ಸಿ.ಜೆ ರಾಯ್ ಸಾವು: ಕೊಠಡಿ ಹೊರಗಡೆ ನಿಂತಿದ್ದ ಸಿಬ್ಬಂದಿಗೆ ಗುಂಡಿನ ಶಬ್ಧ ಕೇಳಿಸಲಿಲ್ಲ! ಯಾಕೆ?
ಖ್ಯಾತ ಉದ್ಯಮಿ ಡಾ. ಸಿ.ಜೆ. ರಾಯ್ ಅವರು ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬಳಸಿದ 0.25 ಎನ್‌ಪಿ ಬೋರ್ ಪಿಸ್ತೂಲ್‌ನಿಂದ ಕಡಿಮೆ ಶಬ್ದ ಬಂದಿದ್ದರಿಂದ, ಘಟನೆ ನಡೆದ 15 ನಿಮಿಷಗಳ ನಂತರವಷ್ಟೇ ಈ ವಿಷಯ ಬೆಳಕಿಗೆ ಬಂದಿದೆ.

ಗುಂಡಿನ ಶಬ್ಧಬರಲಿಲ್ಲವೇ?
ಬೆಂಗಳೂರು: ಖ್ಯಾತ ಉದ್ಯಮಿ ಡಾ. ಸಿ.ಜೆ. ರಾಯ್ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ತೀವ್ರ ಆಘಾತ ಮೂಡಿಸಿದೆ. ಘಟನೆ ನಡೆದ ಬಳಿಕ ಸುಮಾರು 10 ರಿಂದ 15 ನಿಮಿಷಗಳವರೆಗೆ ಕಚೇರಿ ಸಿಬ್ಬಂದಿಗೆ ಆತ್ಮ*ಹತ್ಯೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಇದರ ಬಗ್ಗೆ ಸಹಜವಾಗಿಯೇ ಗುಂಡಿನ ಶಬ್ಧಬರಲಿಲ್ಲವೇ ಎಂಬ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿತ್ತು.
15 ನಿಮಿಷಗಳ ನಂತರ ಬೆಳಕಿಗೆ ಬಂತು
ರಾಯ್ ತನ್ನ ಕಚೇರಿ ಕೊಠಡಿಗೆ ತೆರಳುವ ಮುನ್ನ ತನ್ನ ತಾಯಿ ಜೊತೆ ಮಾತನಾಡಲು ಇದೆ ಎಂದು ಹೇಳಿದ್ದಕ್ಕೆ ಅವರೊಂದಿಗಿದ್ದ ಕಂಪೆನಿ ಡೈರೆಕ್ಟರ್ ಅವರೊಂದಿಗೆ ಹೋಗಿರಲಿಲ್ಲ. ಜೊತೆಗೆ ತನ್ನ ಗನ್ ಮ್ಯಾನ್ ಗೆ ಒಳಗೆ ಬರಲು ಯಾರನ್ನು ಬಿಡಬೇಡ ಎಂದು ಹೇಳಿದ್ದರು. ಇಷ್ಟೆಲ್ಲ ಜನ ಜತೆಗೆ ಇದ್ದರೂ ಕೂಡ ಯಾರಿಗೂ ಗನ್ ಸೌಂಡ್ ಕೇಳಲಿಲ್ಲ. ಘಟನೆ ನಡೆದು 15 ನಿಮಿಷಗಳ ನಂತರ ಬೆಳಕಿಗೆ ಬಂದಿತ್ತು. ಲಾಕ್ ಆಗಿದ್ದ ಡೋರ್ ಅನ್ನು ಒಡೆದು ಒಳಹೋಗಲಾಗಿತ್ತು. ಇದಕ್ಕೆಲ್ಲ ಕಾರಣವಿದೆ.
ಬಳಸಿದ್ದ ಪಿಸ್ತೂಲ್ 0.25 ಎನ್‌ಪಿ ಬೋರ್ ನದ್ದು
ಡಾ. ಸಿ.ಜೆ. ರಾಯ್ ಅವರು ಬಳಸಿದ್ದ ಪಿಸ್ತೂಲ್ 0.25 ಎನ್‌ಪಿ ಬೋರ್‌ನದ್ದಾಗಿದ್ದು, ಅತಿ ಕಡಿಮೆ ಶಬ್ದ ಹೊರಬರುವ ಕಾರಣದಿಂದಾಗಿ ಗುಂಡಿನ ಸದ್ದು ಕಚೇರಿಯ ಹೊರಗೆ ಕೇಳಿಸಿರಲಿಲ್ಲ. ಗನ್ ಅನ್ನು ಎದೆಯ ಹತ್ತಿರ ಇಟ್ಟುಕೊಂಡು ಅತ್ಯಂತ ಸಮೀಪದಿಂದ ಗುಂಡು ಹಾರಿಸಿಕೊಂಡಿರುವುದರಿಂದ ದೊಡ್ಡ ಮಟ್ಟದ ಶಬ್ದ ಉಂಟಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಚೇರಿಯೊಳಗೆ ಶಾಂತ ವಾತಾವರಣ ಇರುವಾಗ ಬಾಗಿಲು ತೆಗೆಯದಿರುವುದರಿಂದ ಸಿಬ್ಬಂದಿಗೆ ಅನುಮಾನ ಉಂಟಾಗಿ ಬಾಗಿಲು ಬಡಿದಾಗಲೇ ಏನೋ ಅನಾಹುತ ಸಂಭವಿಸಿರುವುದು ಗೊತ್ತಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಶೋಕ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.
