ಬೆಂಗಳೂರು ಯುನೈಟೆಡ್ ಸ್ಟಾಫರ್ಡ್ ಕಪ್ ಚಾಂಪಿಯನ್
ಸ್ಟಾಫರ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಚಾಂಪಿಯನ್
ಫೈನಲ್ನಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಜಯಭೇರಿ
ಚಾಂಪಿಯನ್ ಬೆಂಗಳೂರಿಗೆ 2.5 ಲಕ್ಷ ರುಪಾಯಿ ನಗದು ಬಹುಮಾನ
ಬೆಂಗಳೂರು(ಮಾ.07): ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್ಎ) 30 ವರ್ಷಗಳ ಬಳಿಕ ಆಯೋಜಿಸಿದ ಸ್ಟಾಫರ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಗರದ ಕೆಎಸ್ಎಫ್ಎ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ 2-1 ಗೋಲುಗಳಲ್ಲಿ ಜಯಿಸಿತು.
ವಿನಿಲ್ ಪೂಜಾರಿ 31ನೇ ನಿಮಿಷದಲ್ಲಿ ಬಾರಿಸಿದ ಗೋಲು ಬೆಂಗಳೂರಿಗೆ ಮುನ್ನಡೆ ಒದಗಿಸಿದರೆ, ಸೆಂಥಮಿಲ್(71ನೇ ನಿ.) ಚೆನ್ನೈಯಿನ್ ಸಮಬಲ ಸಾಧಿಸಲು ನೆರವಾದರು. ಆದರೆ 93ನೇ ನಿಮಿಷದಲ್ಲಿ ಇರ್ಫಾನ್ ಯಡವಾಡ ಬಾರಿಸಿದ ಗೋಲು ಬೆಂಗಳೂರಿಗೆ ಪ್ರಶಸ್ತಿ ತಂದುಕೊಟ್ಟಿತು. ಚಾಂಪಿಯನ್ ಬೆಂಗಳೂರಿಗೆ 2.5 ಲಕ್ಷ ರು., ಚೆನ್ನೈಯಿನ್ ತಂಡಕ್ಕೆ 1.5 ಲಕ್ಷ ರು. ನಗದು ಬಹುಮಾನ ನೀಡಲಾಯಿತು.
ಇಂದಿನಿಂದ ಬೆಂಗ್ಳೂರಲ್ಲಿ ಅಂ.ರಾ. ಮಹಿಳಾ ಟೆನಿಸ್
ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್ಎಲ್ಟಿಎ) ಆಯೋಜಿಸುತ್ತಿರುವ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತು ಮಂಗಳವಾರ ಆರಂಭವಾಗಲಿದ್ದು, ವೈದೇಹಿ ಚೌಧರಿ ಸೇರಿದಂತೆ ಭಾರತದ 7 ಆಟಗಾರ್ತಿಯರು ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತದ ಫೆಡ್ ಕಪ್ ತಂಡದಲ್ಲಿ ಸ್ಥಾನ ಪಡೆದಿರುವ ವೈದೇಹಿ ಸೋಮವಾರ ಅಂತಿಮ ಅರ್ಹತಾ ಸುತ್ತಿನಲ್ಲಿ ಥಾಯ್ಲೆಂಡ್‌ನ ಪುನ್ನಿನ್‌ರನ್ನು 6-1, 6-2 ಸೆಟ್ಗಳಲ್ಲಿ ಸೋಲಿಸಿ ಪ್ರಧಾನ ಸುತ್ತಿಗೇರಿದರು. ಕರ್ನಾಟಕದ ಶರ್ಮಾದಾ ಬಾಲು ಮತ್ತು ಗುಜರಾತ್‌ನ ಜೀಲ್ ದೇಸಾಯಿ ಟೂರ್ನಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಸಹಜಾ ಯಮಲಪಲ್ಲಿ, ರುತುಜಾ ಭೋಸಲೆ ಕೂಡಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜೆಕ್ ಗಣರಾಜ್ಯದ 15ರ ಹರೆಯದ ಬ್ರೆಂಡಾ ಪ್ರುವಿರ್ಟೊವಾ ಅಗ್ರ ಶ್ರೆಯಾಂಕಿತ ಆಟಗಾರ್ತಿಯಾಗಿ ಟೂರ್ನಿಯಲ್ಲಿ ಆಡಲಿದ್ದಾರೆ. ಟೂರ್ನಿಯಲ್ಲಿ ನಾಲ್ಕನೇ ಶ್ರೆಯಾಂಕ ಪಡೆದಿರುವ ಭಾರತದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಅಂಕಿತಾ ರೈನಾ ಆರಂಭಿಕ ಸುತ್ತಿನಲ್ಲಿ ಸ್ಥಳೀಯ ಆಟಗಾರ್ತಿ ವಂಶಿತಾ ಪಠಾನಿಯಾ ಅವರನ್ನು ಎದುರಿಸಲಿದ್ದಾರೆ.
