ಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ಫೆಡರೇಶನ್‌ಗೆ ಚುನಾವಣೆ ವಿಚಾರವಾಗಿ ಬಿಸಿ ಮುಟ್ಟಿಸಿದ ಫಿಫಾಸೆಪ್ಟೆಂಬರ್ 15ರ ಒಳಗೆ ಚುನಾವಣೆ ನಡೆಸಿ ಪದಾಧಿಕಾರಿಗಳ ಆಯ್ಕೆ ಮಾಡಲು ಸೂಚನೆಇತ್ತೀಚೆಗೆ ಸುಪ್ರೀಂ ಕೋರ್ಚ್‌ ಪ್ರಪುಲ್‌ ಪಟೇಲ್‌ರನ್ನು ಎಐಎಫ್‌ಎಫ್‌ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತ್ತು

ನವದೆಹಲಿ(ಜೂ.24): ಭಾರತೀಯ ರಾಷ್ಟ್ರೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌)ಗೆ (All India Football Federation) ಸಾಂವಿಧಾನಿಕ ಮಾನ್ಯತೆ ಮತ್ತು ಪದಾಧಿಕಾರಿಗಳ ಆಯ್ಕೆಗೆ ಫಿಫಾ ಹಾಗೂ ಏಷ್ಯನ್‌ ಫುಟ್ಬಾಲ್‌ ಕಾನ್ಫಡರೇಶನ್‌(ಎಎಫ್‌ಸಿ) ಗಡುವು ವಿಧಿಸಿದ್ದು, ತಪ್ಪಿದರೆ ವಿಶ್ವ ಫುಟ್ಬಾಲ್‌ನಿಂದ ಭಾರತವನ್ನು ನಿಷೇಧ ಮಾಡುವುದಾಗಿ ಎಚ್ಚರಿಕೆ ನೀಡಿದೆ. 

ಮೂರು ದಿನಗಳ ಭಾರತ ಪ್ರವಾಸದ ವೇಳೆ ಫಿಫಾ (FIFA) ಹಾಗೂ ಎಎಫ್‌ಸಿ ಅಧಿಕಾರಿಗಳು, ಜುಲೈ 31ರೊಳಗೆ ಸಮಿತಿಗೆ ಸಾಂವಿಧಾನಿಕ ಮಾನ್ಯತೆ ಪಡೆದು, ಸೆಪ್ಟೆಂಬರ್ 15ರ ಒಳಗೆ ಚುನಾವಣೆ ನಡೆಸಿ ಪದಾಧಿಕಾರಿಗಳ ಆಯ್ಕೆ ಮಾಡಬೇಕು ಎಂದು ಆದೇಶಿಸಿತು. ತಪ್ಪಿದರೆ ಮುಂಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಅಂಡರ್‌-17 ವಿಶ್ವಕಪ್‌ ಆತಿಥ್ಯ ಭಾರತವನ್ನು ಕೈಬಿಡುತ್ತೇವೆ ಎಂದು ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಚ್‌ (Supreme Court) ಪ್ರಪುಲ್‌ ಪಟೇಲ್‌ರನ್ನು ಎಐಎಫ್‌ಎಫ್‌ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸಮಿತಿಗೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಇದರ ಜತೆಗೆ ಶೀಘ್ರದಲ್ಲೇ ನೂತನ ಸಮಿತಿ ರಚಿಸುವಂತೆ ಆದೇಶಿಸಿತ್ತು.

ಫಿಫಾ ರ‍್ಯಾಂಕಿಂಗ್‌‌: 2 ಸ್ಥಾನ ಮೇಲೇರಿದ ಭಾರತ ನಂ.104

ನವದೆಹಲಿ: ಇತ್ತೀಚೆಗಷ್ಟೇ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದ ಭಾರತ ಪುರುಷರ ಫುಟ್ಬಾಲ್‌ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 2 ಸ್ಥಾನ ಪ್ರಗತಿ ಸಾಧಿಸಿದೆ. ಗುರುವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ ಭಾರತ 106ನೇ ಸ್ಥಾನದಿಂದ 104ನೇ ಸ್ಥಾನಕ್ಕೇರಿತು. ಆದರೆ ಏಷ್ಯನ್‌ ಫುಟ್ಬಾಲ್‌ ತಂಡಗಳ ಪೈಕಿ ಭಾರತ 19ನೇ ಸ್ಥಾನದಲ್ಲೇ ಉಳಿದಿದೆ. 

ಫಿಫಾ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಇರಾನ್‌ ಏಷ್ಯನ್‌ ತಂಡಗಳ ಸಾಲಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ಫಿಫಾ ರ‍್ಯಾಂಕಿಂಗ್‌ನಲ್ಲಿ ಬ್ರೆಜಿಲ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಬೆಲ್ಜಿಯಂ 2ನೇ ಸ್ಥಾನದಲ್ಲಿದೆ. ಅರ್ಜೆಂಟೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಸ್ಪೇನ್‌, ಇಟಲಿ, ನೆದರ್ಲೆಂಡ್ಸ್‌, ಪೋರ್ಚುಗಲ್‌ ಹಾಗೂ ಡೆನ್ಮಾರ್ಕ್ ಕ್ರಮವಾಗಿ ನಂತರದ 8 ಸ್ಥಾನಗಳಲ್ಲಿವೆ.

