ಮರಡೋನಾ ಎಂಬ ಮೋಹಕ ವ್ಯಸನ

ತೊಂಬತ್ತರ ದಶಕದ ಹುಡುಗರಿಗೆ ತೆಂಡೂಲ್ಕರ್‌ ಇದ್ದಂತೆ ಎಂಬತ್ತರ ದಶಕದ ಫುಟ್ಬಾಲ್‌ ಪ್ರಿಯರನ್ನು ವಶೀಕರಿಸಿದ ಹೆಸರು ಡಿಯಾಗೋ ಮರಡೋನಾನದ್ದು. ನಮ್ಮನ್ನು ಈ ಪರಿ ಸಮ್ಮೋಹಗೊಳಿಸಿದ ಮಹರಾಯ ಅದೇನು ಆಡ್ತಾನೆ ಅಂತ ನೋಡುವ ಕುತೂಹಲದಿಂದ 1986ರ ವಿಶ್ವಕಪ್ಪಿನ ವೀಡಿಯೊ ಟೇಪ್‌ ಒಂದನ್ನು ಆ ಕಾಲದಲ್ಲಿ ಸಂಪಾದಿಸಿ ನಾವೆಲ್ಲ ನೋಡಿದ್ದೇ ನೋಡಿದ್ದು. ನೋಡಿ ನೋಡಿ ನೋಡಿ ಆ ಟೇಪು ಸವೆದಿತ್ತು, ಆಗ ಹಾಗೆ ಪರವಶರಾಗುತ್ತಿದ್ದದ್ದರ ನೆನಪು ಮಾತ್ರ ಇನ್ನೂ ಸವೆದಿಲ್ಲ. ಪುರುಸೊತ್ತು ಇಲ್ಲದೆ ಇದ್ದಾಗಂತೂ ಫಾರ್ವರ್ಡ್‌ ಮಾಡುವುದು,ಸೀದಾ ಆ ಗೋಲಿನ ನಿಮಿಷಕ್ಕೆ ಬರುವುದು ! ಹ್ಯಾಂಡ್‌ ಆಫ್‌ ಗಾಡ್‌ ಅಂತ ಕುಪ್ರಸಿದ್ಧವಾದ ಗೋಲು ಆಗಿ ಸ್ವಲ್ಪವೇ ಹೊತ್ತಿನಲ್ಲಿ ಅದು ಬಂದದ್ದು.

Sharath bhat talks about football player Diego maradona vcs

-ಶರತ್‌ ಭಟ್‌ ಸೇರಾಜೆ

ಅದೆಂಥಾ ಗೋಲು ಅಂತೀರಿ ! ಒಂದಿಡೀ ಜೀವಮಾನದ ಪ್ರತಿಭೆಯನ್ನು ಹನ್ನೊಂದು ಸೆಕೆಂಡುಗಳ ಸ್ತೋತ್ರಗೀತೆಯಾಗಿ ಹೇಳಿದಂತೆ, ಗೋಲು ಮಾಡಲು ಓಡಿದ ಅರುವತ್ತು ಮೀಟರುಗಳ ಸರಕ್ಕನೆಯ ಓಟ; ಅಮರಕೀರ್ತಿ ಎಂಬ ಗಮ್ಯದ ಕಡೆಗಿನ ದೂರ ಬರೀ ಅರುವತ್ತು ಮೀಟರು ಅಂತ ತೋರಿಸಿದ ಓಟ ಅದು! ಮೈದಡವಿದ್ದು, ಕುಟ್ಟಿದ್ದು, ನೂಕಿದ್ದು, ಗಿರ್ರನೆ ಸುತ್ತಿದ್ದು ಎಲ್ಲದರ ಕಥೆಯನ್ನು ಆ ಬಾಲೇ ನಮಗೆ ಹೇಳಿದ್ದರೆ ಚೆನ್ನಿತ್ತು !

ಕೊಕೇನ್‌ಗೆ ದಾಸರಾಗಿದ್ದ ಫುಟ್ಬಾಲ್‌ ಮಾಂತ್ರಿಕ ಮರಡೋನಾ! 

