ತಲಾ ಆದಾಯದಲ್ಲಿ ಕರ್ನಾಟಕ ದೇಶಕ್ಕೆ ನಂ.1, ರಾಜ್ಯದ ಯಾವ ಜಿಲ್ಲೆ ಟಾಪ್ 10ರಲ್ಲಿದೆ
2024-25ರಲ್ಲಿ ಕರ್ನಾಟಕವು ₹2 ಲಕ್ಷ ತಲಾ ಆದಾಯ ದಾಟಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ದಶಕದಲ್ಲಿ 93.6% ಬೆಳವಣಿಗೆ ಕಂಡಿದೆ. ಬೆಂಗಳೂರು ನಗರವು ಅತಿ ಹೆಚ್ಚು ತಲಾ ಆದಾಯ ಹೊಂದಿದೆ.

ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ಮಂಡಿಸಿದ ಹೊಸ ಅಂಕಿಅಂಶಗಳ ಪ್ರಕಾರ, 2024–25ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು, ತಲಾ ಆದಾಯ ₹2 ಲಕ್ಷದ ಗಡಿಯನ್ನು ದಾಟಿದೆ. ಸ್ಥಿರ ಬೆಲೆಯಲ್ಲಿ ಕರ್ನಾಟಕದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (NSDP) ₹2,04,605 ತಲುಪಿದ್ದು, 2014–15ರಲ್ಲಿ ಇದು ₹1,05,697 ಇದ್ದುದರಿಂದ, ರಾಜ್ಯವು ದಶಕದಲ್ಲಿ 93.6%ರಷ್ಟು ಬೆಳವಣಿಗೆ ಕಂಡಿದೆ.
ರಾಷ್ಟ್ರೀಯ ಮಟ್ಟದಲ್ಲಿ, 2024–25ನೇ ಸಾಲಿನಲ್ಲಿ ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (NNI) ₹1,14,710 ಆಗಿದ್ದು, 2014–15ರಲ್ಲಿ ಇದು ₹72,805 ಇತ್ತು. ಇದರ ಅರ್ಥ, ದೇಶವ್ಯಾಪಿಯಾಗಿ 57.6% ರಷ್ಟು ಬೆಳವಣಿಗೆ ಕಂಡುಬಂದಿದೆ. ಆದರೂ, ಈ ಬೆಳವಣಿಗೆಯ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ತೀವ್ರವಾಗಿ ಬದಲಾಗಿದೆ. ಕರ್ನಾಟಕದ ತಲಾ ಆದಾಯವು ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಮೀರಿಸಿದೆ. ತಮಿಳುನಾಡು ₹1,96,309 ತಲಾ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ.
ದಶಕದ ಅವಧಿಯಲ್ಲಿ, ಕರ್ನಾಟಕದ ಆದಾಯವು ದ್ವಿಗುಣವಾಗುವ ಹಂತವನ್ನು ತಲುಪಿದ್ದು, 2013–14ರಲ್ಲಿ ₹1,01,858 ಇದ್ದ ಆದಾಯ, 2023–24ರ ವೇಳೆಗೆ ₹1,91,970 ತಲುಪಿದೆ. ಇದು 88.5% ಬೆಳವಣಿಗೆ ಎಂದು ದೃಢಪಡಿಸುತ್ತದೆ. ಇತ್ತೀಚಿನ ವರ್ಷದ ಬೆಳವಣಿಗೆ ಬಗ್ಗೆ ಮಾತನಾಡಿದರೆ, 2023–24ರಲ್ಲಿ ₹1,91,970 ರಿಂದ 2024–25ರಲ್ಲಿ ₹2,04,605 ಕ್ಕೆ ಏರಿಕೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 6.6 ರಷ್ಟು ಏರಿಕೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.
ಇನ್ನು ಕರ್ನಾಟಕಕ್ಕೆ ಕೊಡುಗೆ ನೀಡಿದ ಟಾಪ್ 10 ಜಿಲ್ಲೆಗಳು ಮತ್ತು ಅತೀ ಕಡಿಮೆ ತಲಾ ಆದಾಯ ಹೊಂದಿರುವ ಜಿಲ್ಲೆಗಳನ್ನು ಇಲ್ಲಿ ನೀಡಲಾಗಿದೆ. ನಂಬರ್ 1 ಸ್ಥಾನದಲ್ಲಿ ಬೆಂಗಳೂರು ನಗರ ಇದ್ದು, 893K ತಲಾ ಆದಾಯವನ್ನು ಹೊಂದಿದೆ. ಕಲಬುರಗಿ ಕೊನೆ ಸ್ಥಾನದಲ್ಲಿದ್ದು 183K ತಲಾ ಆದಾಯವನ್ನು ಹೊಂದಿದೆ
ಇಲ್ಲಿ ಟಾಪ್ 10 ಜಿಲ್ಲೆಗಳ ತಲಾ ಆದಾಯ ಪಟ್ಟಿ ನೀಡಲಾಗಿದೆ.
ಬೆಂಗಳೂರು ನಗರ 893K
ದಕ್ಷಿಣ ಕನ್ನಡ 669K
ಉಡುಪಿ 584K
ಚಿಕ್ಕಮಗಳೂರು 569K
ಶಿವಮೊಗ್ಗ 419K
ಕೊಡಗು 400K
ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ 386K
ರಾಮನಗರ 370K
ಹಾಸನ 352K
ಮಂಡ್ಯ 349K
ಉತ್ತರ ಕನ್ನಡ 312K