Durand Cup 2022: ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ
* ಡುರಾಂಡ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ
* ಹೈದರಾಬಾದ್ ಎಫ್‌ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ
* ದೇಶದ ಎಲ್ಲಾ ಮಹತ್ವದ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ ಬಿಎಫ್‌ಸಿ
ಕೋಲ್ಕತಾ(ಸೆ.16): ಸ್ವಂತ ಗೋಲು ಬಾರಿಸಿದ ಹೈದರಾಬಾದ್ ಎಫ್‌ಸಿ, ಬೆಂಗಳೂರು ಎಫ್‌ಸಿ(ಬಿಎಫ್‌ಸಿ)ಯ ಡುರಾಂಡ್ ಕಪ್ ಫೈನಲ್ ಹಾದಿಯನ್ನು ಸುಗಮಗೊಳಿಸಿತು. ಸ್ಪೇನ್‌ನ ಡಿಫೆಂಡರ್ ಒಡಿಯೆ ಒನೈಂಡಿಯಾ ಗೋಲು ಗಳಿಸಿ ಬಿಎಫ್‌ಸಿಗೆ ಅನುಕೂಲ ಮಾಡಿಕೊಟ್ಟರು. ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಬಿಎಫ್‌ಸಿಯ ತಾರಾ ಸ್ಟ್ರೈಕರ್ಸ್‌ಗಳಾದ ಸುನಿಲ್ ಚೆಟ್ರಿ, ರಾಯ್ ಕೃಷ್ಣ ಗೋಲು ಗಳಿಸಲು ವಿಫಲರಾದರು. ಕಳೆದ ವರ್ಷ ಸೆಮೀಸ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಬಿಎಫ್‌ಸಿ 6-7 ಗೋಲುಗಳಲ್ಲಿ ಸೋಲುಂಡು ಅಭಿಯಾನ ಮುಗಿಸಿತ್ತು.
ಬೆಂಗಳೂರು ಎಫ್‌ಸಿ ತಂಡವು ಪ್ರತಿಷ್ಠಿತ ಡುರಾಂಡ್ ಕಪ್‌ನಲ್ಲಿ ಇದುವರೆಗೂ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿ ಎನಿಸಿರುವ ಡುರಾಂಡ್ ಕಪ್‌ನಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಎಫ್‌ಸಿ ತಂಡವು ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಭಾನುವಾರ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು, ಮುಂಬೈ ಸಿಟಿ ಎಫ್‌ಸಿ ಮಣಿಸಿ ಚಾಂಪಿಯನ್ ಟ್ರೋಫಿ ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ದೇಶದ ಎಲ್ಲಾ ಮಹತ್ವದ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ ಬಿಎಫ್‌ಸಿ:
ಡುರಾಂಡ್ ಕಪ್‌ನಲ್ಲಿ ಬಿಎಫ್‌ಸಿ ತಂಡವು ಫೈನಲ್ ಪ್ರವೇಶಿಸುವ ಮೂಲಕ ದೇಶದ ಎಲ್ಲಾ ಮಹತ್ವದ ಫುಟ್ಬಾಲ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ದೇಶದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಬೆಂಗಳೂರು ಎಫ್‌ಸಿ ಪಾತ್ರವಾಗಿದೆ. ಈ ಮೊದಲು ಬಿಎಫ್‌ಸಿ ಫೆಡರೇಷನ್ ಕಪ್(215,2017), ಇಂಡಿಯನ್ ಸೂಪರ್ ಲೀಗ್(2018, 2019), ಸೂಪರ್ ಕಪ್(2018) ಹಾಗೂ ಇದೀಗ 2022ರಲ್ಲಿ ಡುರಾಂಡ್ ಕಪ್ ಫೈನಲ್ ಪ್ರವೇಶಿಸಿದೆ.
ಸ್ಯಾಫ್ ಫುಟ್ಬಾಲ್: ಭಾರತ ಚಾಂಪಿಯನ್
ಕೊಲಂಬೊ: 7ನೇ ಆವೃತ್ತಿಯ ಸ್ಯಾಫ್ ಅಂಡರ್-17 ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬುಧವಾರ ಕೊಲಂಬೊದಲ್ಲಿ ನೇಪಾಳ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 4-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಲೀಗ್ ಹಂತದಲ್ಲಿ ಭಾರತ, ನೇಪಾಳ ವಿರುದ್ಧ 1-3 ಗೋಲುಗಳಿಂದ ಸೋಲನುಭವಿಸಿತ್ತು. ಆದರೆ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
ಭಾರತದ ಪರ ಬಾಬಿ ಸಿಂಗ್, ಕೊರೊಯು ಸಿಂಗ್, ನಾಯಕ ವಾನ್‌ಲಾಲ್‌ಪೆಕಾ ಗ್ಯೂಟ್ ಹಾಗೂ ಅಮಾನ್ ಗೋಲು ಬಾರಿಸಿದರು. ಗ್ಯುಟ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರೆ, ಸಾಹಿಲ್ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಗೆ ಭಾಜನರಾದರು.
Durand Cup : ಸೆಮೀಸ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ
4ನೇ ಪ್ರಶಸ್ತಿ: ಕಿರಿಯರ ಸ್ಯಾಫ್ ಟೂರ್ನಿಯ ಇತಿಹಾಸದಲ್ಲಿ ಭಾರತಕ್ಕಿದು 4ನೇ ಪ್ರಶಸ್ತಿ. ಈ ಮೊದಲು ಅ-16 ವಿಭಾಗದಲ್ಲಿ 2013ರಲ್ಲಿ, ಅ-15 ವಿಭಾಗದಲ್ಲಿ 2017, 2019ರಲ್ಲಿ ಚಾಂಪಿಯನ್ ಆಗಿತ್ತು. 2011, 2015ರಲ್ಲಿ ರನ್ನರ್-ಅಪ್ ಆಗಿತ್ತು.
ಯೂರೋಪಾ ಲೀಗ್: ಈ ಆವೃತ್ತಿಯಲ್ಲಿ ಮೊದಲ ಗೋಲು ಬಾರಿಸಿದ ಕ್ರಿಸ್ಟಿಯಾನೋ ರೊನಾಲ್ಡೊ
ಪೋರ್ಚುಗಲ್‌ನ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊ, ಯೂರೋಪಾ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಪರ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೆರಿಫ್ ತಂಡದ ವಿರುದ್ದ ಮ್ಯಾಂಚೆಸ್ಟರ್ ಯುನೈಟೆಡ್ ತಂಡವು 2-0 ಅಂತರದಲ್ಲಿ ಗೆಲುವು ಸಾಧಿಸಿದೆ.
ಈ ಪಂದ್ಯಕ್ಕೂ ಮುನ್ನ ಕ್ರಿಸ್ಟಿಯಾನೋ ರೊನಾಲ್ಡೋ ಕಳೆದ 7 ಪಂದ್ಯಗಳಲ್ಲಿ ಗೋಲು ಬಾರಿಸಲು ಯಶಸ್ವಿಯಾಗಿರಲಿಲ್ಲ. ಆದರೆ ಶೆರಿಫ್ ಎದುರು ಮೊದಲಾರ್ಧದಲ್ಲೇ ಸಿಕ್ಕ ಪೆನಾಲ್ಟಿ ಅವಕಾಶವನ್ನು ರೊನಾಲ್ಡೋ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.