ಪ್ರತಿಷ್ಠಿತ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ಮಾರಾಟ ಮಾಡಲು ಸಿದ್ಧತೆಗ್ಲೇಜರ್‌ ಕುಟುಂಬ ಕಳೆದ 17 ವರ್ಷಗಳಿಂದ ಯುನೈಟೆಡ್‌ ತಂಡದ ಮಾಲಿಕತ್ವ ಹೊಂದಿದೆಮ್ಯಾಂಚೆಸ್ಟರ್ ಯುನೈಟೆಡ್‌ ತಂಡವನ್ನು 2005ರಲ್ಲಿ ಗ್ಲೇಜರ್‌ ಕುಟುಂಬ ಖರೀದಿಸಿತ್ತು

ದೋಹಾ(ನ.24): ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌(ಇಪಿಎಲ್‌)ನ ಪ್ರಮುಖ ಕ್ಲಬ್‌, ಪ್ರತಿಷ್ಠಿತ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ಮಾರಾಟ ಮಾಡಲು ಸಿದ್ಧವಿರುವುದಾಗಿ ತಂಡದ ಮಾಲೀಕರು ತಿಳಿಸಿದ್ದಾರೆ. ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ತಂಡದಿಂದ ನಿರ್ಗಮಿಸಿದ ಬೆನ್ನಲ್ಲೇ ತಂಡದ ಮಾರಾಟ ಸುದ್ದಿ ಹೊರಬಿದ್ದಿದೆ. 

ಅಮೆರಿಕ ಮೂಲದ ಗ್ಲೇಜರ್‌ ಕುಟುಂಬ ಕಳೆದ 17 ವರ್ಷಗಳಿಂದ ಯುನೈಟೆಡ್‌ ತಂಡದ ಮಾಲಿಕತ್ವ ಹೊಂದಿದ್ದು, ಈ ಕುಟುಂಬದ ಸುದೀರ್ಘ ಕಾಲದ ಅಧಿಪತ್ಯಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲ ರೀತಿಯ ಪರ್ಯಾಯ ಕಾರ‍್ಯ ತಂತ್ರಗಳನ್ನು ಕ್ಲಬ್‌ ಪರಿಗಣಿಸುತ್ತದೆ ಎಂದು ಮಾಲೀಕರು ತಿಳಿಸಿದ್ದಾರೆ. ಇಂಗ್ಲೆಂಡ್‌ನ ಓಲ್ಡ್‌ ಟ್ರಾಫರ್ಡ್‌ ಮೂಲದ ಯುನೈಟೆಡ್‌ ತಂಡವನ್ನು 2005ರಲ್ಲಿ ಗ್ಲೇಜರ್‌ ಕುಟುಂಬ ಖರೀದಿಸಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಇಪಿಎಲ್‌ ಲೀಗ್‌ನಲ್ಲಿ 5ನೇ ಸ್ಥಾನದಲ್ಲಿದೆ.

ಝಾಕಿರ್‌ಗೆ ಆಹ್ವಾನ ನೀಡಿಲ್ಲ: ಭಾರತಕ್ಕೆ ಕತಾರ್‌ ಸ್ಪಷ್ಟನೆ

ದೋಹಾ: ದ್ವೇಷ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುತ್ತಿದ್ದ ಆರೋಪಗಳನ್ನು ಹೊತ್ತುಕೊಂಡು ಭಾರತದಲ್ಲಿ ಮೋಸ್ಟ್‌ ವಾಂಟೆಡ್‌ ಎನಿಸಿಕೊಂಡಿರುವ ಝಾಕಿರ್‌ ನಾಯ್‌್ಕಗೆ ಫಿಫಾ ವಿಶ್ವಕಪ್‌ ವೇಳೆ ಪ್ರವಚನ ನೀಡಲು ಆಹ್ವಾನ ನೀಡಿಲ್ಲ ಎಂದು ಭಾರತಕ್ಕೆ ಕತಾರ್‌ ಸ್ಪಷ್ಟಪಡಿಸಿದೆ. 

FIFA World Cup ಇಂದು ಮತ್ತೆ ಬಲಿಷ್ಠ ತಂಡಗಳ ಪೈಪೋಟಿ: ಬ್ರೆಜಿಲ್, ಪೋರ್ಚುಗಲ್, ಉರುಗ್ವೆ ಶುಭಾರಂಭ ನಿರೀಕ್ಷೆ

ಟೂರ್ನಿಯ ವೇಳೆ ಝಾಕಿರ್‌ಗೆ ಪ್ರವಚನಕ್ಕೆ ಆಹ್ವಾನ ನೀಡಲಾಗಿದೆ ಎಂದು ಸುದ್ದಿಯಾಗಿದ್ದು, ಇದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಕತಾರ್‌ ರಾಜತಾಂತ್ರಿಕ ಮಾರ್ಗಗಳ ಮೂಲಕ ಸ್ಪಷ್ಟನೆ ನೀಡಿದೆ. ‘ಫಿಫಾ ವಿಶ್ವಕಪ್‌ಗೆ ಝಾಕಿರ್‌ ನಾಯ್‌್ಕಗೆ ಕತಾರ್‌ ಆಹ್ವಾನ ನೀಡಿಲ್ಲ. ಕತಾರ್‌-ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ಹಾಳು ಮಾಡಲು ಬೇರೆ ದೇಶಗಳು ತಪ್ಪು ಮಾಹಿತಿ ನೀಡಿದೆ’ ಎಂದು ಕತಾರ್‌ ತಿಳಿಸಿದೆ.

