- Home
- Karnataka Districts
- Bengaluru Urban
- ಬೆಂಗಳೂರು ಸುರಂಗ ಮಾರ್ಗದಿಂದ ಲಾಲ್ ಬಾಗ್ ಕೈಬಿಟ್ಟ ಸರ್ಕಾರ; ಬೇರೆ ಸ್ಥಳದ ಮಾಹಿತಿ ಕೊಟ್ಟ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು ಸುರಂಗ ಮಾರ್ಗದಿಂದ ಲಾಲ್ ಬಾಗ್ ಕೈಬಿಟ್ಟ ಸರ್ಕಾರ; ಬೇರೆ ಸ್ಥಳದ ಮಾಹಿತಿ ಕೊಟ್ಟ ಸಚಿವ ಕೃಷ್ಣಬೈರೇಗೌಡ
ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ಗೆ ಸಂಪರ್ಕಿಸುವ ಟನಲ್ ರಸ್ತೆ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಜನರ ವಿರೋಧದ ಹಿನ್ನೆಲೆಯಲ್ಲಿ ಲಾಲ್ಬಾಗ್ ಪ್ರದೇಶವನ್ನು ಯೋಜನೆಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ. ಪರ್ಯಾಯ ಮಾರ್ಗಗಳ ಶೋಧನೆ ನಡೆಯುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಬೆಂಗಳೂರು (ನ.25): ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತರದ ಹೆಬ್ಬಾಳದಿಂದ ದಕ್ಷಿಣದ ಸಿಲ್ಕ್ ಬೋರ್ಡ್ಗೆಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ (ಟನಲ್ ರೋಡ್) ಯೋಜನೆಯ ನಿಯೋಜಿತ ಮಾರ್ಗದಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದ್ದು, ಲಾಲ್ಬಾಗ್ ಪ್ರದೇಶವನ್ನು ಯೋಜನೆಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜನರ ಮಾತಿಗೆ ಬದ್ಧ, ಲಾಲ್ಬಾಗ್ ಹೊರಗೆ ಟನಲ್:
ಈ ಹಿಂದಿನ ಯೋಜನೆಯ ಪ್ರಕಾರ ಸುರಂಗ ಮಾರ್ಗವು ಲಾಲ್ಬಾಗ್ ಮೂಲಕ ಹೊರಬರುತ್ತಿತ್ತು ಮತ್ತು ನಿರ್ಗಮನಕ್ಕಾಗಿ (ಎಕ್ಸಿಟ್) ಲಾಲ್ಬಾಗ್ನಲ್ಲಿ ರ್ಯಾಂಪ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಲಾಲ್ಬಾಗ್ ವಾಕರ್ಸ್, ಪರಿಸರ ಪ್ರಿಯರು, ಸ್ಥಳೀಯ ಶಾಸಕರು, ಸಂಸದರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಮತ್ತು ಹೋರಾಟ ನಡೆದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ, "ಲಾಲ್ಬಾಗ್ನಲ್ಲಿ ಟನಲ್ ಮಾಡುವುದಿಲ್ಲ, ಲಾಲ್ಬಾಗ್ನಿಂದ ಟನಲ್ ಹೊರಗೆ ಹೋಗುತ್ತದೆ. ಅಲೈನ್ಮೆಂಟ್ ಬದಲಾವಣೆಯಾಗುತ್ತದೆ. ನಾವು ಈಗಾಗಲೇ ಜನರಿಗೆ ಕೊಟ್ಟ ಮಾತಿಗೆ ಬದ್ಧವಾಗಿದ್ದೇವೆ. ಜನರಿಗೆ ಕೊಟ್ಟ ಮಾತಿನಂತೆ ಲಾಲ್ಬಾಗ್ ಅನ್ನು ಟಚ್ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ಪರ್ಯಾಯ ರಸ್ತೆಗಳ ಹುಡುಕಾಟ:
ಪ್ರಸ್ತುತ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಸರ್ವೆ ನಡೆಯುತ್ತಿದ್ದು, ಪರ್ಯಾಯವಾಗಿ ಎರಡು ರಸ್ತೆಗಳ ಹುಡುಕಾಟದಲ್ಲಿ ಇರುವುದಾಗಿ ಸಚಿವರು ತಿಳಿಸಿದ್ದಾರೆ. "ಸ್ಥಳ ಇನ್ನೂ ಅಂತಿಮವಾಗಿಲ್ಲ. ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯುತ್ತಿದೆ" ಎಂದಿದ್ದಾರೆ.
ದರ ಏರಿಕೆ, ಟೋಲ್ ಅವಧಿ ಮತ್ತು 7 ಸಾವಿರ ಕೋಟಿ ನೆರವು:
ಅಲೈನ್ಮೆಂಟ್ ಬದಲಾವಣೆಯಿಂದ ಯೋಜನೆಯ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಅದನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. "ಟೋಲ್ ದರ ಜಾಸ್ತಿಯಾಗುವುದಿಲ್ಲ, ಆದರೆ ಅವಧಿ ಹೆಚ್ಚಾಗಬಹುದು. ದರವನ್ನು ಕಡಿಮೆ ಮಾಡುವಂತೆ ಮುಖ್ಯಕಾರ್ಯದರ್ಶಿಯವರಿಗೆ ಸೂಚಿಸಿದ್ದು, ಕಂಟ್ರಾಕ್ಟರ್ ಜೊತೆ ನೆಗೋಶಿಯೇಟ್ ಮಾಡಲು ಹೇಳಿದ್ದೇವೆ. ಸರ್ಕಾರದಿಂದ 7 ಸಾವಿರ ಕೋಟಿ ರೂಪಾಯಿ ನೀಡಲಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.















