ಚಾಟ್ ಜಿಪಿಟಿ ಬುದ್ಧಿವಂತ ಅಂತ ಜನರು ಭಾವಿಸಿದ್ದಾರೆ. ಆದರೆ ಎಲ್ಲ ವಿಷ್ಯದಲ್ಲೂ ಇದು ಸತ್ಯವಲ್ಲ. ಕೆಲವೊಂದು ವಿಷ್ಯದ ಬಗ್ಗೆ ಚಾಟ್ ಜಿಪಿಟಿ ಬಳಿ ಅಪ್ಪಿತಪ್ಪಿಯೂ ಸಲಹೆ ಕೇಳ್ಬೇಡಿ. 

ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ಎಲ್ಲಿದೆ ಅಂತ ಕೇಳಿದ್ರೆ ಈಗಿನ ಜನರು ಎಐ ಹೆಸ್ರು ಹೇಳ್ತಾರೆ. ಚಾಟ್ ಜಿಪಿಟಿ ಸೇರಿದಂತೆ ಇತರ ಎಐ ಕೇಳಿದ್ರೆ ಆನ್ಸರ್ ಸಿಗುತ್ತೆ, ಮತ್ತ್ಯಾಕೆ ಟೆನ್ಷನ್ ಅಂದ್ಕೊಳ್ತಾರೆ. 2022 ರಲ್ಲಿ ಪ್ರಾರಂಭವಾದಾಗಿನಿಂದ ಚಾಟ್ ಜಿಪಿಟಿ ( ChatGPT) ಪ್ರಪಂಚದಾದ್ಯಂತ ತ್ವರಿತವಾಗಿ ಜನಪ್ರಿಯತೆ ಗಳಿಸಿದೆ. ವರದಿಗಳ ಪ್ರಕಾರ, ಇದನ್ನು ಪ್ರತಿದಿನ 1 ಬಿಲಿಯನ್ ಬಾರಿ ಸರ್ಚ್ ಮಾಡಲಾಗುತ್ತೆ. ಗೂಗಲ್(Google) ಗಿಂತ ವೇಗವಾಗಿ ಇದು ಪ್ರಸಿದ್ಧಿ ಪಡೆಯುತ್ತಿದೆ. ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಕಾರ್ಯನಿರ್ವಹಿಸುವ ಚಾಟ್ ಜಿಪಿಟಿಯನ್ನು ಜನರು ಬರವಣಿಗೆ, ಕೋಡಿಂಗ್, ಸಂಶೋಧನೆ ಮತ್ತು ಗ್ರಾಹಕ ಸೇವೆ ಸೇರಿದಂತೆ ಅನೇಕ ಕೆಲಸಕ್ಕೆ ಬಳಸಿಕೊಳ್ತಿದ್ದಾರೆ. ಚಾಟ್ ಜಿಪಿಟಿಯನ್ನು ಮನುಷ್ಯರಂತೆ ಕೆಲವರು ಪ್ರೀತಿ ಮಾಡಿದ್ರೆ ಮತ್ತೆ ಕೆಲವರು ತಮ್ಮ ಕೆಲ್ಸವನ್ನು ಚಾಟ್ ಜಿಪಿಟಿ ಮೂಲಕ ಸುಲಭವಾಗಿ ಮಾಡಿಕೊಳ್ತಿದ್ದಾರೆ. ಪ್ರಪಂಚದಾದ್ಯಂತ ಎಲ್ಲರ ಫೆವರೆಟ್ ಆಗಿರುವ ಈ ಚಾಟ್ ಜಿಪಿಟಿಯನ್ನೂ ಸಾಕಷ್ಟು ದೋಷವಿದೆ. ಕೆಲವೊಂದು ಸಮಸ್ಯೆಗೆ ಚಾಟ್ ಜಿಪಿಟಿ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಸುಮ್ಮನಿರೋದೇ ಮೇಲು. ಅದನ್ನು ಕುರುಡಾಗಿ ನಂಬಿದ್ರೆ ಲಾಭಕ್ಕಿಂತ ನಷ್ಟ ಹೆಚ್ಚಾಗ್ಬಹುದು.

ಅಪ್ಪಿತಪ್ಪಿಯೂ ಚಾಟ್ ಜಿಪಿಟಿ ಅಥವಾ ಎಐ ಸಲಹೆ ಕೇಳ್ಬೇಡಿ :

ವೈಯಕ್ತಿಕ ಮಾಹಿತಿ ಹಂಚಿಕೆ : ಚಾಟ್ ಜಿಪಿಟಿ ನಿಮಗೆ ಎಷ್ಟೇ ಆಪ್ತವಾಗಿರಲಿ, ಪ್ರಿಯವಾಗಿರಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅದ್ರಲ್ಲಿ ಹಂಚಿಕೊಳ್ಳುವ ತಪ್ಪು ಮಾಡ್ಬೇಡಿ. ಹಾಗೆ ಟ್ರೆಂಡ್ ಚಕ್ಕರ್ ಗೆ ಬೀಳೋಕೆ ಹೋಗ್ಬೇಡಿ. ಕೆಲ ದಿನಗಳ ಹಿಂದೆ ಘಿಬ್ಲಿ (Ghibli) ಟ್ರೆಂಡ್ ಬಂದಿತ್ತು. ಜನರು ತಮ್ಮ ವೈಯಕ್ತಿಕ ಫೋಟೋಗಳನ್ನು ಅದರಲ್ಲಿ ಹಂಚಿಕೊಂಡಿದ್ದರು. ಅದು ಅಪಾಯಕಾರಿ ಅಂತ ಕೆಲವರು ಹೇಳ್ತಾನೆ ಬಂದಿದ್ದಾರೆ. ಈಗಲ್ಲ ಅಂದ್ರೂ ಮುಂದಿನ ದಿನಗಳಲ್ಲಿ ಇದು ನಿಮಗೆ ಅಪಾಯ ತರಬಹುದು.

