ಬಡ್ಡಿ, ದಂಡದ ಬಗ್ಗೆ ಮಲ್ಯ ಲೆಕ್ಕ ಮಾಡಿಲ್ಲ: ವಿಜಯ್ ಮಲ್ಯ ಸಾಲ ಇನ್ನೂ ಬಾಕಿ ಇದೆ ಎಂದ ಬ್ಯಾಂಕುಗಳು
ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ಅವರು ತಾವು ಸಾಲ ಪಡೆದಿರುವುದಕ್ಕಿಂತಲೂ ಹೆಚ್ಚು ಹಣವನ್ನು ಬ್ಯಾಂಕ್‌ಗೆ ಕಟ್ಟಿರುವುದಾಗಿ ಹೇಳಿಕೊಂಡಿದ್ದರು. ಆದರೆ ಕೇಂದ್ರ ಹಣಕಾಸು ಸಚಿವಾಲಯ, ಬ್ಯಾಂಕುಗಳು ಮಲ್ಯ ಸಾಲ ಇನ್ನೂ ಬಾಕಿ ಇದೆ ಅಂತ ಹೇಳಿದ್ದಾರೆ.

ವಿಜಯ್ ಮಲ್ಯ ಹೇಳಿಕೆ
ರಾಜ್ ಸಮಾನಿ ನಡೆಸಿಕೊಟ್ಟ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಅವರು ತಾನು ಬ್ಯಾಂಕ್‌ಗಳಿಂದ ಪಡೆದ ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್‌ಗಳಿಗೆ ₹14,000 ಕೋಟಿ ಹೆಚ್ಚು ಕಟ್ಟಿದ್ದೇನೆ ಅಂತ ಹೇಳಿದ್ದರು. ಆದರೆ ಹಣಕಾಸು ಸಚಿವಾಲಯವೂ 2025ರ ಏಪ್ರಿಲ್ 10ರಂದು ನೀಡಿದ ಮಾಹಿತಿಯ ಪ್ರಕಾರ ವಿಜಯ್ ಮಲ್ಯ ಅವರು ಇನ್ನೂ ₹17,781 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದಾರಂತೆ. ಇದ್ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ಎಂಪ್ಲಾಯೀಸ್‌ಗಳ PF ಬಾಕಿಯೂ ಕೂಡ ಸೇರಿದೆ ಅಂತ ಹೇಳಿದೆ. ವಿಜಯ್ ಮಲ್ಯ ಕನಸಿನ ಕೂಸಾದ ಕಿಂಗ್‌ಫಿಷರ್ ಏರ್‌ಲೈನ್ಸ್ 9 ವರ್ಷಗಳ ಕಾಲ ಕೆಲಸ ಮಾಡಿ 2012 ಅಕ್ಟೋಬರ್ 20 ರಂದು ಮುಚ್ಚಲ್ಪಟ್ಟಿದೆ.
ಫೈನಾನ್ಸ್ ಮಿನಿಸ್ಟ್ರಿ ಹೇಳೋದೇನು?
ಸಂದರ್ಶನದಲ್ಲಿ ವಿಜಯ್ ಮಲ್ಯ ತಾನು ₹6,848 ಕೋಟಿ ಲೋನ್ ತಗೊಂಡಿದ್ದೆ, ಆದ್ರೆ ಬ್ಯಾಂಕ್‌ಗಳು ನನ್ನ ಕಂಪನಿ ಶೇರ್‌ಗಳನ್ನ ಮಾರಿ ₹14,000 ಕೋಟಿ ವಸೂಲಿ ಮಾಡಿಕೊಂಡಿವೆ ಅಂತ ಹೇಳಿದ್ರು. ಆದ್ರೆ ಫೈನಾನ್ಸ್ ಮಿನಿಸ್ಟ್ರಿ ಪ್ರಕಾರ, ಜೂನ್ 2013 ರಲ್ಲಿ DRT(Debts Recovery Tribunals)ಗೆ ಕೇಸ್ ಹೋದಾಗ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ₹6,848 ಕೋಟಿ ಲೋನ್ ಬಾಕಿ ಇತ್ತು. ಇದಕ್ಕೆ ಬಡ್ಡಿ ಸೇರಿ ₹17,781 ಕೋಟಿ ಆಗಿದೆ.
ಮಲ್ಯ ಬಡ್ಡಿ, ಪೆನಾಲ್ಟಿ ಸೇರಿಸಿಲ್ಲ ಎಂದ ಹಣಕಾಸು ಸಚಿವಾಲಯ
ಬ್ಯಾಂಕ್‌ಗಳು ₹6,848 ಕೋಟಿ ಅಸಲಿಗೆ ₹10,815 ಕೋಟಿ ವಸೂಲಿ ಮಾಡಿವೆ. ಇನ್ನೂ ₹6,997 ಕೋಟಿ ಬಾಕಿ ಇದೆ ಅಂತ ಹಣಕಾಸು ಸಚಿವಾಲಯ ಹೇಳಿದೆ. ಮಲ್ಯ ಅಸಲು ಮಾತ್ರ ಲೆಕ್ಕ ಹಾಕಿದ್ದಾರೆ. ಬಡ್ಡಿ, ಪೆನಾಲ್ಟಿ ಸೇರಿಸಿಲ್ಲ ಅಂತ ಬ್ಯಾಂಕ್‌ಗಳು ಹೇಳ್ತಿವೆ. ನಿರ್ಮಲಾ ಸೀತಾರಾಮನ್ ಕೂಡ ಬಾಕಿ ಹಣದಲ್ಲಿ ಕಿಂಗ್‌ಫಿಷರ್ ಎಂಪ್ಲಾಯೀಸ್‌ಗಳ ಪಿಎಫ್ ಬಾಕಿಯೂ ಕೂಡ ಸೇರಿದೆ ಅಂತ ಹೇಳಿದ್ದಾರೆ.
ಬ್ಯಾಂಕ್‌ಗಳ ಬಾಕಿ
ಅಸಲು ಬಡ್ಡಿ ಸೇರಿದ ನಂತರ ಬ್ಯಾಂಕ್‌ಗಳ ಬಾಕಿ ಹೀಗಿದೆ:
SBI: ಅಸಲು ₹1,939 ಕೋಟಿ, ಒಟ್ಟು ₹5,208 ಕೋಟಿ, ವಸೂಲಿ ₹3,174 ಕೋಟಿ;
PNB: ಅಸಲು ₹1,197 ಕೋಟಿ, ಒಟ್ಟು ₹3,084 ಕೋಟಿ, ವಸೂಲಿ ₹1,910 ಕೋಟಿ;
IDBI: ಅಸಲು ₹939 ಕೋಟಿ, ಒಟ್ಟು ₹2,390 ಕೋಟಿ, ವಸೂಲಿ ₹1,375 ಕೋಟಿ;
BOI: ಅಸಲು ₹708 ಕೋಟಿ, ಒಟ್ಟು ₹1,759 ಕೋಟಿ, ವಸೂಲಿ ₹1,034 ಕೋಟಿ;
BOB: ಅಸಲು ₹605 ಕೋಟಿ, ಒಟ್ಟು ₹1,580 ಕೋಟಿ, ವಸೂಲಿ ₹994 ಕೋಟಿ.