Asianet Suvarna News Asianet Suvarna News

ಸಂತೋಷ್‌ ಟ್ರೋಫಿ: ಇಂದು ಕರ್ನಾಟಕ-ಗುಜರಾತ್‌ ಫೈಟ್‌

ಇಂದಿನಿಂದ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿ ಆರಂಭ
4 ಬಾರಿಯ ಚಾಂಪಿಯನ್ ಕರ್ನಾಟಕಕ್ಕೆ ಗುಜರಾತ್ ಸವಾಲು
ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ಕರ್ನಾಟಕ ಫುಟ್ಬಾಲ್ ತಂಡ

Santosh Trophy Karnataka take on Gujarat in first match kvn
Author
First Published Dec 23, 2022, 9:02 AM IST

ನವದೆಹಲಿ(ಡಿ.23): ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದ್ದು, 4 ಬಾರಿ ಚಾಂಪಿಯನ್‌ ಕರ್ನಾಟಕ ಮೊದಲ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ನವದೆಹಲಿಯ ಜವಹರಲಾಲ್‌ ನೆಹರೂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. 

ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಕೇರಳ ವಿರುದ್ಧ ಸೋತಿದ್ದ ರಾಜ್ಯ ತಂಡ ಈ ಬಾರಿ ಅತ್ಯುತ್ತಮ ಪ್ರದರ್ಶನ ತೋರಿ ಪ್ರಶಸ್ತಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ. ಕರ್ನಾಟಕ ಕೊನೆ ಬಾರಿ 1968-69ರಲ್ಲಿ ಚಾಂಪಿಯನ್‌ ಆಗಿತ್ತು. 5 ಬಾರಿ ರನ್ನರ್‌-ಅಪ್‌ ಆಗಿರುವ ರಾಜ್ಯ ತಂಡ 1975-76ರಲ್ಲಿ ಕೊನೆ ಬಾರಿ ಫೈನಲ್‌ ಪ್ರವೇಶಿಸಿತ್ತು.

ಪಂದ್ಯ: ಮಧ್ಯಾಹ್ನ 2.30ಕ್ಕೆ

ಟೂರ್ನಿ ಮಾದರಿ ಹೇಗೆ?

ಈ ಬಾರಿ 36 ತಂಡಗಳು ಮೊದಲ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದು, ತಲಾ 6 ತಂಡಗಳ 6 ಗುಂಪು ರಚಿಸಲಾಗಿದೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳ ಜೊತೆ ಉತ್ತಮ ಪ್ರದರ್ಶನ ತೋರಿ 2ನೇ ಸ್ಥಾನ ಪಡೆಯುವ 2 ಅಗ್ರ ತಂಡಗಳು ಪ್ರಧಾನ ಸುತ್ತಿಗೇರಲಿವೆ. ರೈಲ್ವೇಸ್‌ ಹಾಗೂ ಸರ್ವಿಸಸ್‌ ನೇರವಾಗಿ ಪ್ರಧಾನ ಸುತ್ತಿಗೆ ಪ್ರವೇಶಿಸಿವೆ. ಪ್ರಧಾನ ಸುತ್ತಿನಲ್ಲಿ 10 ತಂಡಗಳನ್ನು ತಲಾ 5ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್‌ಗೇರಲಿವೆ ಎಂದು ತಿಳಿದುಬಂದಿದೆ.

ಪ್ಯಾರಾ ಶೂಟಿಂಗ್‌ ಕೂಟ: ಕರ್ನಾಟಕಕ್ಕೆ 6 ಪದಕ

ಹುಬ್ಬಳ್ಳಿ: ಮಧ್ಯಪ್ರದೇಶದ ಇಂದೋರ್‌ ಸೈನಿಕ ಶೂಟಿಂಗ್‌ ರೇಂಜ್‌ನಲ್ಲಿ ಡಿ.11ರಿಂದ 9 ದಿನಗಳ ಕಾಲ ನಡೆದ 3ನೇ ರಾಷ್ಟ್ರೀಯ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 4 ಚಿನ್ನ, 1 ಬೆಳ್ಳಿ, 1 ಕಂಚು ಸೇರಿ 6 ಪದಕ ಬಾಚಿಕೊಂಡಿದ್ದು, ಕೂಟದಲ್ಲಿ 3ನೇ ಸ್ಥಾನಿಯಾಯಿತು. ಕರ್ನಾಟಕದ ಒಟ್ಟು 13 ಶೂಟರ್‌ಗಳು ಕೂಟದಲ್ಲಿ ಭಾಗವಹಿಸಿದ್ದರು. ಈ ಪೈಕಿ ಶ್ರೀಹರ್ಷ ದೇವರಡ್ಡಿ 3, ರಾಕೇಶ್‌ ನಿಡಗುಂದಿ 1 ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಸಚಿನ್‌ ಸಿದ್ದಣ್ಣವರ 1 ಕಂಚಿನ ಪದಕ ಪಡೆದರು.