1986ರ ಜೂನ್‌ 22ಕ್ಕೆ ಮೆಕ್ಸಿಕೋ ಸಿಟಿಯಲ್ಲಿ ಹೊಡೆದ ಆ ಗೋಲಿಗೆ ಸಾಕ್ಷಿಯಾಗಿ ಮೈದಾನದಲ್ಲೇ ಲಕ್ಷ ಜನ ನೆರೆದಿದ್ದರು. ಅಲ್ಲಿ ಬೀಟಲ್ಸ್‌ ತಂಡದ ಒಬ್ಬನ ಹಾಡು ಕೇಳುವುದಕ್ಕೆ ಲಕ್ಷ ಜನರ ಸಂತೆ ನೆರೆದದ್ದಿತ್ತು, ಧರ್ಮಗುರುಗಳ ಬೋಧನೆಗೆ ಜನಸಂತೆ ಒಟ್ಟಾದದ್ದಿತ್ತು, ಅಂಥಲ್ಲಿ ಆ ದಿನ ಮರಡೋನಾ ಭಕ್ತರ ಜಾತ್ರೆ ನೆರೆದಿತ್ತು. ರಭಸವೇ, ಜೋರೇ, ಚುರುಕೇ, ಬಿರುಸೇ, ಭಂಡ ಧೈರ್ಯವೇ - ಆ ಗೋಲಿನಲ್ಲಿ ಏನಿತ್ತು, ಏನಿರಲಿಲ್ಲ ! ಹೀಗೂ ಆಡಿ ದಕ್ಕಿಸಕೊಳ್ಳಬಹುದು ಅಂತ ನಮಗೆಲ್ಲ ಗೊತ್ತಾದದ್ದೇ ಅವತ್ತು. ಮರಡೋನಾ ಮೈದಾನದ ಮೂಲೆಯಲ್ಲಿ ಹಾಗೆ ಓಡಿದ್ದು, ಕೊಳೆಗೇರಿಯಲ್ಲಿ ಕಳೆದ ತನ್ನ ಬಾಲ್ಯದ ಅದೆಷ್ಟೋ ಕ್ಷಣಗಳೆಂಬ ಇಕ್ಕಟ್ಟಾದ ಸಂದಿಗಳಲ್ಲಿ,ಓಣಿಗಳಲ್ಲಿ ಓಡಿದ್ದರ ನೆನಪು ತರುವಂತಿತ್ತು.

Sharath bhat talks about football player Diego maradona vcs

ತೆಂಡೂಲ್ಕರನ ಮನಮೋಹಕ ಹುಕ್ಕು , ಲೆಕ್ಕಾಚಾರದ ಕವರ್‌ ಡ್ರೈವು, ಜಾನ್‌ ಮೆಕೆನ್ರೋವಿನ ಅದ್ಭುತ ವಾಲಿ, ಅದ್ಯಾರೋ ಜಿಮ್ನಾಸ್ಟಳು ತಾನು ಮನುಷ್ಯಳೇ ಅಲ್ಲ ಎಂಬಂತೆ ಬಳುಕಿದ್ದು ಇವನ್ನೆಲ್ಲ ಎಷ್ಟೆಷ್ಟುಸಲ ಯುಟ್ಯೂಬಿನಲ್ಲಿ ನೋಡಿ ತಣಿಯುತ್ತೇವೋ ಅಷ್ಟೇ ಸಲ ಈ ಗೋಲನ್ನೂ ನೋಡಿರುತ್ತೇವೆ, ಅದು ಮಾಡಿದ ಮೋಡಿಯೇ ಹಾಗಿದೆ. ಮೆಸ್ಸಿ, ಗೆಟಾಫೆಯ ವಿರುದ್ಧ ಜೊತೆ ಹೊಡೆದ ಗೋಲು ಗ್ರೇಟಾ ಇದು ಅದಕ್ಕಿಂತ ಮೇಲೆಯಾ ಅಂತ ನಾವು ಆಗಾಗ ಜಗಳ ಆಡುವುದುಂಟು. ಅದು ಉತ್ತರ ಗೊತ್ತಿದ್ದೇ ಕೇಳಿದ ಪ್ರಶ್ನೆಯ ಹಾಗೆ, ಜಗಳದಲ್ಲಿ ಗೆಲ್ಲುವುದು ಯಾರು ಅಂತ ಮೊದಲೇ ತೀರ್ಮಾನ ಆಗಿರುವ ಜಗಳ ! ಎಲ್ಲಿಯ ವಲ್ಡ್‌ರ್‍ ಕಪ್ಪು ಎಲ್ಲಿಯ, ಕ್ಲಬ್ಬು ಮ್ಯಾಚುಗಳು ಸ್ವಾಮೀ.

