ಮತ್ತೊಮ್ಮೆ ಬಲಿಷ್ಠ ತಂಡಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಶುಭಾರಂಭದ ನಿರೀಕ್ಷೆಯಲ್ಲಿ ಬ್ರೆಜಿಲ್, ಪೋರ್ಚುಗಲ್, ಉರುಗ್ವೆ.ವಿಶ್ವಕಪ್‌ ಗೆಲ್ಲುಬಲ್ಲ ನೆಚ್ಚಿನ ತಂಡಗಳ ಪೈಪೋಟಿ ಕುತೂಹಲ ಮೂಡಿಸಿದೆ

ದೋಹಾ(ನ.24): ಫಿಫಾ ವಿಶ್ವಕಪ್‌ನಲ್ಲಿ ಗುರುವಾರ ಮತ್ತೆ ಬಲಿಷ್ಠ ತಂಡಗಳು ಕಣಕ್ಕಿಳಿಯಲಿದ್ದು, ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳ ಪೈಪೋಟಿ ಕುತೂಹಲ ಮೂಡಿಸಿದೆ. ವಿಶ್ವ ನಂ.1 ಬ್ರೆಜಿಲ್‌, ಕ್ರಿಸ್ಟಿಯಾನೊ ರೊನಾಲ್ಡೋ ನಾಯಕತ್ವದ ಪೋರ್ಚುಗಲ್‌, ಉರುಗ್ವೆ ತಂಡಗಳು ತಮ್ಮ ಆರಂಭಿಕ ಪಂದ್ಯದ ಅದೃಷ್ಟ ಪರೀಕ್ಷೆಗಿಳಿಯಲಿದೆ.

ಬ್ರೆಜಿಲ್‌ಗೆ ಸರ್ಬಿಯಾ ಸವಾಲು

ದಾಖಲೆಯ 5 ಬಾರಿ ಚಾಂಪಿಯನ್‌ ಬ್ರೆಜಿಲ್‌ ಈ ಬಾರಿಯೂ ಟೂರ್ನಿಯ ಹಾಟ್‌ ಫೇವರಿಟ್‌ ಎನಿಸಿಕೊಂಡಿದ್ದು, ಸರ್ಬಿಯಾ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿದೆ. ಕಳೆದ ವರ್ಷ ಅಕ್ಟೋಬರ್‌ನಿಂದ ಈವರೆಗೂ 13 ಪಂದ್ಯಗಳಲ್ಲಿ ಸೋಲನ್ನೇ ಕಾಣದ ಬ್ರೆಜಿಲ್‌ ಈ ಅವಧಿಯಲ್ಲಿ 35 ಗೋಲುಗಳನ್ನು ಬಾರಿಸಿದ್ದು, ಕೇವಲ 6 ಗೋಲುಗಳನ್ನು ಬಿಟ್ಟುಕೊಟ್ಟಿದೆ. ತಂಡದಲ್ಲಿ ಹಲವು ವಿಶ್ವಶ್ರೇಷ್ಠ ಆಟಗಾರರಿದ್ದು, ನೇಯ್ಮರ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ತಂಡದ ರಕ್ಷಣಾ ಪಡೆಯೂ ಬಲಿಷ್ಠವಾಗಿ ತೋರುತ್ತಿದ್ದು, ಸರ್ಬಿಯಾ ವಿರುದ್ಧ ದೊಡ್ಡ ಅಂತದರ ಗೆಲುವಿಗಾಗಿ ಎದುರು ನೋಡುತ್ತಿದೆ. ಮತ್ತೊಂದೆಡೆ ವಿಶ್ವ ನಂ.21 ಸರ್ಬಿಯಾ ಅರ್ಹತಾ ಸುತ್ತಿನಲ್ಲಿ ಅಜೇಯವಾಗಿ ಉಳಿದಿದ್ದು, ಬ್ರೆಜಿಲ್‌ಗೆ ಆಘಾತ ನೀಡಿ ಗೆಲ್ಲುವ ತವಕದಲ್ಲಿದೆ.