ಬುಲ್ಸ್‌ಗೆ ಸತತ 2ನೇ ಸೋಲಿನ ಆಘಾತ

ಹೈದರಾಬಾದ್‌: 9ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಸತತ 2ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಬಾಕಿಯಾಗಿದೆ. ಬುಧವಾರ ಬೆಂಗಾಲ್‌ ವಾರಿಯ​ರ್‍ಸ್ ವಿರುದ್ಧದ ಪಂದ್ಯದಲ್ಲಿ ಬುಲ್ಸ್‌ 38-41 ಅಂಕಗಳಿಂದ ವಿರೋಚಿತ ಸೋಲು ಕಂಡಿತು. ಪಂದ್ಯದ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಬುಲ್ಸ್‌ ಮೊದಲಾರ್ಧಕ್ಕೆ 22-18 ಅಂಕಗಳಿಂದ ಮುನ್ನಡೆ ಪಡೆದಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ಬೆಂಗಾಲ್‌ ಸತತ ಅಂಕಗಳೊಂದಿಗೆ ಬುಲ್ಸ್‌ ಮೇಲೆ ಹಿಡಿತ ಸಾಧಿಸಿತು. ಭರತ್‌ 10 ಅಂಕಗಳೊಂದಿಗೆ ಮತ್ತೊಮ್ಮೆ ತಂಡಕ್ಕೆ ಆಸರೆಯಾದರೂ, ವಿಕಾಸ್‌ ಖಂಡೋಲ್‌(05) ವಿಫಲರಾದರು. ಬೆಂಗಾಲ್‌ ಪರ ಮಣೀಂದರ್‌ ಸಿಂಗ್‌ 11 ರೈಡ್‌ ಅಂಕ ಸಂಪಾದಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥ​ರ್‍ಸ್ ವಿರುದ್ಧ 39-32 ಅಂಕಗಳಿಂದ ಗೆದ್ದ ಪುಣೇರಿ ಪಲ್ಟನ್‌ ನಂ.1 ಸ್ಥಾನ ಭದ್ರಪಡಿಸಿಕೊಂಡಿತು. ಅರ್ಜುನ್‌ ದೇಸ್ವಾಲ್‌ 19 ರೈಡ್‌ ಅಂಕ ಗಳಿಸಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.

ವಿಶ್ವ ಕಿರಿಯರ ಬಾಕ್ಸಿಂಗ್‌: ಭಾರತಕ್ಕೆ 11 ಪದಕ ಖಚಿತ

ನವದೆಹಲಿ: ಮುಸ್ಕಾನ್‌, ತಮನ್ನಾ ಸೇರಿದಂತೆ ಭಾರತದ ನಾಲ್ವರು ಬಾಕ್ಸರ್‌ಗಳು ವಿಶ್ವ ಕಿರಿಯರ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ. ಸ್ಪೇನ್‌ನ ಲಾ ನುಸಿಯಾದಲ್ಲಿ ನಡೆಯುತ್ತಿರುವ ಕೂಟದಲ್ಲಿ ಬುಧವಾರ ಮಹಿಳೆಯರ 50 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ತಮನ್ನಾ ಜಪಾನ್‌ನ ಜುನಿ ಟೊನೆಗಾವ ವಿರುದ್ಧ ಗೆದ್ದರೆ, ಮುಸ್ಕಾನ್‌(75 ಕೆ.ಜಿ.) ಮಂಗೋಲಿಯಾದ ಅಜಿಂಬಾಯಿ ವಿರುದ್ಧ ಜಯಗಳಿಸಿದರು. ಕೀರ್ತಿ (81+ ಕೆ.ಜಿ.) ರೊಮಾನಿಯಾದ ಲಿವಿಯಾ ಬೊಟಿಕಾ ವಿರುದ್ಧ ಗೆದ್ದರು. 52 ಕೆ.ಜಿ. ವಿಭಾಗದಲ್ಲಿ ದೇವಿಕಾ ಗೋರ್ಪಡೆ ಕೂಡಾ ಸೆಮೀಸ್‌ಗೆ ಲಗ್ಗೆ ಇಟ್ಟರು. ಭಾರತ ಕೂಟದಲ್ಲಿ ಈವರೆಗೆ 11 ಪದಕಗಳನ್ನು ಖಚಿತಪಡಿಸಿಕೊಂಡಿದೆ.