ಲವ್ ಸ್ಟೋರಿ ಬಿಚ್ಚಿಟ್ಟ ನಾಗಚೈತನ್ಯ-ಶೋಭಿತಾ, ಮುಂಬೈನಲ್ಲಿ ಮೊದಲ ಭೇಟಿ, ಕರ್ನಾಟಕದ ಪಾರ್ಕ್‌ನಲ್ಲಿ ಸುತ್ತಾಟ!
ನಾಗ ಚೈತನ್ಯ ಮತ್ತು ಶೋಭಿತ ಧೂಳಿಪಾಳ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಸಿ, ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು. ಮುಂಬೈನಲ್ಲಿ ಮೊದಲ ಭೇಟಿ, ಕರ್ನಾಟಕದಲ್ಲಿ ಸುತ್ತಾಟ, ಲಂಡನ್‌ನಲ್ಲಿ ಹುಟ್ಟುಹಬ್ಬದ ಆಚರಣೆ, ಮತ್ತು ಗೋವಾದಲ್ಲಿ ಮದುವೆ ಪ್ರಸ್ತಾಪದೊಂದಿಗೆ ಅವರ ಪ್ರೇಮಕಥೆ ಸಾಗಿದೆ.
ನಾಗ ಚೈತನ್ಯ ಮತ್ತು ಶೋಭಿತ ಧೂಳಿಪಾಳ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ವರ್ಷಗಳ ಕಾಲ ರಹಸ್ಯವಾಗಿ ಪ್ರೀತಿಸಿದ ಈ ಜೋಡಿ ಕೊನೆಗೂ ತಮ್ಮ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಹೈದರಾಬಾದ್‌ನಲ್ಲಿ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹವಾದ ನಂತರ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂಪರ್ಕ ಆರಂಭವಾಯ್ತು ಎಂದು ಬಹಿರಂಗಪಡಿಸಿದ್ದಾರೆ.
2021ರಲ್ಲಿ ಸಮಂತಾ ಜೊತೆ ನಾಗ ಚೈತನ್ಯ ವಿಚ್ಛೇದನ ಪಡೆದರು. ಈ ಸುದ್ದಿ ಹೆಚ್ಚಿನವರಿಗೆ ಶಾಕ್ ನೀಡಲಿಲ್ಲ. ವಿಚ್ಛೇದನದ ನಂತರ ಚೈತನ್ಯ ಶೋಭಿತ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ವಿದೇಶದಲ್ಲಿ ಚೈತನ್ಯ ಮತ್ತು ಶೋಭಿತ ಒಟ್ಟಿಗೆ ಕಾಣಿಸಿಕೊಂಡರು. ಇಬ್ಬರ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಲ್ಲಿ ಸಾಮ್ಯತೆ ಇತ್ತು.
ಇದೀಗ ಮದುವೆಯ ನಂತರ ಶೋಭಿತ ತಮ್ಮ ಪ್ರೇಮಕಥೆಯನ್ನು ಬಿಚ್ಚಿಟ್ಟಿದ್ದಾರೆ. 2022 ರಿಂದ ನಾನು ಚೈತನ್ಯ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುತ್ತಿದ್ದೇನೆ ಎಂದಿದ್ದಾರೆ. ಶೋಭಿತಾ ಮುಂಬೈನಲ್ಲಿ ವಾಸಿಸುತ್ತಿದ್ದರು. ನಾಗಚೈತನ್ಯ ಹೈದರಾಬಾದ್ ನಲ್ಲಿ ನೆಲೆಸಿದ್ದರು. Instagram ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ ಕೆಲವು ವಾರಗಳ ನಂತರ ನಾಗಚೈತನ್ಯ ಮುಂಬೈಗೆ ಫ್ಲೈಟ್ ಹತ್ತಿದರು.
ಮುಂಬೈನ ಒಂದು ಕೆಫೆಯಲ್ಲಿ ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾದೆವು. ಸುಮಾರು ಒಂದು ವಾರದ ನಂತರ ಮುಂಬೈನಲ್ಲಿ ನಡೆದ ಅಮೆಜಾನ್ ಪ್ರೈಮ್ ಸಮಾರಂಭದಲ್ಲಿ ಶೋಭಿತಾ ಮತ್ತು ನಾಗ ಚೈತನ್ಯ ಮತ್ತೆ ಭೇಟಿಯಾದರು. ಇಬ್ಬರೂ ಈವೆಂಟ್‌ಗೆ ಹಾಜರಾಗಿದ್ದರು. ನಾನು ಕೆಂಪು ಉಡುಪಿನಲ್ಲಿದ್ದೆ ಅವರು ನೀಲಿ ಸೂಟ್‌ನಲ್ಲಿದ್ದರು. ಮತ್ತು ಉಳಿದದ್ದು ಇತಿಹಾಸ ಎಂದು ನಟಿ ಹೇಳಿದ್ದಾರೆ.
ತಮ್ಮ ಮೊದಲ ಪ್ರವಾಸದ ಬಗ್ಗೆ ಕೂಡ ಅವರು ಮಾತನಾಡಿದ್ದು, ಕರ್ನಾಟಕದ ಒಂದು ಪಾರ್ಕ್ ನಲ್ಲಿ ಭೇಟಿಯಾಗಿ ಒಬ್ಬರಿಗೊಬ್ಬರು ಮೆಹಂದಿ ಇಟ್ಟೆವು ಎಂದು ಕೂಡ ಹೇಳಿದ್ದಾರೆ. ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ತಮ್ಮ ಮೊದಲ ಪ್ರವಾಸಕ್ಕೆ ಹೋದರು ಎಂದು ಹಂಚಿಕೊಂಡರು. ವಿಹಾರಕ್ಕೆ ನಾಗ ಚೈತನ್ಯ ಅವರ ಗೆಳೆಯರು ಕೂಡ ಸೇರಿಕೊಂಡರು. ನಗುತ್ತಾ ಕಾಲ ಕಳೆದೆವು ಎಂದಿದ್ದಾರೆ.
ನವೆಂಬರ್‌ನಲ್ಲಿ ಚೈತನ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲು ಇಬ್ಬರು ಕೂಡ ಲಂಡನ್‌ಗೆ ಪ್ರಯಾಣ ಬೆಳೆಸಿದರು. ಟೆಕ್ನೋ ಸಂಗೀತದ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದು, ಅವರ ನೆಚ್ಚಿನ ಕಲಾವಿದರಲ್ಲಿ ಒಬ್ಬರಾದ ಟೇಲ್ ಆಫ್ ಅಸ್ ಅಲ್ಲಿ ಸಂಗೀತ ಕಚೇರಿಯನ್ನು ನಡೆಸುತ್ತಿದ್ದರು.
2022 ರಲ್ಲಿ ಲಂಡನ್ ಪ್ರವಾಸದ ನಂತರ ಅಕ್ಕಿನೇನಿ ಕುಟುಂಬದ ಹೊಸ ವರ್ಷದ ಆಚರಣೆಗೆ ನನಗೆ ಆಹ್ವಾನವಿತ್ತು. ಗೋವಾದಲ್ಲಿ ಮದುವೆ ಪ್ರಸ್ತಾಪ ಬಂತು. ಬಳಿಕ ಚೈತನ್ಯ ವಿಶಾಖಪಟ್ಟಣಂನಲ್ಲಿ ತನ್ನ ಕುಟುಂಬವನ್ನು ಭೇಟಿ ಮಾಡಿದರು ಎಂದು ಹೇಳಿಕೊಂಡಿದ್ದಾರೆ.