- Home
- Business
- Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್: ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್ ಆಗಲು ಸಿಕ್ತು ಟ್ರಿಕ್
Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್: ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್ ಆಗಲು ಸಿಕ್ತು ಟ್ರಿಕ್
ಜೊಮ್ಯಾಟೊದ ಪ್ಲಾಟ್‌ಫಾರ್ಮ್ ಶುಲ್ಕ ಮತ್ತು ಕಮಿಷನ್ ತಪ್ಪಿಸಲು ಗ್ರಾಹಕರು ಹಾಗೂ ರೆಸ್ಟೋರೆಂಟ್‌ಗಳು '1 ರೋಟಿ ಟ್ರಿಕ್' ಎಂಬ ಹೊಸ ಉಪಾಯವನ್ನು ಬಳಸುತ್ತಿದ್ದಾರೆ. ಆ್ಯಪ್‌ನಲ್ಲಿ ಸಣ್ಣ ಆರ್ಡರ್ ಮಾಡಿ, ನೇರವಾಗಿ ರೆಸ್ಟೋರೆಂಟ್‌ಗೆ ಕರೆ ಮಾಡಿ ದೊಡ್ಡ ಆರ್ಡರ್ ನೀಡುವ ಟ್ರಿಕ್ ಮಾಡುತ್ತಿದ್ದಾರೆ.

ಹೊಸ ಉಪಾಯ ಕಂಡುಕೊಂಡ ಗ್ರಾಹಕ, ರೆಸ್ಟೋರೆಂಟ್
ಆನ್‌ಲೈನ್ ಆಹಾರ ವಿತರಣಾ ಆ್ಯಪ್ ಆದ ಜೊಮ್ಯಾಟೊದ ಪ್ಲಾಟ್‌ಫಾರ್ಮ್ ಶುಲ್ಕ ಹಾಗೂ ಕಮಿಷನ್ ದರಗಳನ್ನು ತಪ್ಪಿಸಲು ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳು ಜಂಟಿಯಾಗಿ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ‘1 ರೋಟಿ ಟ್ರಿಕ್’ (1 Roti Trick) ಎಂಬ ಈ ರಹಸ್ಯ ಐಡಿಯಾ ಈಗ ಸ್ಟಾರ್ಟ್‌ಅಪ್ ವಲಯ ಹಾಗೂ ಆನ್‌ಲೈನ್ ಮಾರುಕಟ್ಟೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇಡೀ ಆನ್‌ಲೈನ್ ಫುಡ್ ಡೆಲಿವರಿ ವ್ಯವಸ್ಥೆಯ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಮುನ್ಸೂಚನೆ ನೀಡಿದೆ.
ಏನಿದು ವೈರಲ್ ‘1 ರೋಟಿ ಟ್ರಿಕ್’? ಕೆಲಸ ಮಾಡುವುದು ಹೇಗೆ?
ಹೂಡಿಕೆದಾರರಾದ ಪ್ರೇಮ್ ಸೋನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಗ್ರಾಹಕರು ಮೊದಲು ಜೊಮ್ಯಾಟೊ ಆ್ಯಪ್‌ನಲ್ಲಿ ಕೇವಲ ₹40 ರೂಪಾಯಿಗೆ ಒಂದು ರೋಟಿಯಂತಹ ಸಣ್ಣ ಆರ್ಡರ್ ಅನ್ನು ಪ್ಲೇಸ್ ಮಾಡುತ್ತಾರೆ. ಆರ್ಡರ್ ಆದ ತಕ್ಷಣ, ಗ್ರಾಹಕರು ನೇರವಾಗಿ ಆ ರೆಸ್ಟೋರೆಂಟ್‌ಗೆ ಫೋನ್ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ, ತಮಗೆ ಬೇಕಾದ ಉಳಿದ ದೊಡ್ಡ ಮೊತ್ತದ ಆಹಾರದ ಆರ್ಡರ್ ಅನ್ನು ಆ್ಯಪ್‌ನಿಂದ ಹೊರಗಡೆಯೇ (Off-platform) ನೀಡುತ್ತಾರೆ.
ಯುಪಿಐ ಪೇಮೆಂಟ್ ಹಾಗೂ ಡೆಲಿವರಿ ಪಾರ್ಟ್‌ನರ್ ಬಳಕೆಯ ಸೀಕ್ರೆಟ್!