ಕೋಣೆ ಬಾಗಿಲು ಹಾಕಿಕೊಳ್ಳದಂತೆ ರಾಯ್ ಗೆ ಐಟಿ ಅಧಿಕಾರಿಗಳ ಸೂಚನೆ
ಐಟಿ ದಾಳಿ ವೇಳೆ ರಾಯ್ ಮಧ್ಯಾಹ್ನ 12.30ರ ವೇಳೆ ತಮ್ಮ ಕಚೇರಿಗೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ತಾನು ಸ್ಪಲ್ಪ ರೆಸ್ಟ್ ಮಾಡುತ್ತೇನೆ ಎಂದು ಹೇಳಿ ವಿಶ್ರಾಂತಿ ಕೋಣೆಗೆ ಹೋಗಿದ್ದಾರೆ. ಆಗ ಕೋಣೆ ಬಾಗಿಲು ಹಾಕಿಕೊಳ್ಳದಂತೆ ರಾಯ್ ಅವರಿಗೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಬಳಿಕ ಕೋಣೆಗೆ ತೆರಳಿ ರಾಯ್ ಗುಂಡು ಹಾರಿಸಿಕೊಂಡಿದ್ದಾರೆ. ವಿಶ್ರಾಂತಿ ಕೋಣೆಗೆ ಮೃತ ರಾಯ್ ಅವರು ತೆರಳುವ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸೊಕೋ ತಂಡದೊಂದಿಗೆ ತನಿಖೆ
ಘಟನೆಗೆ ಸಂಬಂಧಿಸಿ ಅಶೋಕ್ ನಗರ ಪೊಲೀಸರು ಸೀನ್ ಆಫ್ ಕ್ರೈಮ್ ಅಧಿಕಾರಿಗಳು (SOCO – Scenes of Crime Officers) ಜೊತೆಗೂಡಿ ತನಿಖೆ ಕೈಗೊಂಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಕುಟುಂಬಸ್ಥರು ಹಾಗೂ ಡಾ. ಸಿ.ಜೆ. ರಾಯ್ ಅವರ ಆಪ್ತ ಕಾನ್ಫಿಡೆಂಟ್ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಪ್ರಕರಣದ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ಮುಂದುವರಿದಿದೆ.
ವೈದ್ಯಕೀಯ ಹಾಗೂ ವಿಧಿವಿಜ್ಞಾನ ವಿವರಗಳು
ಪ್ರಾಥಮಿಕ ತನಿಖೆ ಮತ್ತು ಘಟನಾ ಸ್ಥಳದ ಸೂಕ್ಷ್ಮ ಪರಿಶೀಲನೆಯ ನಂತರ, ಇದು ಸ್ವಯಂ ಗುಂಡು ಹಾರಿಸಿಕೊಂಡು ಮಾಡಿಕೊಂಡ ಸಾವು ಎಂಬುದು ದೃಢಪಟ್ಟಿದೆ. ವೈದ್ಯಕೀಯ ವರದಿ ಪ್ರಕಾರ, ಡಾ. ಸಿ.ಜೆ. ರಾಯ್ ಅವರು ತಮ್ಮ ಬಲಗೈಯಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ.
ಗುಂಡು ಎದೆಯ ಎಡಭಾಗದ ಮೂಲಕ ದೇಹದೊಳಗೆ ಪ್ರವೇಶಿಸಿ, ನೇರವಾಗಿ ಸಾಗಿಕೊಂಡು ಬೆನ್ನಿನ ಭಾಗದಲ್ಲಿ ಸಿಲುಕಿಕೊಂಡಿದೆ. ಕೇವಲ ಒಂದು ಸುತ್ತು ಮಾತ್ರ ಗುಂಡು ಹಾರಿಸಲಾಗಿದ್ದು, ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ. ಬದಲಾಗಿ ಗುಂಡು ಆಳವಾಗಿ ದೇಹದೊಳಗೆ ನುಗ್ಗಿರುವುದು ಪತ್ತೆಯಾಗಿದೆ. ರಾಯ್ ಬಳಸಿದ 0.25 ಎನ್‌ಪಿ ಬೋರ್ ಪಿಸ್ತೂಲ್ ಅವರದ್ದೇ ಹೆಸರಿನಲ್ಲಿದೆ. ಪ್ರಸ್ತುತ ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಪರಿಶೀಲನೆಗಾಗಿ ಪಿಸ್ತೂಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.
ಅಂತ್ಯಕ್ರಿಯೆ ಹಾಗೂ ಅಂತಿಮ ದರ್ಶನ
ಡಾ. ಸಿ.ಜೆ. ರಾಯ್ ಅವರ ಅಂತ್ಯಕ್ರಿಯೆ ಬನ್ನೇರುಘಟ್ಟ ಕಾಸಗ್ರ್ಯಾಂಡ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಇಂದು ಸಂಜೆ ಅಥವಾ ನಾಳೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂತಿಮ ದರ್ಶನಕ್ಕಾಗಿ ಡಾ. ಸಿ.ಜೆ. ರಾಯ್ ಅವರ ಪಾರ್ಥಿವ ದೇಹವನ್ನು ಕೋರಮಂಗಲದಲ್ಲಿರುವ ‘ವೈಟ್ ಹೌಸ್’ನಲ್ಲಿ ಇರಿಸಲಾಗುವುದು. ಈ ವೈಟ್ ಹೌಸ್, ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕರಾಗಿರುವ ಅವರ ಸಹೋದರ ಬಾಬು ಅವರ ಒಡೆತನದಲ್ಲಿದೆ. ಇಲ್ಲಿ ಕುಟುಂಬಸ್ಥರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಉದ್ಯಮ ವಲಯದ ಪ್ರಮುಖರು, ಸಿನಿಮಾ ತಾರೆಯರು ಹಾಗೂ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