ಪಂದ್ಯ: ರಾತ್ರಿ 12.30ಕ್ಕೆ

ಉರುಗ್ವೆ ಸವಾಲಿಗೆ ದ.ಕೊರಿಯಾ ರೆಡಿ

2 ಬಾರಿ ಚಾಂಪಿಯನ್‌ ಉರುಗ್ವೆ ಈ ವರ್ಷ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆಲವು ಸಾಧಿಸಿದ್ದು, ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ವಿಶ್ವ ರ‍್ಯಾಂಕಿಂಗ್‌‌ನಲ್ಲಿ 14ನೇ ಸ್ಥಾನದಲ್ಲಿರುವ ತಂಡ ಇತ್ತೀಚೆಗೆ ಇರಾನ್‌ ವಿರುದ್ಧ ಸೋತಿದ್ದು, ಈ ತಪ್ಪು ಮರುಕಳಿಸದಂತೆ ನೋಡಬೇಕಿದೆ. ತಂಡದಲ್ಲಿ ಉತ್ತಮ ಡಿಫೆನ್ಸ್‌ ಜೊತೆ ಹಲವು ತಾರಾ ಆಟಗಾರರರಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ. ಅತ್ತ ದ,ಕೊರಿಯಾ ಅಚ್ಚರಿಯ ಫಲಿತಾಂಶಗಳಿಗೆ ಹೆಸರುವಾಸಿಯಾಗಿದ್ದು, ಉರುಗ್ವೆಗೂ ಸೋಲುಣಿಸಲು ಎದುರು ನೋಡುತ್ತಿದೆ.

ಪಂದ್ಯ: ಸಂಜೆ 6.30ಕ್ಕೆ

FIFA World Cup: ಹಾಲಿ ಚಾಂಪಿಯನ್ ಫ್ರಾನ್ಸ್‌ ಶುಭಾರಂಭ

ಪೋರ್ಚುಗಲ್‌-ಘಾನಾ ಸೆಣಸು

ವಿಶ್ವ ರ‍್ಯಾಂಕಿಂಗ್‌‌ನಲ್ಲಿ 9ನೇ ಸ್ಥಾನದಲ್ಲಿರುವ ಪೋರ್ಚುಗಲ್‌ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದು, ಘಾನಾ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿದೆ. ತಾರಾ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪ್ರಮುಖ ಆಕರ್ಷಣೆಯಾಗಿದ್ದು, ಅವರಿಗೆ ಸೂಕ್ತ ಬೆಂಬಲ ನೀಡುವ ಆಟಗಾರರ ಕೊರತೆ ತಂಡಕ್ಕಿದೆ. ತಂಡದ ರಕ್ಷಣಾ ಪಡೆಯೂ ಕೂಡಾ ಮಂಕಾದಂತೆ ಕಾಣತ್ತಿದ್ದು, ಘಾನಾ ವಿರುದ್ಧ ಸಂಘಟಿತ ಹೋರಾಟ ನೀಡಿದರಷ್ಟೇ ಗೆಲುವು ದಕ್ಕಬಹುದು. ಇನ್ನು, ಟೂರ್ನಿಯ ಕಡಿಮೆ ರ‍್ಯಾಂಕಿಂಗ್‌‌(61)ನ ಘಾನಾ ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿದ್ದರೂ ಅನಿರೀಕ್ಷಿತ ಫಲಿತಾಂಶ ನೀಡಿದರೆ ಅಚ್ಚರಿಯಿಲ್ಲ.

ಪಂದ್ಯ: ರಾತ್ರಿ 9.30ಕ್ಕೆ

ಸ್ವಿಜರ್‌ಲೆಂಡ್‌-ಕ್ಯಾಮರೂನ್‌ ಫೈಟ್‌

ಅರ್ಹತಾ ಸುತ್ತಿನಲ್ಲಿ ಅಜೇಯವಾಗಿ ಉಳಿದಿದ್ದ ವಿಶ್ವ ನಂ.15 ಸ್ವಿಜರ್‌ಲೆಂಡ್‌ ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಎದುರು ನೋಡುತ್ತಿದ್ದು, ಗುರುವಾರ ಆರಂಭಿಕ ಪಂದ್ಯದಲ್ಲಿ ಕ್ಯಾಮರೂನ್‌ ವಿರುದ್ಧ ಸೆಣಸಲಿದೆ. ಈ ವರ್ಷ ಸ್ಪೇನ್‌, ಪೋರ್ಚುಗಲ್‌ ವಿರುದ್ಧ ಗೆದ್ದಿರುವ ಸ್ವಿಜರ್‌ಲೆಂಡ್‌ ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಶುಭಾರಂಭ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ವಿಶ್ವ ರ‍್ಯಾಂಕಿಂಗ್‌‌ನಲ್ಲಿ 43ನೇ ಸ್ಥಾನದಲ್ಲಿರುವ ಕ್ಯಾಮರೂನ್‌ಗೆ ಯುರೋಪಿಯನ್‌ ಲೀಗ್‌ನಲ್ಲಿ ಆಡುವ ಆಟಗಾರರ ಬಲವಿದ್ದು, ಗೆಲುವಿನ ತವಕದಲ್ಲಿದೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