ಸೌತ್‌ನ ಈ ಮೆಗಾಸ್ಟಾರ್ ನಟನ ಸಿನಿಮಾ ರಿಲೀಸ್ ಆಗೋ ಮೊದ್ಲೇ ವಿದೇಶಗಳಲ್ಲಿ ಬ್ಯಾನ್!
ಭಾರತದ ಎಲ್ಲಾ ಚಿತ್ರಗಳು ವಿದೇಶದಲ್ಲಿ ಬಿಡುಗಡೆಯಾಗುವುದಿಲ್ಲ. ಕೆಲವು ನಿರ್ಧಿಷ್ಟ ಚಿತ್ರಗಳು ಕೆಲವೊಂದು ಕಾರಣಗಳಿಂದ ಫಾರಿನ್ ಕಂಟ್ರಿಗಳಲ್ಲಿ ಬ್ಯಾನ್ ಆಗಿದೆ. ಸೌತ್ ಸೂಪರ್‌ಸ್ಟಾರ್ ನಟರೊಬ್ಬರ ಸಿನಿಮಾ ಸಹ ಇದೇ ರೀತಿ ರಿಲೀಸ್ ಆಗೋ ಮುನ್ನವೇ ವಿದೇಶದಲ್ಲಿ ಬ್ಯಾನ್ ಆಗಿದೆ. ಯಾರು ಆ ನಟ?
ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ದೇಶ-ವಿದೇಶಗಳಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇತ್ತೀಚಿಗೆ ಅಭಿನಯಿಸಿದ 'ಕಣ್ಣೂರ್ ಸ್ಕ್ವಾಡ್' ಚಿತ್ರ ಬಾಕ್ಸಾಫೀಸಿನಲ್ಲಿ ಸೂಪರ್‌ಹಿಟ್ ಆಗಿದೆ. ಬಾಕ್ಸಾಫೀಸಿನಲ್ಲಿ ಬರೋಬ್ಬರಿ 5.75 ಕೋಟಿ ರೂ. ಗಳಿಸಿದೆ. ಅದರ ನಂತರ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ, ಕೆಲವು ದೇಶಗಳಲ್ಲಿ ಅವರ ಮುಂಬರುವ ಚಿತ್ರ 'ಕಥಾಲ್'ನೋಡಲು ಸಿಗುವುದಿಲ್ಲ. ಯಾಕೆಂದರೆ, ಮಮ್ಮುಟ್ಟಿ ಮತ್ತು ನಟಿ ಜ್ಯೋತಿಕಾ ಅವರ 'ಕಥಾಲ್ - ದಿ ಕೋರ್'ನ್ನು ಬಿಡುಗಡೆಗೆ ಮುಂಚೆಯೇ ಎರಡು ದೇಶಗಳಲ್ಲಿ ನಿಷೇಧಿಸಲಾಗಿದೆ, ಇದು ಅನೇಕ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.
ನವೆಂಬರ್ 23, 2023 ರಂದು ಬಿಡುಗಡೆಯಾದ ಮಮ್ಮುಟ್ಟಿ ಮತ್ತು ಜ್ಯೋತಿಕಾ ಅವರ ಚಲನಚಿತ್ರವನ್ನು ಕತಾರ್ ಮತ್ತು ಕುವೈತ್‌ನಲ್ಲಿ ಸಲಿಂಗಕಾಮಿ ವಿಷಯವನ್ನು ಒಳಗೊಂಡಿರುವ ಕಾರಣಕ್ಕಾಗಿ ನಿಷೇಧಿಸಲಾಗಿದೆ. ಈ ಹಿನ್ನಡೆ ಚಿತ್ರೋದ್ಯಮಕ್ಕೆ ದೊಡ್ಡ ಸವಾಲಾಗಿದೆ. ಭಾರತೀಯ ಚಿತ್ರವೊಂದು ಈ ಕೆಲವುದ ದೇಶಗಳಲ್ಲಿ ಬ್ಯಾನ್ ಆಗುತ್ತಿರುವುದು ಇದು ಮೊದಲ ಬಾರಿಯಲ್ಲ.
ಕಥಾಲ್ ಗೇ ಆಧಾರಿತ ಸಿನಿಮಾವಾಗಿದೆ. ದಶಕದ ನಂತರ ಜ್ಯೋತಿಕಾ ಮಲಯಾಳಂ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ. ಕಥಾಲ್ ಚಿತ್ರವನ್ನು ಜಿಯೋ ಬೇಬಿ ನಿರ್ದೇಶಿಸಿದ್ದಾರೆ. ಆದರ್ಶ್ ಸುಕುಮಾರನ್ ಮತ್ತು ಪಾಲ್ಸನ್ ಸ್ಕೇರಿಯಾ ಬರೆದಿದ್ದಾರೆ, ಮಮ್ಮುಟ್ಟಿ ಕಂಪನಿಗಳ ಬ್ಯಾನರ್ ಅಡಿಯಲ್ಲಿ ಸ್ವತಃ ಮಮ್ಮುಟ್ಟಿ ಇದನ್ನು ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಜಿಯೋ ಬೇಬಿ, 'ನಾನು ಮೊದಲ ಬಾರಿಗೆ ನನ್ನದಲ್ಲದ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ನಾನು ಕಥೆಯನ್ನು ಕೇಳಿದ್ದೇನೆ ಮತ್ತು ನಾನು ಅದನ್ನು ಇಷ್ಟಪಟ್ಟಿದ್ದೇನೆ. ಚಿತ್ರದಲ್ಲಿ ಮಮ್ಮುಟ್ಟಿ ನಾಯಕನಾಗಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದೆ. ಅವರೂ ಅದನ್ನು ಇಷ್ಟಪಟ್ಟಿದ್ದಾರೆ. ಪತ್ನಿಯ ಪಾತ್ರಕ್ಕೆ ಜ್ಯೋತಿಕಾ ಹೆಸರನ್ನು ಅವರೇ ಸೂಚಿಸಿದರು' ಎಂದು ತಿಳಿಸಿದ್ದಾರೆ.
ಕಥಾಲ್ ಚಿತ್ರದಲ್ಲಿ ಮಮ್ಮುಟ್ಟಿ ನಿರ್ವಹಿಸಿದ ಮ್ಯಾಥ್ಯೂ ದೇವಸ್ಸಿ ಪಾತ್ರ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಸ್ಥಳೀಯ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸುತ್ತಾರೆ.
ಅನಿರೀಕ್ಷಿತವಾಗಿ, ಅವರ ಪತ್ನಿ ಓಮನಾ,ಮ್ಯಾಥ್ಯೂ ಸಲಿಂಗಕಾಮಿ ಎಂದು ಹೇಳಿಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಎಲ್ಲರಿಗೂ ಶಾಕ್ ನೀಡುತ್ತಾರೆ. ಈ ಚಲನಚಿತ್ರವು ಸಲಿಂಗಕಾಮಿಗಳ ಕಡೆಗೆ ಸಮಾಜದ ಮನಸ್ಥಿತಿಯ ರಾಜಕೀಯವನ್ನು ಪರಿಶೋಧಿಸುತ್ತದೆ