ಆಸ್ತಿ ಮಾರಾಟ, ಖರೀದಿ ವೇಳೆ ಈ ಮೊತ್ತಕ್ಕಿಂತ ಜಾಸ್ತಿ ಕ್ಯಾಶ್ ತಗೊಂಡ್ರೆ ಬರುತ್ತೆ ಐಟಿ ನೋಟಿಸ್!
ಆಸ್ತಿ ಖರೀದಿಸುವಾಗ, ಮಾರಾಟ ಮಾಡುವಾಗ ಆದಾಯ ಇಲಾಖೆಯ ನಿಮಯ ಕುರಿತು ತಿಳಿದಿರಬೇಕಾಗಿರುವುದು ಅತ್ಯಗತ್ಯ, ಕಾರಣ ಆದಾಯ ತೆರಿಗೆ ಇಲಾಖೆ ಸೂಚಿಸುವ ಮೊತ್ತಕ್ಕಿಂತ ಹೆಚ್ಚಿನ ಹಣ ನಗದು ಮೂಲಕ ವಹಿವಾಟು ನಡೆಸಿದರೆ ಐಟಿ ನೋಟಿಸ್ ಪಕ್ಕಾ ಬರಲಿದೆ.
ಕ್ಯಾಶ್ ಮಿತಿ
ಆಸ್ತಿ ಖರೀದಿ ಅಥವಾ ಮಾರಾಟ ಮಾಡುವಾಗ ಹಣ ವ್ಯವಹಾರದ ನಿಯಮಗಳ ಬಗ್ಗೆ ತಿಳಿದಿರಬೇಕು. ಆಸ್ತಿ ವ್ಯವಹಾರಗಳಲ್ಲಿ ಹಣ ಬಳಕೆಗೆ ಕಠಿಣ ನಿಯಮಗಳಿವೆ. ಇವುಗಳನ್ನು ಪಾಲಿಸದಿದ್ದರೆ, ಸಮಸ್ಯೆಗೆ ಸಿಲುಕಬಹುದು. ನಿಮ್ಮಲ್ಲಿ ನಗದು ಹಣವಿದೆ ಎಂದ ಮಾತ್ರಕ್ಕೆ ನಗದು ಮೂಲಕ ಆಸ್ತಿ ಖರೀದಿಸಿದರೆ ಸಂಕಷ್ಟಕ್ಕೆ ಬೀಳುವುದು ಖಚಿತ. ಇಷ್ಟೇ ಅಲ್ಲ ನೀವು ಆಸ್ತಿ ಮಾರಾಟ ಮಾಡುವಾಗಲು ನಗದು ಮೂಲಕ ಹಣ ಸ್ವೀಕರಿಸಿದರೂ ನಿಮಗೆ ಸಂಕಷ್ಟ ತಪ್ಪಿದ್ದಲ್ಲ.
ರಿಯಲ್ ಎಸ್ಟೇಟ್‌ನಲ್ಲಿ ಹಣ ವ್ಯವಹಾರಕ್ಕೆ ಕಠಿಣ ನಿಯಮಗಳಿವೆ. ಮಿತಿ ಮೀರಿದರೆ, ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬಹುದು. 19,999 ರೂಪಾಯಿಗಿಂತ ಹೆಚ್ಚು ನಗದು ಹಣ ವ್ಯವಹರಿಸುವಂತಿಲ್ಲ. 2015ರ ಆದಾಯ ತೆರಿಗೆ ಕಾಯ್ದೆಯ 269SS, 269T, 271D ಮತ್ತು 271E ವಿಭಾಗಗಳ ತಿದ್ದುಪಡಿಗಳನ್ನು ಆಧರಿಸಿದೆ. ಹೀಗಾಗಿ ಎಷ್ಟೇ ದೊಡ್ಡ ಆಸ್ತಿ ಖರೀದಿಸಿ ಅಥವಾ ಮಾರಾಟ ಮಾಡಿ, ನೀವು 19,999 ರೂಪಾಯಿ ನಗದು ಹಣದ ವ್ಯವಹಾರ ಮಾಡುವಂತಿಲ್ಲ. ಇದಕ್ಕಿಂತ ಹೆಚ್ಚಾದರೆ ಸಂಕಷ್ಟವೂ ತಪ್ಪಿದ್ದಲ್ಲ.
