ಜನರೇಷನ್ ಬದಲಾದಂತೆ ಒಂದೊಂದು ಕಂಪನಿಗಳು ಜನರಿಗೆ ಹತ್ತಿರವಾಗುತ್ತವೆ. ಈಗ ಏನಿದ್ದರೂ ಮೀ ಉತ್ಪನ್ನಗಳ ಕಾಲ. ಮಧ್ಯಮವರ್ಗದ ಮಂದಿಯ ಹಾಟ್ ಫೇವರಿಟ್ ಅನ್ನಿಸಿಕೊಂಡಿರುವ ಶಿಯೋಮಿ ಕಂಪನಿ ಲೇಟೆಸ್ಟ್ ಆಗಿ ಮೀ ಬ್ಯಾಂಡ್ 4 ಬಿಡುಗಡೆ ಮಾಡಿದೆ. 

ಹೇಗಿದೆ ಈ ಫಿಟ್‌ನೆಸ್ ಬ್ಯಾಂಡು ನೋಡೋಣ ಅಂತ ಕೈಗೆ ಕಟ್ಟಿಕೊಂಡ್ರೆ ಗೊತ್ತೇ ಆಗದಷ್ಟು ಹಗುರ. ದೂರದಿಂದಲೇ ಆಕರ್ಷಿಸುವಷ್ಟು ಚೆಂದ. ಬಣ್ಣಬಣ್ಣದ ಡಿಸ್‌ಪ್ಲೇ ಈ ಫಿಟ್‌ನೆಸ್ ಬ್ಯಾಂಡಿನ ಪ್ಲಸ್ ಪಾಯಿಂಟು. 

ಸದ್ಯ ಇರುವ ಡಿಸ್‌ಪ್ಲೇ ಬೋರ್ ಅನ್ನಿಸಿದರೆ ಬೇರೆ ಡಿಸ್‌ಪ್ಲೇ ಹಾಕಿಕೊಳ್ಳಬಹುದು. ಅದೂ ಸಾಕು ಅನ್ನಿಸಿದರೆ ನಿಮಗೆ ಬೇಕಾದ ಫೋಟೋವನ್ನೇ ಡಿಸ್‌ಪ್ಲೇಯಾಗಿ ಪರಿವರ್ತಿಸಬಹುದು. ಅದನ್ನೆಲ್ಲಾ ನೋಡುವಾಗ ಮೀ ಬ್ಯಾಂಡ್ 3 ಖರೀದಿಸಿರುವವರು ಎಕ್ಸ್‌ಚೇಂಜ್ ಆಫರ್ ಇದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುವುದರಲ್ಲಿ ಅಚ್ಚರಿಯಿಲ್ಲ.

ಇದನ್ನೂ ಓದಿ | ಮುಚ್ಚುತ್ತಾ ಬಿಎಸ್‌ಎನ್‌ಎಲ್‌ : ಇಲ್ಲಿದೆ ಸ್ಪಷ್ಟನೆ ?...

0.95 ಅಮೋಲ್ಡ್ ಡಿಸ್‌ಪ್ಲೇ ಹೊಂದಿರುವ ಈ ಬ್ಯಾಂಡು ಕೈಗೆ ಕಟ್ಟಿಕೊಂಡು ಪ್ಲೇ ಸ್ಟೋರ್‌ನಲ್ಲಿ ಮೀ ಫಿಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಒಂದು ಹಂತದ ಕಾರ್ಯಾಚರಣೆ ಮುಗಿಯುತ್ತದೆ. 

ಅನಂತರ ಮುಂದಿನ ಹಂತ. ಈ ಬ್ಯಾಂಡು ಕೈಗೆ ಕಟ್ಟಿಕೊಂಡರಷ್ಟೇ ಸಾಲದು, ಇಲ್ಲಿ ಯಾವುದೂ ಡಿಫಾಲ್ಟ್ ಆಯ್ಕೆಗಳಿಲ್ಲ. ಎಲ್ಲಾ ಫೀಚರ್‌ಗಳನ್ನೂ ಆ್ಯಪ್‌ಗೆ ಹೋಗಿ ಆನ್ ಮಾಡಿಕೊಳ್ಳಬೇಕು.

ಕೈತಿರುಗಿಸಿದ ತಕ್ಷಣ ಡಿಸ್‌ಪ್ಲೇ ಆನ್ ಆಗುವ ಆಯ್ಕೆ, ಕಾಲ್-ಮೆಸೇಜ್ ನೋಟಿಫಿಕೇಷನ್‌ಗಳು ಬ್ಯಾಂಡ್‌ನಲ್ಲಿ ತೋರಿಸುವ ಆಯ್ಕೆ, ನೀವು ನಡೆದ ಹೆಜ್ಜೆಗಳ ಲೆಕ್ಕಾಚಾರ ಇವುಗಳೆಲ್ಲವನ್ನೂ ನೀವು ಆ್ಯಪ್‌ನಲ್ಲಿ ಆನ್ ಮಾಡಿದರೆ ಮಾತ್ರ ಬ್ಯಾಂಡ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಆಯ್ಕೆಗಳು ಡಿಫಾಲ್ಟ್ ಇಲ್ಲದೇ ಇರುವುದು ಕೆಲವರಿಗೆ ಒಳ್ಳೆಯದು. ಇನ್ನು ಕೆಲವರಿಗೆ ಕೆಟ್ಟದ್ದು. ಅವರವರ ಭಾವಕ್ಕೆ ತಕ್ಕಂತೆ.

