ನಟ ಜಯಂ ರವಿ ವಿಚ್ಛೇದನ ಪ್ರಕರಣ: ಮಧ್ಯಸ್ಥಿಕೆಗೆ ಕೋರ್ಟ್ ಸೂಚನೆ
ಜಯಂ ರವಿ ಪತ್ನಿ ಆರತಿಯಿಂದ ವಿಚ್ಛೇದನ ಕೇಳಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ ನೀಡಿರುವ ತೀರ್ಪಿನಿಂದ ಜಯಂ ರವಿ - ಆರತಿ ಮತ್ತೆ ಒಂದಾಗುವ ಸಾಧ್ಯತೆ ಇದೆ.
ಕಾಲೇಜು ದಿನಗಳಿಂದಲೂ ಪ್ರೀತಿಸಿ 2009 ರಲ್ಲಿ ಮದುವೆಯಾಗಿದ್ದ ಪತ್ನಿ ಆರತಿ ಯಿಂದ ವಿಚ್ಛೇದನ ಪಡೆಯುವುದಾಗಿ ಎರಡು ತಿಂಗಳ ಹಿಂದೆ ನಟ ಜಯಂ ರವಿ ಘೋಷಿಸಿದ್ದು ತಮಿಳು ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿತ್ತು.
ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿಗಳು ಹರಿದಾಡಿದವು. ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಜಯಂ ರವಿ ಹೇಳಿಕೆ ನೀಡಿದ್ದರು.
ಜಯಂ ರವಿ ಜೊತೆ ಮತ್ತೆ ಒಂದಾಗಿ ಬಾಳಲು ಇಚ್ಛಿಸುವುದಾಗಿ ಆರತಿ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಜಯಂ ರವಿ ಆರತಿ ಮೇಲೆ ಹಲವು ಆರೋಪಗಳನ್ನು ಮಾಡಿದ್ದರಿಂದ ಇಬ್ಬರೂ ಒಂದಾಗುವುದು ಕಷ್ಟ ಎನ್ನಲಾಗಿತ್ತು.
ಈ ವಿಚಾರ ಸುದ್ದಿಯಾಗುತ್ತಿದ್ದಂತೆ, ವಿಚ್ಛೇದನ ಪ್ರಕರಣ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದೆ. ನ್ಯಾಯಾಲಯವು ಇಬ್ಬರೂ ಸಂಧಾನ ಮಾತುಕತೆ ನಡೆಸುವಂತೆ ಆದೇಶಿಸಿದೆ.