ಕಾಮನ್ವೆಲ್ತ್‌ ಟಿಟಿ ತಂಡಕ್ಕೆ ಆಯ್ಕೆ ಕೋರಿದ್ದ ಅರ್ಚನಾ ಅರ್ಜಿ ವಜಾ

ಬೆಂಗಳೂರು: ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾರತದ ಟೇಬಲ್‌ ಟೆನಿಸ್‌ ಮಹಿಳಾ ತಂಡದಿಂದ ತಮ್ಮನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಬೆಂಗಳೂರಿನ ಅರ್ಚನಾ ಕಾಮತ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಚ್‌ ವಜಾಗೊಳಿಸಿದೆ. ಅಲ್ಲದೇ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಟಿಟಿ ತಂಡದ ಅಂತಿಮ ಆಯ್ಕೆ ಪಟ್ಟಿಯನ್ನು ಆಯೋಜಕರಿಗೆ ರವಾನಿಸದಂತೆ ಟಿಟಿಎಫ್‌ಐಗೆ ನಿರ್ದೇಶಿಸಿ ಜೂನ್ 16ರಂದು ನೀಡಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿದೆ. 

Commonwealth Games : ಮಹಿಳಾ ಟೇಬಲ್ ಟೆನಿಸ್ ತಂಡ ಆಯ್ಕೆಗೆ ಕರ್ನಾಟಕ ಹೈಕೋರ್ಟ್ ಬ್ರೇಕ್‌

ಆಟಗಾರರ ಆಯ್ಕೆಗಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ರಚಿಸಿರುವ ಇಬ್ಬರು ತಜ್ಞರಿರುವ ಆಡಳಿತಗಾರರ ಸಮಿತಿ 2022ರ ಫೆಬ್ರವರಿಯಿಂದ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಆಯ್ಕೆ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ. ಅರ್ಚನಾ ಟಿಟಿ ಮಹಿಳಾ ಡಬಲ್ಸ್‌ನ ವಿಶ್ವ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದರೂ ಅವರನ್ನು ತಂಡದಿಂದ ಕೈಬಿಡಲಾಗಿದೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಖೋ ಖೋ: ಕ್ಯಾಪ್ರಿ ಗ್ಲೋಬಲ್, ಕೆಎಲ್‌ಒ ಸ್ಪೋರ್ಟ್ಸ್ ಮಾಲಿಕತ್ವ

ಬೆಂಗಳೂರು: ಕ್ಯಾಪ್ರಿ ಗ್ಲೋಬಲ್ ಮತ್ತು ಕೆಎಲ್‌ಒ ಸ್ಪೋರ್ಟ್ಸ್‌ ಸಂಸ್ಥೆಗಳು ಅಲ್ಟಿಮೇಟ್‌ ಖೋ ಖೋ ಲೀಗ್‌(ಯುಕೆಕೆ) ಕ್ರಮವಾಗಿ ರಾಜಸ್ಥಾನ ಮತ್ತು ಚೆನ್ನೈ ತಂಡಗಳ ಮಾಲಿಕತ್ವ ಪಡೆದುಕೊಂಡಿವೆ. ಕೆಎಲ್‌ಒ ಸಂಸ್ಥೆ ಒಡೆತನದ ತಂಡಕ್ಕೆ ಚೆನ್ನೈ ಕ್ವಿಕ್‌ ಗನ್ಸ್‌ ಎಂದು ಹೆಸರು ಅಂತಿಮಗೊಳಿಸಲಾಗಿದೆ. ಆದರೆ ಕ್ಯಾಪ್ರಿ ಗ್ಲೋಬಲ್‌ನ ರಾಜಸ್ಥಾನ ಮೂಲದ ತಂಡಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಕೆಎಲ್‌ಒ ಸ್ಪೋರ್ಟ್ಸ್ ಸಂಜಯ್‌ ಜುಪುಡಿ ಮತ್ತು ಶ್ರೀನಾಥ್‌ ಚಿತ್ತೂರಿ ಅವರ ಸಹ ಮಾಲಿಕತ್ವದಲ್ಲಿದೆ. ಡಾಬರ್‌ ಸಮೂಹದ ಮುಖ್ಯಸ್ಥ ಅಮಿತ್‌ ಬರ್ಮನ್‌ ಅವರು ಭಾರತೀಯ ಖೋ ಖೋ ಫೆಡರೇಷನ್‌(ಕೆಕೆಎಫ್‌ಐ) ಸಹಯೋಗದಲ್ಲಿ ಖೋ ಖೋ ಲೀಗ್‌ ಆರಂಭಿಸುತ್ತಿದ್ದಾರೆ.