ಒಂದು ವಾರ ಈ ಫಿಟ್‌ನೆಸ್ ಬ್ಯಾಂಡ್ ಅನ್ನು ಕೈಗೆ ಕಟ್ಟಿಕೊಂಡು ತಿರುಗಿದ ಅನುಭವದಲ್ಲಿ ಹೇಳುವುದಾದರೆ ಇಟ್ಟ ಹೆಜ್ಜೆಗಳ ಲೆಕ್ಕ ಇಡುವುದರಲ್ಲಿ ಈ ಬ್ಯಾಂಡು ಬಹಳ ಹುಷಾರು. ಒಂದೆರಡು ಹೆಜ್ಜೆಗಳು ಆಚೀಚೆಯಾಗಬಹುದಾದರೂ ಸಹೃದಯ ಬಳಕೆದಾರರು ಮನ್ನಿಸಬಹುದು. 

ಓಡುವಾಗ, ಸೈಕಲ್ ತುಳಿಯುವಾಗ ಈ ಎಲ್ಲಾ ಸಂದರ್ಭಗಳ ಹಾರ್ಟ್‌ರೇಟು ನಿಮ್ಮ ಗಮನದಲ್ಲಿರುತ್ತದೆ. ಇದರ ಮತ್ತೊಂದು ಒಳ್ಳೆಯ ಗುಣವೆಂದರೆ ಈಜುವಾಗಲೂ ನೀವೆಷ್ಟು ಕಷ್ಟಪಟ್ಟಿದ್ದೀರಿ ಎನ್ನುವ ಲೆಕ್ಕ ಇದರಲ್ಲಿ ಇರುತ್ತದೆ. ನೀರಲ್ಲಿ ಮುಳುಗಿದರೆ ಈ ವಾಚ್‌ಗೆ ಏನೂ ಆಗುವುದಿಲ್ಲ. ನಿಮ್ಮ ಮೊಬೈಲಲ್ಲಿ ಪ್ಲೇ ಆಗುತ್ತಿರುವ ಹಾಡು ಯಾವುದು ಅನ್ನುವುದನ್ನೂ ವಾಚ್‌ನಲ್ಲೇ ನೋಡಬಹುದು. ವ್ಯಾಲ್ಯೂಮ್ ಅಡ್ಜಸ್ಟ್ ಕೂಡ ಮಾಡಬಹುದು.

ಇದನ್ನೂ ಓದಿ | ಜಿಯೋ ದೀಪಾವಳಿ ಉಡುಗೊರೆ; ಇಂಥಾ ಆಫರ್ ಯಾರ್ ಬಿಡ್ತಾರೆ!...

ಈ ಫಿಟ್‌ನೆಸ್ ಬ್ಯಾಂಡ್‌ನ ಬ್ಯಾಟರಿ ಪವರ್ ಮಾತ್ರ ನಿಜಕ್ಕೂ ಅಗಾಧ. ಕಂಪನಿಯವರು 20 ದಿನ ಬಾಳಿಕೆ ಬರುತ್ತದೆ ಅನ್ನುತ್ತಾರೆ. ಒಂದು ವಾರ ಬಳಸಿದ ನಂತರವೂ ಬ್ಯಾಂಡಿನಲ್ಲಿ ಶೇ.50 ಬ್ಯಾಟರಿ ಉಳಿದಿತ್ತು ಅನ್ನುವುದು ಬ್ಯಾಟರಿಯ ಉತ್ತಮ ಗುಣಕ್ಕೆ ಸಾಕ್ಷಿ. 

ಈ ಬ್ಯಾಂಡಿನ ಒಂದೇ ಬೇಸರದ ಸಂಗತಿ ಎಂದರೆ ಚಾರ್ಜರ್. ಡಿಸ್‌ಪ್ಲೇಯನ್ನು ವಾಚ್ ಬೆಲ್ಟ್‌ನಿಂದ ಬೇರ್ಪಡಿಸಿ ಚಾರ್ಜರ್‌ನೊಳಗೆ ಇಡಬೇಕು. ಆಗ ಚಾರ್ಜ್ ಆಗುತ್ತದೆ. ಆದರೆ ಆ ಚಾರ್ಜರ್‌ನಲ್ಲಿ ಡಿಸ್‌ಪ್ಲೇ ಭಾಗ ಸರಿಯಾಗಿ ಕೂರುವುದಿಲ್ಲ. ಸ್ವಲ್ಪ ಕಷ್ಟಪಟ್ಟು ಎರಡು ಕೊಟ್ಟು ಕೂರಿಸಬೇಕು. ಆಗಲೂ ಒಮ್ಮೊಮ್ಮೆ ಪುಳಕ್ಕನೆ ಆಚೆ ಹಾರುತ್ತದೆ. ಬ್ಯಾಟರಿ ಸಾಮರ್ಥ್ಯ ಚೆನ್ನಾಗಿರುವುದರಿಂದ ತುಂಬಾ ದೊಡ್ಡ ತೊಂದರೆಯೇನೂ ಇಲ್ಲ.

ದುಬಾರಿ ಬೆಲೆಯ ಫಿಟ್‌ನೆಸ್ ಬ್ಯಾಂಡ್‌ಗಳಲ್ಲಿರುವ ಬಹುತೇಕ ಫೀಚರ್ ಇದರಲ್ಲೂ ಇದೆ. ಒಂದೆರಡು ಫೀಚರ್ ಜಾಸ್ತಿಯೇ ಇದ್ದರೂ ಇರಬಹುದು. ಹಾಗಾಗಿ ಈ ಬ್ಯಾಂಡ್‌ಗೆ 5ರಲ್ಲಿ 4 ಸ್ಟಾರ್ ಧಾರಾಳವಾಗಿ ನೀಡಬಹುದು.

ಇದರ ಬೆಲೆ ರು.2,299.