ಹೂಡಿಕೆ ಬಗ್ಗೆ ಸಲಹೆ : ಷೇರು ಮಾರುಕಟ್ಟೆ ಅಥವಾ ಹೂಡಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಸಲಹೆಯನ್ನು ನೀವು ಚಾಟ್ ಜಿಪಿಟಿ ಕೇಳಿ ತೆಗೆದುಕೊಳ್ಬೇಡಿ. ಇದ್ರಲ್ಲಿ ಪೂರ್ತಿ ಮಾಹಿತಿ ಸಿಗದೆ ಇರಬಹುದು ಇಲ್ಲದೆ ಹಳೆ ಡೇಟಾ ಆಧರಿಸಿ ನಿಮಗೆ ಸಲಹೆ ನೀಡಬಹುದು. ಇದ್ರಿಂದ ನಿಮ್ಮ ಹೂಡಿಕೆ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚು. ನೀವು ತಜ್ಞರು ಅಥವಾ ಖುದ್ದು ಇದ್ರ ಬಗ್ಗೆ ಮಾಹಿತಿ ಸಂಗ್ರಹಿಸೋದು ಉತ್ತಮ.

ಆರೋಗ್ಯ : ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ರೂ ಕೆಲವರು ಚಾಟ್ ಜಿಪಿಟಿ ಸಲಹೆ ಕೇಳ್ತಾರೆ. ಇದು ಅತ್ಯಂತ ದೊಡ್ಡ ತಪ್ಪು. ಎಐ, ಡಾಕ್ಟರ್ ಆಗಲು ಸಾಧ್ಯವಿಲ್ಲ. ಚಾಟ್ ಜಿಪಿಟಿ ಹೇಳಿದ ಔಷಧಿ ಪಡೆದು ಆರೋಗ್ಯ ಹದಗೆಡಿಸಿಕೊಳ್ಳುವ ಬದಲು ಡಾಕ್ಟರ್ ಭೇಟಿಯಾಗಿ ಸಲಹೆ ಪಡೆಯುವುದು ಸೂಕ್ತ.

ಕಾನೂನು ಸಲಹೆ : ಕಾನೂನು ವಿಷಯದಲ್ಲಿ ಚಾಟ್ ಜಿಪಿಟಿ ಅಥವಾ AI ಸಹಾಯ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ ಇಂದೇ ಬಿಡಿ. ಎಐ ಕಾನೂನು ಅಭಿಪ್ರಾಯ ತಪ್ಪಾಗಿರುವ ಸಾಧ್ಯತೆ ಇರುತ್ತದೆ. ಇದ್ರಿಂದ ನೀವು ತೊಂದರೆಗೆ ಸಿಲುಕಬಹುದು. ಕಾನೂನು ವಿಷಯಗಳಲ್ಲಿ ವಕೀಲರಿಂದ ಸಲಹೆ ಪಡೆಯಬೇಕೇ ವಿನಃ ಎಐ ಅಥವಾ ಚಾಟ್ ಜಿಪಿಟಿಯಿಂದ ಅಲ್ಲ.

ಅಪಾಯಕಾರಿ – ಹಿಂಸಾತ್ಮಕ ಮಾಹಿತಿ : ಬಾಂಬ್ ತಯಾರಿಸುವುದು ಹೇಗೆ, ಗಲಭೆ ಎಬ್ಬಿಸುವುದು ಹೇಗೆ ಎಂಬೆಲ್ಲ ಅಪಾಯಕಾರಿ, ಹಿಂಸಾತ್ಮಕ ಮಾಹಿತಿಯನ್ನು ಕೇಳಬೇಡಿ. ಇದು ಕಾನೂನು ಬಾಹಿರ ಯಾವುದೇ ಮಾಹಿತಿಯನ್ನು ನಿಮಗೆ ನೀಡುವುದಿಲ್ಲ.

ಚಾಟ್ ಜಿಪಿಟಿ ಸಹಾಯ ಹೇಗೆ ಪಡೆಯಬೇಕು? : ಟ್ರಿಪ್ ಪ್ಲಾನ್, ನಗರಗಳ ಬಗ್ಗೆ ಮಾಹಿತಿ, ಓದು, ಕೌಶಲ್ಯ ವೃದ್ಧಿಯ ಬಗ್ಗೆ ನೀವು ಚಾಟ್ ಜಿಪಿಟಿಯಲ್ಲಿ ಕೇಳ್ಬಹುದು.