ಮಹಿಳಾ ವಿಶ್ವ ಬಾಕ್ಸಿಂಗ್: ಭಾರತ ತಂಡ ಪ್ರಕಟ
ನವದೆಹಲಿ: ಮಾ.15ರಿಂದ 26ರ ವರೆಗೂ ನವದೆಹಲಿಯಲ್ಲಿ ನಡೆಯಲಿರುವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ಗೆ 12 ಸದಸ್ಯೆಯರ ಭಾರತ ತಂಡ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ನಿಖಾತ್ ಜರೀನ್, ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲೀನಾ ಬೊರ್ಗೊಹೈನ್ ತಂಡ ಮುನ್ನಡೆಸಲಿದ್ದಾರೆ.
Santosh Trophy ಗೆದ್ದ ಕರ್ನಾಟಕ ಫುಟ್ಬಾಲ್ ತಂಡಕ್ಕೆ 25 ಲಕ್ಷ ರುಪಾಯಿ ಬಹುಮಾನ..!
ನಿಖಾತ್ 50 ಕೆ.ಜಿ., ಲವ್ಲೀನಾ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಉಳಿದಂತೆ ನೀತು(48 ಕೆ.ಜಿ.), ಮನೀಶಾ(57 ಕೆ.ಜಿ.), ಜ್ಯಾಸ್ಮೀನ್(60 ಕೆ.ಜಿ.), ಪ್ರೀತಿ(54 ಕೆ.ಜಿ.) ಹಾಗೂ ಸನಾಮಚಾ ಚಾನು(70 ಕೆ.ಜಿ.) ತಂಡದಲ್ಲಿರುವ ಪ್ರಮುಖ ಬಾಕ್ಸರ್‌ಗಳೆನಿಸಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ರಾಜ್ಯದ ಬೆಳ್ಳಿಯಪ್ಪಗೆ ಅರ್ಹತೆ
ನವದೆಹಲಿ: ಕನ್ನಡಿಗ ಎ.ಬಿ.ಬೆಳ್ಳಿಯಪ್ಪ ಸೇರಿ ಭಾರತದ ಅಗ್ರ ಮೂರು ಓಟಗಾರರು ನವದೆಹಲಿ ಮ್ಯಾರಥಾನ್‌ನಲ್ಲಿ ಪೋಡಿಯಂ ಫಿನಿಶ್ ಮಾಡಿದ್ದಲ್ಲದೇ 2023ರ ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಝೂ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ ಅರ್ಹತೆ ಪಡೆದಿದ್ದಾರೆ. ಭಾನುವಾರ ನಡೆದ ಮ್ಯಾರಥಾನ್‌ನಲ್ಲಿ ಬೆಳ್ಳಿಯಪ್ಪ, ಮಾನ್ ಸಿಂಗ್ ಹಾಗೂ ಕಾರ್ತಿಕ್ ಕುಮಾರ್ ಮೂವರೂ ಏಷ್ಯಾಡ್ ಅರ್ಹತಾ ಗುರಿಯಾದ 2 ಗಂಟೆ 15 ನಿಮಿಷಗಳೊಳಗೆ ಓಟ ಪೂರೈಸಿದರು.
ಮಾನ್ ಸಿಂಗ್, ಭಾನುವಾರ 2 ಗಂಟೆ 14.13 ನಿಮಿಷಗಳಲ್ಲಿ ಓಟ ಪೂರೈಸಿ ಚಿನ್ನದ ಪದಕ ಗೆದ್ದರೆ, ಬೆಳ್ಳಿಯಪ್ಪ 2 ಗಂಟೆ 14.15 ನಿಮಿಷಗಳಲ್ಲಿ ಓಟ ಮುಕ್ತಾಯಗೊಳಿಸಿ ಕೇವಲ 2 ಸೆಕೆಂಡ್‌ಗಳ ಅಂತರದಲ್ಲಿ ಮೊದಲ ಸ್ಥಾನದಿಂದ ವಂಚಿತರಾದರು. ಕಾರ್ತಿಕ್ 2 ಗಂಟೆ 14.19 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿ ಕಂಚಿನ ಪದಕ ಗೆದ್ದರು.