ಹೀಗೆ ಆ್ಯಪ್‌ನಿಂದ ಹೊರಗೆ ನೀಡಲಾದ ಆರ್ಡರ್‌ಗೆ ಗ್ರಾಹಕರು ನೇರವಾಗಿ ರೆಸ್ಟೋರೆಂಟ್‌ಗೆ ಯುಪಿಐ (UPI) ಮೂಲಕ ಹಣ ಪಾವತಿಸುತ್ತಾರೆ. ರೆಸ್ಟೋರೆಂಟ್‌ನವರು ಆ ದೊಡ್ಡ ಆರ್ಡರ್ ಮತ್ತು ಜೊಮ್ಯಾಟೊ ಆ್ಯಪ್ ಮೂಲಕ ಬಂದ 1 ರೋಟಿಯ ಆರ್ಡರ್ ಎರಡನ್ನೂ ಸೇರಿಸಿ ಒಂದೇ ಪ್ಯಾಕೆಟ್‌ನಲ್ಲಿ ಪ್ಯಾಕ್ ಮಾಡುತ್ತಾರೆ. ಜೊಮ್ಯಾಟೊದ ಡೆಲಿವರಿ ಪಾರ್ಟ್‌ನರ್ ಬಂದು, ಈ ಇಡೀ ದೊಡ್ಡ ಪ್ಯಾಕೆಟ್ ಅನ್ನು ಆ್ಯಪ್‌ನಲ್ಲಿ ಬಿಲ್ ಆಗದೆಯೇ ಗ್ರಾಹಕರ ಮನೆಗೆ ತಲುಪಿಸುತ್ತಾನೆ. ಇದರಿಂದ ಡೆಲಿವರಿ ಹುಡುಗನಿಗೂ ಪ್ಯಾಕೆಟ್ ಒಳಗೇನಿದೆ ಎಂಬ ಸತ್ಯ ತಿಳಿಯುವುದೇ ಇಲ್ಲ.
ಜೊಮ್ಯಾಟೊ ಆರ್ಥಿಕತೆಗೆ ಇದರಿಂದ ಆಗಲಿರುವ ನಷ್ಟವೇನು?
ಈ ಹೊಸ ಲೂಪ್‌ಹೋಲ್ ಟ್ರಿಕ್‌ನಿಂದಾಗಿ ಗ್ರಾಹಕರು ಪ್ಲಾಟ್‌ಫಾರ್ಮ್ ಶುಲ್ಕ (Platform Fees) ಮತ್ತು ಸರ್ಜ್ ಚಾರ್ಜ್‌ಗಳಿಂದ ಸುಲಭವಾಗಿ ಬಚಾವಾಗುತ್ತಿದ್ದಾರೆ. ಇನ್ನು ರೆಸ್ಟೋರೆಂಟ್‌ಗಳು ಜೊಮ್ಯಾಟೊಗೆ ನೀಡಬೇಕಾದ ಭಾರಿ ಮೊತ್ತದ ಅಗ್ರಿಗೇಟರ್ ಕಮಿಷನ್ ಅನ್ನು ಸಂಪೂರ್ಣವಾಗಿ ತಪ್ಪಿಸುತ್ತಿವೆ. ಮುಖ್ಯವಾಗಿ, ಇಡೀ ಆರ್ಡರ್‌ನ ಪೂರ್ಣ ಬಿಲ್ಲಿಂಗ್ ಆ್ಯಪ್‌ನಲ್ಲಿ ನಡೆಯದಿದ್ದರೂ, ಜೊಮ್ಯಾಟೊದ ಡೆಲಿವರಿ ನೆಟ್‌ವರ್ಕ್ ಮತ್ತು ಮೂಲಸೌಕರ್ಯ ಇಲ್ಲಿ ಉಚಿತವಾಗಿ ಬಳಕೆಯಾಗುತ್ತಿದೆ. ಜೊಮ್ಯಾಟೊ ತನ್ನ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಇತ್ತೀಚೆಗಷ್ಟೇ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ₹12.50 ರಿಂದ ₹14.90 ಕ್ಕೆ ಏರಿಸಿತ್ತು. ಇಂತಹ ಸಮಯದಲ್ಲಿ ಈ ಟ್ರಿಕ್ ವ್ಯಾಪಕವಾಗಿ ಬಳಕೆಯಾದರೆ ಕಂಪನಿಯ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ.
