620 ಕೋಟಿ ಟಾಯ್ ಕಂಪನಿಯಿಂದ 12 ಸಾವಿರ ಕೋಟಿ ಮನೆ ವರೆಗೆ ಅಂಬಾನಿ ದುಬಾರಿ ಆಸ್ತಿಗಳು
ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬಳಿ ಐಷಾರಾಮಿ ವಾಹನಗಳಿಂದ ಹಿಡಿದು ದುಬಾರಿ ಆಸ್ತಿಗಳವರೆಗೆ ಎಲ್ಲವೂ ಇದೆ. ಅಂದಹಾಗೆ, ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ಭಾರತೀಯರಷ್ಟೇ ಅಲ್ಲ, ಅವರು ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮುಖೇಶ್ ಅಂಬಾನಿಯವರ 5 ದುಬಾರಿ ಆಸ್ತಿಗಳು ವಿವರ ಇಲ್ಲಿದೆ.
ಆಂಟಿಲಿಯಾ:
ವಿಶ್ವದ ಎರಡನೇ ಅತ್ಯಂತ ದುಬಾರಿ ಆಸ್ತಿ ಎಂದರೆ ಮುಕೇಶ್ ಅಂಬಾನಿ ಅವರ ಐಷಾರಾಮಿ ಬಂಗಲೆ 'ಆಂಟಿಲಿಯಾ'. ವರದಿ ಪ್ರಕಾರ 27 ಅಂತಸ್ತಿನ ಈ ಕಟ್ಟಡದ ವೆಚ್ಚ 12 ಸಾವಿರ ಕೋಟಿ. ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿ 4 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಆಂಟಿಲಿಯಾ ನಿರ್ಮಿಸಲಾಗಿದೆ. 2010 ರಲ್ಲಿ ಪೂರ್ಣಗೊಂಡ ಈ ಮನೆಯನ್ನು 600 ಉದ್ಯೋಗಿಗಳು ನೋಡಿಕೊಳ್ಳುತ್ತಿದ್ದಾರೆ. ಆಂಟಿಲಿಯಾ ಕೆಳಗಿನ ಮೊದಲ 6 ಮಹಡಿಗಳು ಪಾರ್ಕಿಂಗ್‌ಗಾಗಿವೆ. ಇವುಗಳಲ್ಲಿ 168 ಕಾರುಗಳನ್ನು ಏಕಕಾಲದಲ್ಲಿ ಪಾರ್ಕ್ ಮಾಡಬಹುದಾಗಿದೆ. ಪಾರ್ಕಿಂಗ್ ಲಾಟ್‌ನ ಮೇಲಿನ ಮಹಡಿಯಲ್ಲಿ 50 ಆಸನಗಳ ಸಿನಿಮಾ ಹಾಲ್ ಮತ್ತು ಅದರ ಮೇಲೆ ಹೊರಾಂಗಣ ಉದ್ಯಾನವಿದೆ. ಅಂಬಾನಿಯವರ ಈ ಮನೆಯಲ್ಲಿ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು 9 ಲಿಫ್ಟ್‌ಗಳಿವೆ. ಮನೆಯಲ್ಲಿ 1 ಸ್ಪಾ ಮತ್ತು ದೇವಸ್ಥಾನವಿದೆ. ಇದಲ್ಲದೇ ಯೋಗ ಸ್ಟುಡಿಯೋ, ಐಸ್ ಕ್ರೀಂ ಕೊಠಡಿ, ಮೂರು ಈಜುಕೊಳಗಳು ಮತ್ತು ಹೆಲಿಪ್ಯಾಡ್ ಕೂಡ ಇದೆ.
ಸ್ಟೋಕ್ ಪಾರ್ಕ್:
ಮುಕೇಶ್ ಅಂಬಾನಿ ಬ್ರಿಟನ್‌ನ ಪ್ರಸಿದ್ಧ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ 'ಸ್ಟೋಕ್ ಪಾರ್ಕ್' ಅನ್ನು 22 ಏಪ್ರಿಲ್ 2021 ರಂದು ಖರೀದಿಸಿದರು. ಸುಮಾರು 300 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಸ್ಟೋಕ್ ಪಾರ್ಕ್ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿದೆ. ಇದನ್ನು ಖರೀದಿಸಲು ಮುಖೇಶ್ ಅಂಬಾನಿ ಸುಮಾರು 600 ಕೋಟಿ ಖರ್ಚು ಮಾಡಿದ್ದಾರೆ. ಎರಡು ಜೇಮ್ಸ್ ಬಾಂಡ್ ಚಿತ್ರಗಳು 'ಗೋಲ್ಡ್ ಫಿಂಗರ್' (1964) ಮತ್ತು 'ಟುಮಾರೊ ನೆವರ್ ಡೈಸ್' (1997) ಅನ್ನು ಇಲ್ಲಿ ಚಿತ್ರೀಕರಿಸಲಾಗಿದೆ.
