- Home
- Karnataka Districts
- Bengaluru Urban
- ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ವೇಳಾಪಟ್ಟಿ ಪ್ರಕಟ: ನಿಲ್ದಾಣ, ಸಮಯದ ವಿವರ ಇಲ್ಲಿದೆ
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ವೇಳಾಪಟ್ಟಿ ಪ್ರಕಟ: ನಿಲ್ದಾಣ, ಸಮಯದ ವಿವರ ಇಲ್ಲಿದೆ
ಬೆಂಗಳೂರು ಕೆಎಸ್‌ಆರ್ ನಿಲ್ದಾಣ (KSR Bengaluru) ಮತ್ತು ಮುಂಬೈ (CSMT) ನಡುವೆ ನೂತನ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲಿನ ಸಮಯ, ಪ್ರಮುಖ ನಿಲುಗಡೆ ಹಾಗೂ ದಿನಗಳ ಸಂಪೂರ್ಣ ವಿವರ ಇಲ್ಲಿದೆ.

ರೈಲ್ವೆ ಮಂಡಳಿ ಅಧಿಕೃತ ಪ್ರಕಟಣೆ
ಬೆಂಗಳೂರು (ಅ.02): ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ದೇಶದ ಆರ್ಥಿಕ ರಾಜಧಾನಿ ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ ‘ಕೆಎಸ್ಆರ್ ಬೆಂಗಳೂರು (KSR Bengaluru) - ಮುಂಬೈ ಸಿಎಸ್‌ಎಂಟಿ (CSMT)’ ನಡುವಿನ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ (Vande Bharat Sleeper Express) ರೈಲಿನ ಸಂಚಾರ ವೇಳಾಪಟ್ಟಿ ಮತ್ತು ನಿಲ್ದಾಣಗಳ ವಿವರವನ್ನು ರೈಲ್ವೆ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ. ಈ ರೈಲು ವಾರದಲ್ಲಿ 6 ದಿನಗಳ ಕಾಲ ಸಂಚರಿಸಲಿದೆ.
ರೈಲು ಸಂಖ್ಯೆ ಮತ್ತು ಸಂಚಾರದ ದಿನಗಳು:
ಈ ಮಾರ್ಗದಲ್ಲಿ ರೈಲು ಸಂಖ್ಯೆ 27651 / 27652 ಹೆಸರಿನಲ್ಲಿ ವಾರಕ್ಕೆ 6 ದಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ.
ರೈಲು ಸಂಖ್ಯೆ 27652 (ಬೆಂಗಳೂರು-ಮುಂಬೈ): ಸೋಮವಾರ ಹೊರತುಪಡಿಸಿ ವಾರದ ಉಳಿದ 6 ದಿನ ಸಂಚಾರ.
ರೈಲು ಸಂಖ್ಯೆ 27651 (ಮುಂಬೈ-ಬೆಂಗಳೂರು): ಮಂಗಳವಾರ ಹೊರತುಪಡಿಸಿ ವಾರದ ಉಳಿದ 6 ದಿನ ಸಂಚಾರ.
ರೈಲಿನ ವೇಳಾಪಟ್ಟಿ ವಿವರ:
ಬೆಂಗಳೂರು - ಮುಂಬೈ (ರೈಲು ಸಂಖ್ಯೆ: 27652):
ಈ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ರಾತ್ರಿ 10:00 ಗಂಟೆಗೆ (22:00) ಹೊರಟು, ಮರುದಿನ ಮಧ್ಯಾಹ್ನ 1:50ಕ್ಕೆ (13:50) ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತಲುಪಲಿದೆ. ಈ ರೈಲು ಸೋಮವಾರ ಹೊರತುಪಡಿಸಿ ವಾರದ ಉಳಿದ ಆರು ದಿನವೂ ಸಂಚರಿಸಲಿದೆ.
ಮುಂಬೈ - ಬೆಂಗಳೂರು (ರೈಲು ಸಂಖ್ಯೆ: 27651):
ಮುಂಬೈನಿಂದ ರಾತ್ರಿ 10:30ಕ್ಕೆ (22:30) ಹೊರಡುವ ರೈಲು, ಮರುದಿನ ಮಧ್ಯಾಹ್ನ 2:50ಕ್ಕೆ (14:50) ಬೆಂಗಳೂರು ತಲುಪಲಿದೆ. ಈ ರೈಲು ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನಗಳ ಕಾಲ ಸೇವೆ ನೀಡಲಿದೆ.
ಪ್ರಮುಖ ನಿಲುಗಡೆಗಳು (Stoppages):
ಈ ರೈಲು ಧರ್ಮಾವರಂ ಮತ್ತು ವಾಡಿ ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ಪ್ರಮುಖ ನಿಲ್ದಾಣಗಳಲ್ಲಿ ವಾಣಿಜ್ಯಿಕ ನಿಲುಗಡೆ (Commercial Stoppages) ಕಲ್ಪಿಸಲಾಗಿದೆ:
ಅನಂತಪುರ (Anantapur)
ಗುಂತಕಲ್ (Guntakal)
ರಾಯಚೂರು (Raichur)
ಕಲಬುರಗಿ (Kalaburagi)
ಸೋಲಾಪುರ (Solapur)
ಪುಣೆ (Pune)
ಕಲ್ಯಾಣ್ (Kalyan)
ಅತ್ಯಾಧುನಿಕ ಸೌಲಭ್ಯಗಳಿರುವ ಸ್ಲೀಪರ್ ರೇಕ್
ಅತ್ಯಾಧುನಿಕ ಸೌಲಭ್ಯಗಳಿರುವ 2 ವಂದೇ ಭಾರತ್ ಸ್ಲೀಪರ್ ರೇಕ್‌ಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿವೆ. ರಾತ್ರಿ ವೇಳೆ ಆರಾಮದಾಯಕ ನಿದ್ರೆಯೊಂದಿಗೆ ವೇಗದ ಪ್ರಯಾಣವನ್ನು ಈ ರೈಲು ಒದಗಿಸಲಿದ್ದು, ಐಟಿ ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಪ್ರವಾಸಿಗರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ. ಈ ರೈಲು ಬೆಂಗಳೂರು-ಮುಂಬೈ ನಡುವಿನ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸಲಿದೆ. ಒಟ್ಟು 2 ರೇಕ್‌ಗಳೊಂದಿಗೆ ಈ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭವಾಗಲಿದ್ದು, ಶೀಘ್ರದಲ್ಲೇ ಉದ್ಘಾಟನಾ ದಿನಾಂಕ ಹಾಗೂ ಟಿಕೆಟ್ ದರಗಳ ಕುರಿತು ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

