ಹೊಟೆಲ್‌ನಲ್ಲಿ ನಟ ದಿಲೀಪ್ ಶಂಕರ್ ಶವವವಾಗಿ ಪತ್ತೆ, ನಿಗೂಢ ಸಾವಿಗೆ ಬೆಚ್ಚಿದ ಚಿತ್ರರಂಗ!
ಖ್ಯಾತ ನಟ ದಿಲೀಪ್ ಶಂಕರ್ ಹೊಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಿಗೂಢ ಸಾವು ಚಿತ್ರರಂಗಕ್ಕೆ ಶಾಕ್ ನೀಡಿದೆ. 2 ದಿನದ ಹಿಂದೆ ಹೊಟೆಲ್‌ಗೆ ಆಗಮಿಸಿ ಚೆಕ್ ಇನ್ ಮಾಡಿದ್ದ ದಿಲೀಪ್ ಶಂಕರ್ ದಿಢೀರ್ ಮರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಖ್ಯಾತ ಸಿನಿಮಾ ಹಾಗೂ ಸೀರಿಯಲ್ ನಟ ದಿಲೀಪ್ ಶಂಕರ್ ಶವವಾಗಿ ಪತ್ತೆಯಾಗಿದ್ದಾರೆ. ಮಲೆಯಾಳಂ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ದಿಲೀಪ್ ಶಂಕರ್ ಸಾವು ಚಿತ್ರರಂಗಕ್ಕೆ ಆಘಾತ ನೀಡಿದೆ. ಕೇವಲ 2 ದಿನದ ಹಿಂದೆ ಹೊಟೆಲ್ ರೂಂ ಬುಕ್ ಮಾಡಿದ್ದ ದಿಲೀಪ್ ಶಂಕರ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ದಿಲೀಪ್ ಶಂಕರ್ ಸಾವಿನ ಸುತ್ತ ಕೆಲ ಅನುಮಾನಗಳು ಹುಟ್ಟಿಕೊಂಡಿದೆ.
ತಿರುವನಂತಪುರಂನ ಖಾಸಗಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದ ದಿಲೀಪ್ ಶಂಕರ್ 2 ದಿನದ ಹಿಂದೆ ಚೆಕ್ ಇನ್ ಮಾಡಿದ್ದಾರೆ. ಬಳಿಕ ದಿಲೀಪ್ ಶಂಕರ್ ನಾಪತ್ತೆಯಾಗಿದ್ದಾರೆ. ಯಾರ ಕಣ್ಣಿಗೂ ಕಾಣಿಸಿಲ್ಲ. ಹೊಟೆಲ್ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಹೊಟೆಲ್ ಸಿಬ್ಬಂದಿಗಳು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಘಟನೆ ಪತ್ತೆಯಾಗಿದೆ.
ಹೊಟೆಲ್ ಕೊಠಡಿಯೊಳಗಿನ ನೆಲದಲ್ಲಿ ದಿಲೀಪ್ ಶಂಕರ್ ಮೃತದೇಹ ಪತ್ತೆಯಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ಪ್ರಾಥಮಿಕ ವರದಿಗಳ ದಿಲೀಪ್ ಶಂಕರ್ ಸಾವಿನ ಹಿಂದೆ ಷಡ್ಯಂತ್ರ ಅನುಮಾನದ ಕುರಿತು ಯಾವುದೇ ಸುಳಿವಿಲ್ಲ ಎಂದಿದ್ದಾರೆ.
ದಿಲೀಪ್ ಶಂಕರ್ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು ಎಂದು ಆಪ್ತರು ಹೇಳಿದ್ದಾರೆ. ಆದರೆ ಈ ಆರೋಗ್ಯ ಸಮಸ್ಯೆಗಳು ಸಾವಿಗೆ ಕಾರಣವಾಗುವಷ್ಟರ ಮಟ್ಟಿಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಿಲೀಪ್ ಶಂಕರ್ ಆರೋಗ್ಯ ಸಮಸ್ಯೆ, ಹೃದಯಾಘಾತ ಅಥವಾ ಇನ್ಯಾವುದೇ ಕಾರಣದಿಂದ ಮೃತಪಟ್ಟಿದ್ದಾರ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ಸಿನಿಮಾ, ಹಲವು ಧಾರವಾಹಿಗಳಲ್ಲಿ ಜನರ ಮನಸ್ಸು ಗೆದ್ದಿದ್ದ ದಿಲೀಪ್ ಶಂಕರ್ ಯಾವುದೇ ವಿವಾದಕ್ಕೆ ಗುರಿಯಾಗಿಲ್ಲ. ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಗೌರವಯುತ ಸ್ಥಾನ ಪಡೆದಿರುವ ದಿಲೀಪ್ ಶಂಕರ್ ಸಾವು ಮಲೆಯಾಳಂ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಇತ್ತ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.