ನನ್ನ ಮಗಳಿಗೆ ನಾನು ನೀಡುವ ದೊಡ್ಡ ಉಡುಗೊರೆ ಅಂದ್ರೆ 'ಪ್ರೈವೈಸಿ' ಎಂದ ನಟ ರಾಮ್ ಚರಣ್: ಯಾಕೆ ಗೊತ್ತಾ?
ಹತ್ತು ವರ್ಷಗಳ ನಂತರ ಹುಟ್ಟಿದ ಮುದ್ದು ಮಗಳು ಕ್ಲಿನ್ ಕಾರಾ ಬಗ್ಗೆ ನಟ ರಾಮ್ ಚರಣ್ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸಿರುವ ಗೇಮ್ ಚೇಂಜರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ದೀರ್ಘ ಕಾಲದ ನಂತರ ರಾಮ್ ಚರಣ್ ಅವರಿಂದ ಬರುತ್ತಿರುವ ಚಿತ್ರ ಇದಾಗಿದೆ. ಹೀಗಾಗಿ ನಿರೀಕ್ಷೆಗಳು ದೊಡ್ಡದಾಗಿವೆ. ತೆಲುಗಿನಲ್ಲಿ ಈ ಚಿತ್ರಕ್ಕೆ ಯಾವುದೇ ಪೈಪೋಟಿ ಇಲ್ಲದಿರಬಹುದು. ಆದರೆ ಉತ್ತರ ಭಾರತದಲ್ಲಿ ಅಷ್ಟೊಂದು ಪ್ರಚಾರ ಮಾಡಿಲ್ಲ. ಹಾಗಾಗಿ ಗಳಿಕೆ ಹೇಗಿರುತ್ತದೆ ಎಂದು ಕಾದು ನೋಡಬೇಕು.
ರಾಮ್ ಚರಣ್ ಇತ್ತೀಚೆಗೆ ಬಾಲಕೃಷ್ಣ ನಿರೂಪಣೆ ಮಾಡುತ್ತಿರುವ ಅನ್‌ಸ್ಟಾಪಬಲ್ ಸೀಸನ್ 4ರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಮ್ ಚರಣ್ ಅನೇಕ ವಿಷಯಗಳನ್ನು ಮನಬಿಚ್ಚಿ ಹಂಚಿಕೊಂಡರು. ಹತ್ತು ವರ್ಷಗಳ ನಂತರ ಹುಟ್ಟಿದ ಮುದ್ದು ಮಗಳು ಕ್ಲಿನ್ ಕಾರಾ ಬಗ್ಗೆ ಚರಣ್ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕ್ಲಿನ್ ಕಾರಾ ತನ್ನನ್ನು ಯಾವಾಗ 'ಅಪ್ಪ' ಎಂದು ಕರೆಯುತ್ತಾಳೋ ಆವಾಗ ಜಗತ್ತಿಗೆ ಪರಿಚಯಿಸುತ್ತೇನೆ ಎಂದು ರಾಮ್ ಚರಣ್ ಹೇಳಿದ್ದು ಗೊತ್ತೇ ಇದೆ. ಇಲ್ಲಿಯವರೆಗೆ ಚರಣ್ ಮತ್ತು ಉಪಾಸನ ದಂಪತಿಗಳು ತಮ್ಮ ಮಗಳ ಮುಖವನ್ನು ಜಗತ್ತಿಗೆ ತೋರಿಸಿಲ್ಲ.
ಕ್ಲಿನ್ ಕಾರಾ ಮುಖ ತೋರಿಸದಿರಲು ಬಲವಾದ ಕಾರಣವಿದೆಯಂತೆ. ರಾಮ್ ಚರಣ್ ಮಾತನಾಡಿ, ನಾನು ನನ್ನ ಬಾಲ್ಯವನ್ನು ಸರಿಯಾಗಿ ಆನಂದಿಸಲು ಸಾಧ್ಯವಾಗಲಿಲ್ಲ. ಶಾಲೆಯಲ್ಲಿ ಮಾತ್ರವಲ್ಲ, ಎಲ್ಲಿಗೆ ಹೋದರೂ ಎಲ್ಲರೂ ಗುರುತು ಹಿಡಿಯುತ್ತಿದ್ದರು. ಹೀಗಾಗಿ ಖಾಸಗಿತನ ಇರಲಿಲ್ಲ. ಖಾಸಗಿತನ ಇಲ್ಲದಿರುವುದು ಭಾರವೆನಿಸುತ್ತಿತ್ತು. ನನ್ನ ಮಗಳಿಗೆ ಆ ಭಾರ ಇರಬಾರದು. ನಾನು ನನ್ನ ಮಗಳಿಗೆ ನೀಡುವ ದೊಡ್ಡ ಉಡುಗೊರೆ ಖಾಸಗಿತನ ಎಂದು ರಾಮ್ ಚರಣ್ ತಿಳಿಸಿದ್ದಾರೆ.
ಕ್ಲಿನ್ ಕಾರಾ ಈಗ 'ಅಮ್ಮ' ಎಂದು ಕರೆಯಲು ಪ್ರಾರಂಭಿಸಿದ್ದಾಳೆ ಎಂದು ರಾಮ್ ಚರಣ್ ತಿಳಿಸಿದ್ದಾರೆ. ಉಪಾಸನ ಮತ್ತು ರಾಮ್ ಚರಣ್ 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಸಂಕ್ರಾಂತಿಗೆ ಗೇಮ್ ಚೇಂಜರ್ ಜೊತೆಗೆ ಬಾಲಯ್ಯರ ಡಾಕು ಮಹಾರಾಜ ಮತ್ತು ವೆಂಕಟೇಶ್ ಅವರ 'ಸಂಕ್ರಾಂತಿಗೆ ಬರುತ್ತಿದ್ದೇವೆ' ಚಿತ್ರಗಳು ಬಿಡುಗಡೆಯಾಗುತ್ತಿವೆ.