ವೇಟರ್‌ನಿಂದ ಆ್ಯಕ್ಟರ್‌ವರೆಗೆ; ಬೊಮನ್ ಇರಾನಿಯ ಯಶೋಗಾಥೆ
ಒಂದು ಕಾಲದಲ್ಲಿ ಹೋಟೆಲ್ ಮಾಣಿ ಆಗಿದ್ದ ಬೊಮನ್ ಇರಾನಿ ಇಂದು ಆ್ಯಕ್ಟರ್ ಆಗಿ ಚಿರಪರಿಚಿತ. ಬಾಲಿವುಡ್‌ನ ಯಶಸ್ಸಿನ ಕತೆಗಳಲ್ಲಿ ಈ ನಟನ ಹೆಸರು ಇರಲೇಬೇಕು.
ಬೊಮನ್ ಇರಾನಿಯವರ ಯಶೋಗಾಥೆಯು ಭಾರತೀಯ ಚಲನಚಿತ್ರ ಜಗತ್ತಿನಲ್ಲಿ ಪ್ರತಿಭೆ, ಪರಿಶ್ರಮ ಮತ್ತು ಬಹುಮುಖತೆಗೆ ಸಾಕ್ಷಿಯಾಗಿದೆ.
ತನ್ನ ಅಸಾಧಾರಣ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಆಕರ್ಷಿಸುವ ಮೊದಲು, ಇರಾನಿ ವೈವಿಧ್ಯಮಯ ಕೆಲಸಗಳಲ್ಲಿ ತಮ್ಮನ್ನು ಕಂಡುಕೊಳ್ಳಲು ನೋಡಿದ್ದರು.
ಹೌದು, ಮೊದಲು ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಮಾಣಿಯಾಗಿ ವೃತ್ತಿ ಜೀವನ ಆರಂಭಿಸಿದವರು ಬೊಮನ್ ಇರಾನಿ. ನಂತರ ರೂಂ ಸರ್ವೀಸ್ ಸಿಬ್ಬಂದಿಯಾಗಿ, ವೃತ್ತಿಪರ ಛಾಯಾಗ್ರಾಹಕನಾಗಿ, ಕುಟುಂಬದ ಬೇಕರಿ ನೋಡಿಕೊಳ್ಳುತ್ತಾ, ರಂಗಭೂಮಿ ಕಲಾವಿದನಾಗಿ ವಿವಿಧ ವೃತ್ತಿಗಳಲ್ಲಿ ಅದೃಷ್ಟ ಪರೀಕ್ಷಿಸಿದರು.
ಆದರೆ, ಏನೇ ಮಾಡಿದರೂ ನಟನಾ ಗೀಳು ಅವರೊಳಗೆ ಕಾಡುತ್ತಲೇ ಇತ್ತು. ರಂಗಭೂಮಿ ಕಲಾವಿದನಾದಾಗ ಸಿನಿಮಾದಲ್ಲಿ ಕಾಣುವ ಆಸೆ ಹುಟ್ಟಿತು. ಈ ಸಂದರ್ಭದಲ್ಲಿ ಅವರು ಮುಖ್ಯಪಾತ್ರದಲ್ಲಿದ್ದ ನಾಟಕವೊಂದು 17 ವರ್ಷಗಳ ಕಾಲ ಓಡಿತು.
ಅಂತಿಮವಾಗಿ, ಇರಾನಿ ತಮ್ಮ 41ನೇ ವಯಸ್ಸಿನಲ್ಲಿ 2000ರಲ್ಲಿ ಶಾರುಖ್ ಖಾನ್ ಜೊತೆಗೆ ಜೋಶ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಕಡೆಗೆ ಅಂತೂ ಬಾಲಿವುಡ್‌ನ ಬ್ಯಾಂಕಬಲ್ ನಟನಾಗುವಲ್ಲಿ ಅವರು ಯಶಸ್ವಿಯಾದರು.
ರಾಮ್ ಮಾಧವನಿಯ ಲೆಟ್ಸ್ ಟಾಕ್ (2002) ನಲ್ಲಿ ಅವರ ಗಮನಾರ್ಹ ಪಾತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು, ಇದು ಮುನ್ನಾಭಾಯ್ M.B.B.S ನಲ್ಲಿ ಪ್ರಮುಖ ಪಾತ್ರಕ್ಕೆ ಕಾರಣವಾಯಿತು.
ಚಿತ್ರವು ಇರಾನಿಯವರ ಸಿನಿಮಾ ಖ್ಯಾತಿಯ ಆರಂಭವನ್ನು ಗುರುತಿಸಿತು. ವ್ಯಾಪಕ ಶ್ರೇಣಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಬೊಮನ್ ಇರಾನಿ ಶೀಘ್ರವಾಗಿ ಉದ್ಯಮದಲ್ಲಿ ಬೇಡಿಕೆಯ ನಟರಾದರು.
ಪೋಷಕ ಪಾತ್ರಗಳಿಂದ ಪ್ರಮುಖ ಪಾತ್ರಗಳಿಗೆ ಪರಿವರ್ತನೆಗೊಂಡರು. ಲಗೇ ರಹೋ ಮುನ್ನಾ ಭಾಯಿ (2006), 3 ಈಡಿಯಟ್ಸ್(2009), ಮತ್ತು PK(2014) ಅವರ ಕೆಲ ಪ್ರಮುಖ ಚಿತ್ರಗಳು.
ನಟನೆಯ ಹೊರತಾಗಿ, ಬೋಮನ್ ಇರಾನಿ ಮನರಂಜನಾ ಉದ್ಯಮದ ಇತರ ಅಂಶಗಳನ್ನು ಅನ್ವೇಷಿಸಿದ್ದಾರೆ. ಅವರು ಟಿವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅನಿಮೇಟೆಡ್ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಅವರ ಬಹುಮುಖ ಪ್ರತಿಭೆಯು ಅವರನ್ನು ಭಾರತೀಯ ಮನರಂಜನಾ ರಂಗದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಮಾಡಿದೆ. ಮಾಣಿಯಿಂದ ನಟನೆವರೆಗೆ ಬೊಮನ್ ಜೀವನವು ಹಲವಾರು ನಾಟಕೀಯ ತಿರುವುಗಳನ್ನು ತೆಗೆದುಕೊಂಡಿದೆ.