IT ನೋಟಿಸ್
₹20,000 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಆಸ್ತಿ ಮಾರಾಟದ ಮೂಲಕ ಪಡೆದರೆ, ಅಥವಾ ಆಸ್ತಿ ಖರೀದಿ ವೇಳೆ ನೀಡಿದರೆ ಐಟಿ ನೋಟಿಸ್ ಬರಲಿದೆ. ಹೀಗೆ ಪಡೆದ ಅಥವಾ ನೀಡಿದ ನಗದು ಹಣದ %100 ದಂಡ ವಿಧಿಸಲಾಗುತ್ತದೆ. ₹50,000 ಅಥವಾ ₹1 ಲಕ್ಷ ಹಣ ಪಡೆದರೆ, ಆದಾಯ ತೆರಿಗೆ ಇಲಾಖೆಗೆ ಇದರ ದುಪ್ಪಟ್ಟು ಹಣ ದಂಡದ ರೂಪದಲ್ಲಿ ಪಾವತಿಸಬೇಕು.
ಮಾರಾಟ ರದ್ದಾದರೆ, ₹20,000 ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಮರಳಿ ಪಡೆದರೆ, ಆ ಹಣಕ್ಕೂ %100 ದಂಡ ವಿಧಿಸಲಾಗುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು ಅಥವಾ ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಹೀಗಾಗಿ ನಗದು ವಹಿವಾಟು ಮಾಡುವಾಗ ಎಚ್ಚರ ಅತ್ಯಗತ್ಯ. ಹೀಗಾಗಿ ಹೆಚ್ಚಿನ ಮೊತ್ತದ ವ್ಯವಹಾರವನ್ನು ಬ್ಯಾಂಕ್ ಮೂಲಕವೇ ನಡೆಸುವುದು ಉತ್ತಮ.
ಆದಾಯ ತೆರಿಗೆ ನಿಯಮಗಳು
ಕ್ಯಾಶ್ ವ್ಯವಹಾರವನ್ನು ಆಸ್ತಿ ದಾಖಲೆಯಲ್ಲಿ ದಾಖಲಿಸಲಾಗುತ್ತದೆ. ರಿಜಿಸ್ಟ್ರಾರ್‌ಗಳು ಹಣ ವ್ಯವಹಾರವನ್ನು ನಿಲ್ಲಿಸದಿದ್ದರೂ, ಅವರು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತಾರೆ. ಇದರಿಂದಾಗಿ ತನಿಖೆ ಅಥವಾ ದಂಡ ವಿಧಿಸಬಹುದು. ನೋಂದಣಿ ಆಗಿರುವ ಆಸ್ತಿಯನ್ನು ಮಾರಾಟ ಮಾಡುವಾಗ ಈ ದಾಖಲೆ ಪತ್ರಗಳು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಮಾಡಬೇಕು. ಈ ವೇಳೆ ಆಸ್ತಿ ಮಾರಾಟ ಮಾಡಿದ ಹಾಗೂ ಖರೀದಿಸಿದ ಇಬ್ಬರ ವ್ಯವಹಾರ ಸರಿಯಾಗಿರಬೇಕು. ಹೆಚ್ಚಿನ ಮೊತ್ತ ನಗದು ಮೂಲಕ ವ್ಯವಹರಿಸಿದ್ದರೆ, ಕಪ್ಪು ಹಣ ಅಥವಾ ಭ್ರಷ್ಟ ಹಣ ಎಂದೇ ಪರಿಗಣಿಸಲಾಗುತ್ತದೆ.