ಈ ಟ್ರಿಕ್ ಪ್ರಾಯೋಗಿಕವಾಗಿ ಸಾಧ್ಯವೇ?: ಪರ-ವಿರೋಧ ಚರ್ಚೆ
ಈ ವಿಷಯ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗಿದ್ದರೂ, ಇದು ದೀರ್ಘಕಾಲದವರೆಗೆ ಅಥವಾ ದೊಡ್ಡ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರಲು ಸಾಧ್ಯವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರ ಪ್ರಕಾರ ಎಲ್ಲಾ ರೆಸ್ಟೋರೆಂಟ್‌ಗಳು ಇಂತಹ ಆಫ್ ಫ್ಲಾಟ್‌ಫಾರ್ಮ್ ವಿನಂತಿಗಳಿಗೆ ಒಪ್ಪುವುದಿಲ್ಲ. ತೀರಾ ಸಣ್ಣ ಆರ್ಡರ್‌ಗೆ ಭಾರಿ ದೊಡ್ಡ ಪ್ಯಾಕೇಜ್ ಇರುವುದನ್ನು ಡೆಲಿವರಿ ಪಾರ್ಟ್‌ನರ್‌ಗಳು ಸುಲಭವಾಗಿ ಪತ್ತೆಹಚ್ಚಬಹುದು. ಆರ್ಡರ್‌ನಲ್ಲಿ ಏನಾದರೂ ತಪ್ಪುಗಳಾದರೆ ಅಥವಾ ಐಟಂ ಮಿಸ್ಸಿಂಗ್ ಆದಲ್ಲಿ ಗ್ರಾಹಕರಿಗೆ ದೂರು ನೀಡಲು ಯಾವುದೇ ವೇದಿಕೆ ಇರುವುದಿಲ್ಲ. ಅಲ್ಲದೆ, ಇಂತಹ ಸಣ್ಣ ಮೌಲ್ಯದ ಆರ್ಡರ್‌ಗಳು ಪದೇ ಪದೇ ಬಂದರೆ ಜೊಮ್ಯಾಟೊದ ಡೇಟಾ ಅನಾಲಿಟಿಕ್ಸ್ ಸಿಸ್ಟಮ್ ಅದನ್ನು ಸುಲಭವಾಗಿ ಪತ್ತೆಹಚ್ಚಬಲ್ಲದು ಎಂದು ಚರ್ಚಿಸಿದ್ದಾರೆ.
ಜೊಮ್ಯಾಟೊ ಮತ್ತು ಸ್ವಿಗ್ಗಿಗೆ ಮುಂದಿರುವ ಸವಾಲುಗಳು
ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಪ್ಲಾಟ್‌ಫಾರ್ಮ್ ಆಧಾರಿತ ಉದ್ಯಮಗಳಿಗೆ ತಮ್ಮ ಲಾಜಿಸ್ಟಿಕ್ಸ್ ನೆಟ್‌ವರ್ಕ್ ದುರುಪಯೋಗವಾಗದಂತೆ ತಡೆಯುವುದು ಈಗ ದೊಡ್ಡ ಸವಾಲಾಗಿದೆ. ಒಂದು ವೇಳೆ ಈ ವಂಚನೆ ಹೆಚ್ಚಾದರೆ ಕಂಪನಿಗಳು ಭವಿಷ್ಯದಲ್ಲಿ ಕಠಿಣ ನಿಯಮಗಳನ್ನು ತರಬೇಕಾಗುತ್ತದೆ. ರೆಸ್ಟೋರೆಂಟ್‌ಗಳ ತಪಾಸಣೆ, ಆರ್ಡರ್ ತೂಕದ ಪರಿಶೀಲನೆ (Weight Verification), ಪ್ಯಾಕೇಜ್ ಸ್ಕ್ಯಾನಿಂಗ್ ಸಿಸ್ಟಮ್ ಮತ್ತು ಹೆಚ್ಚಿನ ಕಂಟ್ರೋಲ್ ಹೇರಬೇಕಾಗುತ್ತದೆ. ಆದರೆ ಇದರಿಂದ ಸಾಮಾನ್ಯ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಈ ವೈರಲ್ ಸುದ್ದಿಯ ಬಗ್ಗೆ ಜೊಮ್ಯಾಟೊ ಸಂಸ್ಥೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೂ ಭಾರತದ ಆನ್‌ಲೈನ್ ಫುಡ್ ಮಾರುಕಟ್ಟೆಯಲ್ಲಿ ಲಾಭ ಮತ್ತು ಗ್ರಾಹಕರ ಅನುಕೂಲತೆಯ ನಡುವಿನ ಸಮತೋಲನದ ಬಗ್ಗೆ ಈ ಘಟನೆ ಹೊಸ ಸಂಚಲನ ಮೂಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