ಪುಟ್ಬಾಲ್ ದಿಗ್ಗಜ ಮರಡೋನಾಗೆ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪದ ಗೌರವ ನಮನ! 

ಮರಡೋನಾ ಅರುವತ್ತಕ್ಕೇ ಆಟ ಮುಗಿಸಿದ್ದು, ಆಶ್ಚರ್ಯವಲ್ಲದಿದ್ದರೂ ಮನಕರಗಿಸುವ ಸಂಗತಿ ಎನ್ನಬೇಕು. ಅವನು ಎಡವದೇ ಇರುತ್ತಿದ್ದದ್ದು ಮೈದಾನದಲ್ಲಿ ಮಾತ್ರ. ಆತ ತಪ್ಪೇ ಮಾಡುವುದಿಲ್ಲ ಅಂತಾಗುತ್ತಿದ್ದದ್ದು ಅವನ ಕಾಲು ಫುಟ್ಬಾಲನ್ನು ಸ್ಪರ್ಶಿಸಿದಾಗಲೇ. ಒಮ್ಮೆ ಮೈದಾನಕ್ಕೆ ಇಳಿದನೋ, ಮತ್ತೆ ತೊಂಬತ್ತು ನಿಮಿಷ ಅವನು ನಮ್ಮನ್ನೆಲ್ಲ ಯಾವುದೋ ಮಾಯಾಲೋಕಕ್ಕೆ ಕರೆದುಕೊಂಡು ಹೋಗುವ ಮಾಯಗಾರ. ಅವನದ್ದು ಮಲ್ಲಕಂಬಕ್ಕೆ ಹತ್ತಿದವನ ಸಮತೋಲನ, ಜಿಮ್ನಾಸ್ಟಿನಂಥ ಬಳುಕು, ಹಸಿದ ಚಿರತೆಯ ನೆಲಮುಟ್ಟದ ಓಟ. ಜೀವನದ ಓಟದಲ್ಲಿ ಮಾತ್ರ ಆ ಚಿರತೆ ಬಲೆಗೆ ಬೀಳುತ್ತಿತ್ತು, ಕಾಲುತಪ್ಪಿ ಎಡವುತ್ತಿತ್ತು.

Sharath bhat talks about football player Diego maradona vcs

ಮರಡೋನಾ ಎಂದಾಗ ನೆನಪಾಗುವುದು ಆರು ಜನ ಬೆಲ್ಜಿಯಂನ ಆಟಗಾರರು ಅವನೆದುರು ಹೊಡೆದೇ ಬಿಡುತ್ತಾರೇನೋ ಎಂಬಂತೆ ಅಡ್ಡಗಟ್ಟಿನಿಂತದ್ದರ ಛಾಯಾಚಿತ್ರ. ಒಂದು ರಾಶಿ ಬ್ರೆಝಿಲಿಯನ್ನರ ನಡುವೆ ಜಾಗ ಮಾಡಿಕೊಂಡು ಬಾಲನ್ನು ತೂರಿ ನೂಕಿ ಓಡೋಡುವ ದೃಶ್ಯ. ದಿನಬೆಳಗಾದರೆ ಮರಡೋನಾ ಸಾಕ್ಸು ಏರಿಸುವ, ಲೇಸು ಕಟ್ಟುವ, ಕುಣಿಯುವ, ಬಾಲನ್ನು ಕುಣಿಸುವ, ಹರ್ಷದಿಂದ ಮಗುವಿನಂತೆ ಜಿಗಿಯುವ ವೀಡಿಯೊ ಕ್ಲಿಪ್ಪುಗಳು ಮೊಬೈಲಿಗೆ ಬಂದು ಬೀಳುತ್ತವೆ. ಹಾಗೆ ಓಡುವ, ಹಾರುವ, ಹರ್ಷದಿಂದ ಕುಪ್ಪಳಿಸುವ, ಮಗುವಿನಂಥ ಚಿತ್ರವೇ ನಮಗೆ ಇಷ್ಟವಾಗುವ, ಮನಸ್ಸಿನಲ್ಲಿ ಉಳಿಯಬೇಕಾದ ಚಿತ್ರ.