ಹ್ಯಾಮ್ಲೀಸ್ ಟಾಯ್ ಕಂಪನಿ:
ಮೇ 9, 2019 ರಂದು, ಮುಖೇಶ್ ಅಂಬಾನಿ ಬ್ರಿಟಿಷ್ ಆಟಿಕೆ ತಯಾರಕ 'ಹ್ಯಾಮ್ಲೀಸ್' ಅನ್ನು ಖರೀದಿಸಿದರು. ಹ್ಯಾಮ್ಲೀಸ್ ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಆಟಿಕೆ ಕಂಪನಿಯಾಗಿದೆ. ವರದಿಗಳ ಪ್ರಕಾರ, ಮುಖೇಶ್ ಅಂಬಾನಿ ಈ ಕಂಪನಿಯನ್ನು 67.96 ಮಿಲಿಯನ್ ಪೌಂಡ್‌ಗಳಿಗೆ ಅಂದರೆ ಸುಮಾರು 620 ಕೋಟಿಗೆ ಖರೀದಿಸಿದ್ದಾರೆ. ಈ ಕಂಪನಿಯನ್ನು 1760 ರಲ್ಲಿ ವಿಲಿಯಂ ಹ್ಯಾಮ್ಲಿ ಸ್ಥಾಪಿಸಿದರು. ಇದು ವಿಶ್ವಾದ್ಯಂತ 115 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ.
ಮ್ಯಾಂಡರಿನ್ ಓರಿಯಂಟಲ್ ಹೋಟೆಲ್ (ನ್ಯೂಯಾರ್ಕ್):
ಮುಕೇಶ್ ಅಂಬಾನಿ ಅವರು 2022 ರ ಜನವರಿಯಲ್ಲಿ ಪ್ರಸಿದ್ಧ ನ್ಯೂಯಾರ್ಕ್ ಹೋಟೆಲ್ ಮ್ಯಾಂಡರಿನ್ ಓರಿಯಂಟಲ್‌ನಲ್ಲಿ ಪ್ರಮುಖ ಪಾಲನ್ನು ಖರೀದಿಸಿದ್ದಾರೆ. ವರದಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಹೋಲ್ಡಿಂಗ್ಸ್ ಹೋಟೆಲ್‌ನ 73% ಷೇರುಗಳನ್ನು ಸುಮಾರು $ 98 ಮಿಲಿಯನ್ (ರೂ. 730 ಕೋಟಿ) ಗೆ ಖರೀದಿಸಿದೆ. ಈ 46-ಅಂತಸ್ತಿನ ಹೋಟೆಲ್ ನ್ಯೂಯಾರ್ಕ್‌ನ ಅತ್ಯಂತ ದುಬಾರಿ ಸ್ಥಳವಾದ ಮ್ಯಾನ್ಹ್ಯಾಟನ್‌ನಲ್ಲಿದೆ. ಈ ಹೋಟೆಲ್ 202 ಕೊಠಡಿಗಳು ಮತ್ತು 46 ಕೋಣೆಗಳನ್ನು ಹೊಂದಿದೆ. ಅನೇಕ ಹಾಲಿವುಡ್ ತಾರೆಯರು ಇಲ್ಲಿಯೇ ತಂಗುತ್ತಾರೆ.
ಐಪಿಎಲ್ ತಂಡ ಮುಂಬೈ ಇಂಡಿಯನ್ಸ್:
ಮುಕೇಶ್ ಅಂಬಾನಿ ಐಪಿಎಲ್ ತಂಡದ 'ಮುಂಬೈ ಇಂಡಿಯನ್ಸ್' ಮಾಲೀಕರಾಗಿದ್ದಾರೆ. 2008ರಲ್ಲಿ ಮುಖೇಶ್ ಅಂಬಾನಿ ಈ ತಂಡವನ್ನು ಖರೀದಿಸಿದ್ದರು. ಐಪಿಎಲ್‌ನ ಅತ್ಯಂತ ದುಬಾರಿ ತಂಡವೂ ಹೌದು. ವರದಿಯ ಪ್ರಕಾರ ಮುಖೇಶ್ ಅಂಬಾನಿ ಈ ತಂಡವನ್ನು ಸುಮಾರು 750 ಕೋಟಿ ರೂ.ಗೆ ಖರೀದಿಸಿದ್ದರು. ಈ ತಂಡ ಇದು ವರೆಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ಪ್ರಸ್ತುತ ಈ ತಂಡದ ಮೌಲ್ಯ ಸುಮಾರು 10 ಸಾವಿರ ಕೋಟಿ.