AI ತಂತ್ರಜ್ಞಾನದಿಂದ ಬ್ಯಾಂಕ್ ಉದ್ಯೋಗಿಗಳ ಕೆಲಸ ಹೋಗುತ್ತಾ? 2 ಲಕ್ಷ ಮಂದಿಯಲ್ಲಿ ಆತಂಕ
ಎರಡರಿಂದ ಮೂರು ವರ್ಷದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಪೂರ್ಣ ಎಐ ತಂತ್ರಜ್ಞಾನ ಸಂಪೂರ್ಣವಾಗಿ ಆವರಿಸಲಿದೆ. ಇದು ಬರೋಬ್ಬರಿ 2 ಲಕ್ಷ ಮಂದಿ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಂದು ವರದಿಗಳು ಹೇಳುತ್ತಿದೆ. ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ಸಮೀಕ್ಷೆಯ ಸ್ಫೋಟಕ ವರದಿ ಏನು?
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದೆ. ಪ್ರಮುಖವಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬ್ಯಾಂಕಿಂಗ್ ಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಿದೆ. ಈ ಮೂಲಕ ಬಳಕೆದಾರರಿಗೆ ನಿಖರ ಹಾಗೂ ತ್ವರಿತ ಸೇವೆ ನೀಡಲು ಬದಲಾವಣೆಯಾಗುತ್ತಿದೆ. ದಿನದ 24 ಗಂಟೆ ಬ್ಯಾಂಕಿಂಗ್ ಸೇವೆ ಎಐ ಮೂಲಕ ಲಭ್ಯವಿರುವಂತೆ ಮಾಡಲಾಗುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಎಐ ಪ್ರವೇಶ ಹಾಗೂ ಬಳಕೆ ಹಲವು ಉದ್ಯೋಗಿಗಳ ಕೆಲಸಕ್ಕೆ ಕತ್ತರಿ ಹಾಕುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ. ವರದಿ ಪ್ರಕಾರ ಬರೋಬ್ಬರಿ 2 ಲಕ್ಷ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ಹೋಗುವ ಭೀತಿ ಇದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಈ ಕೆಲಸಗಳನ್ನು ಕಿತ್ತುಕೊಳ್ಳಲಿದೆ ಎಂದು ವರದಿ ಹೇಳಿದೆ.
ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ನಡೆಸಿದ ಸಮೀಕ್ಷೆ ಈ ಆತಂಕ ಹೆಚ್ಚಿಸಿದೆ. ಮುಂದಿನ 3 ರಿಂದ 5 ವರ್ಷಗಳಲ್ಲಿ ಜಾಗತಿಕವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ವರದಿಯಾಗಿದೆ. ಬ್ಯಾಕ್ ಆಫೀಸ್, ಮಿಡ್ಲ್ ಆಫೀಸ್ ಮತ್ತು ಆಪರೇಷನ್ ಹುದ್ದೆಗಳಲ್ಲಿ ಕೆಲಸ ಮಾಡುವವರ ಉದ್ಯೋಗಗಳು ಅಪಾಯದಲ್ಲಿವೆ.
ಶೀಘ್ರದಲ್ಲೇ ಗ್ರಾಹಕ ಸೇವೆಯಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ. KYC ಪರಿಶೀಲನೆ ಮಾಡುವ ಉದ್ಯೋಗಿಗಳ ಉದ್ಯೋಗಗಳು ಅಪಾಯದಲ್ಲಿವೆ. ಆಟೋಮೇಶನ್ ಮೂಲಕ ಕೆಲ ಗ್ರಾಹಕರ ಸೇವೆಗಳು ಎಐ ನಿರ್ವಹಿಸಲಿದೆ. ಇದರಿಂದ ಈ ಕೆಲಸಗಳು ಅಪಾಯದಲ್ಲಿದೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ಗಳು ತಮ್ಮ IT ವ್ಯವಸ್ಥೆಯನ್ನು ನವೀಕರಿಸುತ್ತಿವೆ. ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಬರುತ್ತಿವೆ. ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ಇತ್ತೀಚೆಗೆ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳ ಸಮೀಕ್ಷೆ ನಡೆಸಿದೆ. ಈ ವರದಿ ಇದೀಗ ಬಹಿರಂಗವಾಗಿದ್ದು, ಹಲವು ಉದ್ಯೋಗಿಗಳ ಭವಿಷ್ಯ ಅತಂತ್ರವಾಗುತ್ತಿದೆ ಅನ್ನೋ ಸೂಚನೆ ನೀಡಿದೆ.
ಮುಂದಿನ ಕೆಲ ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಬ್ಯಾಂಕ್ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಮತ್ತು AI ಅವರ ಸ್ಥಾನವನ್ನು ತುಂಬಲಿದೆ ಎಂದು ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ (BI) ಈ ಕಂಪನಿಯ ಹಿರಿಯ ವಿಶ್ಲೇಷಕ ಮತ್ತು ಲೇಖಕ ಥಾಮಸ್ ನಾಟ್ಜೆನ್ ಹೇಳಿದ್ದಾರೆ. ಪುನರಾವರ್ತಿತ ಕೆಲಸಗಳನ್ನು ಹೊಂದಿರುವ ಉದ್ಯೋಗಗಳು, ಅಂದರೆ ಒಂದೇ ಕೆಲಸವನ್ನು ಪದೇ ಪದೇ ಮಾಡಬೇಕಾದ ಉದ್ಯೋಗಗಳು ಹೆಚ್ಚು ಅಪಾಯದಲ್ಲಿವೆ ಎಂದು ನಾಟ್ಜೆನ್ ಅಭಿಪ್ರಾಯಪಟ್ಟಿದ್ದಾರೆ.
AI ಎಲ್ಲಾ ಉದ್ಯೋಗಗಳನ್ನು ತೆಗೆದುಕೊಳ್ಳುವುದಿಲ್ಲ, ಬದಲಿಗೆ ಕಾರ್ಯಪಡೆಯನ್ನು ಹೊಸ ಕ್ಷೇತ್ರಗಳಿಗೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದ್ದಾರೆ. ಸರಳವಾಗಿ ಹೇಳುವುದಾದರೆ, ಮುಂದಿನ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ. ಈ ಬದಲಾವಣೆಗಳು ಜಾಗತಿಕವಾಗಿರುತ್ತವೆ.