ಮರಡೋನಾ ನಮಗೆ ಯಾಕಿಷ್ಟ? ಆ ಪ್ರತಿಭೆಗೆ, ಆ ಕೌಶಲಕ್ಕೆ ಮರುಳಾದೆವು ಅನ್ನುವುದೇನೋ ನಿಜವೇ, ನಮ್ಮ ದೊಡ್ಡಪ್ಪನ ಮಗ ಇದ್ದ ನೋಡಿ, ಪಾಪ ! ಹಳ್ಳಿಯಲ್ಲಿ ಹೇಗಿದ್ದ, ಏನು ಕ್ಲೇಶ, ಏನು ಬಡತನ, ಕಷ್ಟಪಟ್ಟು ಹೇಗೆ ಮೇಲೆ ಬಂದ ನೋಡಿ ಅನ್ನುವಂತೆ ಮರಡೋನಾನ ಜೀವನವಿತ್ತು. ಅವನು ಅಲ್ಲೆಲ್ಲೋ ಅರಮನೆಯಲ್ಲಿ ನಳನಳಿಸುತ್ತ ಕೂತ ಕೀರ್ತಿವಂತನಂತಿರಲಿಲ್ಲ, ಅವನು ನಮ್ಮಂತಿದ್ದ ನಿಮ್ಮಂತಿದ್ದ, ಗೆಲ್ಲುತ್ತಿದ್ದ, ಕುಸಿಯುತ್ತಿದ್ದ, ಹಾರುತ್ತಿದ್ದ, ಬೀಳುತ್ತಿದ್ದ.

ಫುಟ್ಬಾಲ್ ಲೆಜೆಂಡ್ ಮರಡೋನಾಗೆ ಲಕ್ಷ ಲಕ್ಷ ಅಭಿಮಾನಿಗಳ ವಿದಾಯ..! 

ಇವನು ನಮಗೆ ರೋಲ್‌ ಮಾಡೆಲ್‌ ಕಣ್ರೀ ಅಂತ ಯಾರೂ ಹೇಳಿರಲಾರರು, ಫುಟ್ಬಾಲನ್ನು ತುಳಿದ ಹಾಗೆ ದಾರಿದ್ರ್ಯ, ದುವ್ರ್ಯಸನಗಳು, ವಿವಾದಗಳು, ಊದಿಕೊಂಡ ದೇಹ, ಒತ್ತಡಗಳು ಇಂಥದನ್ನೆಲ್ಲ ಮೆಟ್ಟಿ, ಮೀಟಿ ಮೇಲೆ ಬಂದಿದ್ದ, ರಾರಾಜಿಸಿದ್ದ. ಮೈದಾನದಲ್ಲಿ ಓಡುವಾಗ, ಹೀಗೆ ಮುಗ್ಗರಿಸಿ, ಹಾಗೆ ಎದ್ದು, ಇಲ್ಲಿ ಕುಣಿದು, ಅಲ್ಲಿ ಬಿದ್ದು ಅತ್ತಿತ್ತ ಓಡುವವನಂತೆ ಮರಡೋನಾ ಬದುಕಿದ್ದ.

ಅವನ ಕಥೆಯ ಪುಸ್ತಕದಲ್ಲಿ, ಇದೆಲ್ಲ ಯಾಕೆ ಬೇಕಿತ್ತು ಅನಿಸುವಂಥ ಅಧ್ಯಾಯಗಳಿವೆ. ಪಕ್ಕದ್ಮನೆ ಅಂಕಲ್ಲು, ಮೊದಲು ಚೆನ್ನಾಗಿದ್ರಲ್ಲ, ಹೀಗ್ಯಾಕಾದ್ರು ಅಂತ ಮೋರೆ ಕಿವುಚುವಂತೆ ಮಾಡುವ ಸನ್ನಿವೇಶಗಳೂ ಉಂಟು. ಅವೆಲ್ಲವನ್ನು ಮೀರಿ ಆ ಅಮರ ಗೋಲಿದೆ, ಶೇಖರಿಸಿಡುವುದಕ್ಕೆ ಅಂಥ ಉನ್ಮಾದದ ಅಮರ ಕ್ಷಣಗಳಿವೆ, ಇವತ್ತೂ ನಾಳೆಯೂ ನಾಡಿದ್ದೂ ನೆನಪಿಸಿಕೊಂಡು ರೋಮಾಂಚನ ಪಡಬಹುದಾದ ಮಾಯಕದ ಗಳಿಗೆಗಳಿವೆ. ಒಬ್ಬ ಆಟಗಾರ ಬಿಟ್ಟುಹೋಗಬೇಕಾದ್ದು ಅಂಥ ಕ್ಷಣಗಳ ಉಡುಗೊರೆಯನ್ನೇ.

Latest Videos
Follow Us:
Download App:
  • android
  • ios