ಒಂದೂವರೆ ವರ್ಷ, ನೂರಾರು ಅನುಭವಗಳು. ನಿರ್ದೇಶಕಿಯಾಗಿ ನಮ್ಮ ಮೊದಲ ಸಿನಿಮಾ updates ನಿಮ್ಮೊಂದಿಗೆ ಹಂಚಿಕೊಳ್ಳೋದಕ್ಕೆ ಸಖತ್ excited ಆಗಿದ್ದೇನೆ. ನಾಳೆ ಲೈವ್ ಬರ್ತೇನೆ, ನೇರವಾಗಿ ಮಾತನಾಡೋಣ ಎಂದು ತಿಳಿಸಿದ್ದಾರೆ ರಂಜನಿ ರಾಘವನ್.