‘ಕಣ್ಣಪ್ಪ’ ನೋಡಿ ಮಂಚು ಮನೋಜ್ ಭಾವುಕ: ಸಹೋದರ ವಿಷ್ಣು ಮಂಚುಗೆ ಪರೋಕ್ಷ ಶ್ಲಾಘನೆ
ಕುಟುಂಬದ ಜಗಳಗಳನ್ನ ಮರೆತು ಮಂಚು ಮನೋಜ್ ಕಣ್ಣಪ್ಪ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿದ ನಂತರ ಮನೋಜ್, ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಮಂಚು ವಿಷ್ಣು ನಟಿಸಿರುವ 'ಕಣ್ಣಪ್ಪ' ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಮೋಹನ್ ಲಾಲ್, ಅಕ್ಷಯ್ ಕುಮಾರ್, ಪ್ರಭುದೇವ, ಪ್ರಭಾಸ್, ಕಾಜಲ್ ಅಗರ್ವಾಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಪ್ರೀತಿ ಮುಕುಂದನ್ ನಟಿಸಿದ್ದಾರೆ. ಮಂಚು ವಿಷ್ಣು ತಮ್ಮ ಕನಸಿನ ಯೋಜನೆಗಾಗಿ ಬಹಳ ಶ್ರಮಿಸಿದ್ದಾರೆ. ತಮ್ಮ ಮಾರುಕಟ್ಟೆಗಿಂತ ಹೆಚ್ಚಿನ ಹಣವನ್ನು ಈ ಚಿತ್ರಕ್ಕೆ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಬಿಡುಗಡೆಯಾಗಿರುವ 'ಕಣ್ಣಪ್ಪ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲಾರ್ಧ ಸಾಧಾರಣವಾಗಿದ್ದರೂ, ದ್ವಿತೀಯಾರ್ಧ ಅದ್ಭುತವಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಧೂರ್ಜಟಿ ರಚಿಸಿದ ಶ್ರೀಕಾಳಹಸ್ತಿ ಮಹಾತ್ಮ್ಯವನ್ನು ಆಧರಿಸಿ ಈ ಭಕ್ತಿಪ್ರಧಾನ ಚಿತ್ರವನ್ನು ನಿರ್ಮಿಸಲಾಗಿದೆ. ಕುಟುಂಬದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮಂಚು ಮನೋಜ್ 'ಕಣ್ಣಪ್ಪ' ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಿದರು.
ಚಿತ್ರ ವೀಕ್ಷಿಸಿದ ನಂತರ, ಮಂಚು ಮನೋಜ್ 'ಕಣ್ಣಪ್ಪ' ಚಿತ್ರವನ್ನು ಹಾಡಿ ಹೊಗಳಿದರು. ಪ್ರಭಾಸ್ ಬಂದಮೇಲೆ ಸಿನಿಮಾ ಇನ್ನೊಂದು ಲೆವೆಲ್‌ಗೆ ಹೋಗುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಅವರು ಇಷ್ಟು ಚೆನ್ನಾಗಿ ನಟಿಸುತ್ತಾರೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಪರೋಕ್ಷವಾಗಿ ತಮ್ಮ ಸಹೋದರ ಮಂಚು ವಿಷ್ಣು ಬಗ್ಗೆ ಹೇಳಿದರು. ನಾನು ಊಹಿಸಿದ್ದಕ್ಕಿಂತ ಸಾವಿರ ಪಟ್ಟು ಚೆನ್ನಾಗಿದೆ ಈ ಸಿನಿಮಾ ಎಂದರು. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಆಶಿಸುತ್ತೇನೆ. ನೀವು ಹಾಕಿದ ಹಣ ಸಾವಿರ ಪಟ್ಟು ಹಿಂತಿರುಗಲಿ ಎಂದು ಹಾರೈಸುತ್ತೇನೆ ಎಂದು ಮನೋಜ್ ಹೇಳಿದರು. ಸಿನಿಮಾದ ಮೊದಲ ಐದು ನಿಮಿಷಗಳನ್ನು ಮಿಸ್ ಮಾಡಿಕೊಂಡಿದ್ದೇನೆ, ಅದಕ್ಕಾಗಿ ನಾಳೆ ಮತ್ತೆ ಬಂದು ನೋಡುತ್ತೇನೆ ಎಂದು ತಮಾಷೆ ಮಾಡಿದರು.
ಇತ್ತೀಚೆಗೆ ಮಂಚು ಮನೋಜ್ ಮತ್ತು ಮಂಚು ವಿಷ್ಣು ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಪರಸ್ಪರ ಗಂಭೀರ ಆರೋಪಗಳನ್ನು ಮಾಡಿಕೊಂಡಿದ್ದರು. ಆಸ್ತಿ ವಿಚಾರದಲ್ಲಿ ಜಗಳ ನಡೆದಿದೆ ಎಂಬ ವರದಿಗಳು ಬಂದಿದ್ದವು. ಮಂಚು ಮನೋಜ್ ಕೂಡ ಹಲವು ಸಂದರ್ಭಗಳಲ್ಲಿ ಮಂಚು ವಿಷ್ಣು ವಿರುದ್ಧ ಆರೋಪ ಮಾಡಿದ್ದರು. 'ಕಣ್ಣಪ್ಪ' ಚಿತ್ರ ವೀಕ್ಷಿಸಿದ ನಂತರವೂ ಮಂಚು ಮನೋಜ್ ತಮ್ಮ ಸಹೋದರ ವಿಷ್ಣು ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಎಂದು ಪರೋಕ್ಷವಾಗಿ ಮಾತ್ರ ಹೇಳಿದರು.