Durand Cup : ಸೆಮೀಸ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ
ಡುರಾಂಡ್ ಕಪ್‌ನಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ
ಒಡಿಶಾ ಎಫ್‌ಸಿ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಬಿಎಫ್‌ಸಿಗೆ ರೋಚಕ ಜಯ
ಬಿಎಫ್‌ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ
ಕೋಲ್ಕತಾ(ಸೆ.11): 131ನೇ ಆವೃತ್ತಿಯ ಪ್ರತಿಷ್ಠಿತ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಒಡಿಶಾ ಎಫ್‌ಸಿ ವಿರುದ್ಧದ 2ನೇ ರೋಚಕ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಬಿಎಫ್‌ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.
ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಂದಲೂ ತೀವ್ರ ಪೈಪೋಟಿ ಎದುರಾಯಿತು. ಎರಡೂ ತಂಡಗಳು ಹಲವು ಬಾರಿ ಗೋಲು ಗಳಿಸಲು ಪ್ರಯತ್ನಿಸಿತಾದರೂ ನಿಗದಿತ 90 ನಿಮಿಷಗಳಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 98ನೇ ನಿಮಿಷದಲ್ಲಿ ಶಿವಶಕ್ತಿ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರೆ, ಮಾರಿಸಿಯೋ 114ನೇ ನಿಮಿಷದಲ್ಲಿ ಬಾರಿಸಿದ ಗೋಲು ಒಡಿಶಾಗೆ ಸಮಬಲ ಸಾಧಿಸಲು ನೆರವಾಯಿತು. ಆದರೆ ಫಿಜಿ ಮೂಲದ ಆಟಗಾರ ರಾಯ್ ಕೃಷ್ಣ 121ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಗೆ ಗೆಲುವು ತಂದುಕೊಟ್ಟರು.
ಕೇರಳ ಬ್ಲಾಸ್ಟರ್ ವಿರುದ್ಧ ಗೆದ್ದಿರುವ ಮೊಹಮದನ್ ಎಸ್‌ಸಿ ಈಗಾಗಲೇ ಸೆಮೀಸ್ ಪ್ರವೇಶಿಸಿದ್ದು, ಇನ್ನೆರಡು ಕ್ವಾರ್ಟರ್ ಫೈನಲ್ ಪಂದ್ಯಗಳು ಭಾನುವಾರ, ಸೋಮವಾರ ನಡೆಯಲಿದೆ.
ಸ್ಯಾಫ್ ಫುಟ್ಬಾಲ್: ಭಾರತ ಸೆಮೀಸ್‌ಗೆ
ಕಠ್ಮಂಡು: ಸ್ಯಾಫ್ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ಸತತ 2ನೇ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ಮಾಲ್ಡೀವ್‌್ಸ ವಿರುದ್ಧದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 9-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯಗಳಿಸಿತು.
ನಾವಿಲ್ಲಿ ಕನಸುಗಳ ಮಾರಾಟಕ್ಕೆ ಬಂದಿಲ್ಲ: AIFF ನೂತನ ಅಧ್ಯಕ್ಷ ಕಲ್ಯಾಣ್ ಚೌಬೆ ದಿಟ್ಟ ನುಡಿ
ಅಂಜು ತಮಂಗ್ 4 ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರೇಸ್ 2, ಪ್ರಿಯಾಂಕ, ಸೌಮ್ಯ ಹಾಗೂ ಕಾಶ್ಮೀನ ತಲಾ 1 ಗೋಲು ಹೊಡೆದರು. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ಭಾರತ ಒಟ್ಟು 6 ಅಂಕಗಳೊಂದಿಗೆ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿತು. ಗುಂಪು ಹಂತದ ಕೊನೆ ಪಂದ್ಯದಲ್ಲಿ ಭಾರತ ಸೆಪ್ಟೆಂಬರ್ 13ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ.
ಫಿಫಾ ಮಹಿಳಾ ವಿಶ್ವಕಪ್: ಲೋಗೋ ಬಿಡುಗಡೆ
ಭುವನೇಶ್ವರ್: ಮುಂಬರುವ ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ನಗರದ ಲಾಂಛನವನ್ನು ಶನಿವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ‘ಲೋಗೋ ಬಿಡುಗಡೆ ಒಡಿಶಾ ಪಾಲಿಗೆ ಮಹತ್ವದ ಮೈಲಿಗಲ್ಲು. ಜಾಗತಿಕ ಮಟ್ಟದ ಮಹಿಳೆಯರ ವಿಶ್ವಕಪ್ ಆಯೋಜನೆಗೆ ನಾವು ಉತ್ಸುಕರಾಗಿದ್ದೇವೆ. ಅದರಲ್ಲೂ ಭಾರತೀಯ ಮಹಿಳಾ ತಂಡದ ಗುಂಪು ಹಂತದ ಮೂರೂ ಪಂದ್ಯಗಳು ಇಲ್ಲೇ ನಡೆಯುತ್ತಿರುವುದು ಸಂತೋಷ ಎಂದರು.
ಫಿಫಾ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 11ಕ್ಕೆ ಆರಂಭವಾಗಲಿದ್ದು, 30ಕ್ಕೆ ಮುಕ್ತಾಯಗೊಳ್ಳಲಿದೆ. ಒಡಿಶಾ ಜೊತೆ ಗೋವಾ, ಮಹಾರಾಷ್ಟ್ರ ಕೂಡಾ ಟೂರ್ನಿಗೆ ಆತಿಥ್ಯ ವಹಿಸಲಿದೆ. ಭಾರತದಲ್ಲಿ ಇದೇ ಮೊದಲ ಬಾರಿ ಫಿಫಾ ಮಹಿಳಾ ಟೂರ್ನಿ ಆಯೋಜಿಸಲಾಗುತ್ತಿದೆ.