ಸಾಗರೋಪಾದಿಯಲ್ಲಿ ಅರ್ಜೆಂಟೀನಾ ಆಟಗಾರರಿದ್ದ ಬಸ್ ಮುತ್ತಿದ ಫ್ಯಾನ್ಸ್, ಕೊನೆಗೆ ಹೆಲಿಕಾಪ್ಟರ್ ಬಳಸಿ ಸ್ಥಳಾಂತರ..!

2023ರ ಏಷ್ಯನ್‌ ಕುಸ್ತಿ ಕೂಟಕ್ಕೆ ನವದೆಹಲಿ ಆತಿಥ್ಯ

ನವದೆಹಲಿ: 2023ರ ಹಿರಿಯರ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ ನವದೆಹಲಿಯಲ್ಲಿ ಮಾರ್ಚ್‌ 28ರಿಂದ ಏಪ್ರಿಲ್‌ 2ರ ವರೆಗೆ ನಡೆಯಲಿದೆ ಎಂದು ವಿಶ್ವ ಕುಸ್ತಿ ಒಕ್ಕೂಟ(ಯುಡಬ್ಲ್ಯುಡಬ್ಲು) ಬುಧವಾರ ಮಾಹಿತಿ ನೀಡಿದೆ. ಇದರೊಂದಿಗೆ 3 ವರ್ಷಗಳಲ್ಲಿ ಭಾರತಕ್ಕೆ 2ನೇ ಬಾರಿ ಆತಿಥ್ಯ ಹಕ್ಕು ಸಿಕ್ಕಿದೆ. ಈ ಮೊದಲು 2020ರ ಫೆಬ್ರವರಿಯಲ್ಲಿ ಕೂಟಕ್ಕೆ ನವದೆಹಲಿ ಆತಿಥ್ಯ ವಹಿಸಿತ್ತು.

ಫುಟ್ಬಾಲ್‌: ವಿಶ್ವಕಪ್‌ ಗೆದ್ರೂ ವಿಶ್ವ ನಂ.1 ಸ್ಥಾನಕ್ಕೇರದ ಅರ್ಜೆಂಟೀನಾ ತಂಡ!

ಜ್ಯುರಿಚ್‌(ಸ್ವಿಜರ್‌ಲೆಂಡ್‌): ಫಿಫಾ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಹೊರತಾಗಿಯೂ ಅರ್ಜೆಂಟೀನಾ ಫಿಫಾ ವಿಶ್ವ ರ‍್ಯಾಂಕಿಂಗ್‌‌ನಲ್ಲಿ 2ನೇ ಸ್ಥಾನದಲ್ಲಿದ್ದು, ಬ್ರೆಜಿಲ್‌ ನಂ.1 ಸ್ಥಾನದಲ್ಲಿ ಮುಂದುವರಿದಿದೆ. ವಿಶ್ವಕಪ್‌ಗೂ ಮುನ್ನ 3ನೇ ಸ್ಥಾನದಲ್ಲಿದ್ದ ಮೆಸ್ಸಿ ಬಳಗ 1 ಸ್ಥಾನ ಮೇಲೇರಿದ್ದು, ಫ್ರಾನ್ಸ್‌ 3ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. 

ಬೆಲ್ಜಿಯಂ 2 ಸ್ಥಾನ ಕುಸಿದು 4ನೇ ಸ್ಥಾನ ಪಡೆದರೆ, ಇಂಗ್ಲೆಂಡ್‌, ನೆದರ್ಲೆಂಡ್‌್ಸ, ಕ್ರೊವೇಷಿಯಾ, ಇಟಲಿ, ಪೋರ್ಚುಗಲ್‌, ಸ್ಪೇನ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಮೊರಾಕ್ಕೊ 11 ಸ್ಥಾನ ಮೇಲೇರಿ 11ನೇ ಸ್ಥಾನ ಪಡೆದರೆ, ಏಷ್ಯಾದ ತಂಡಗಳ ಪೈಕಿ ಅಗ್ರ ಶ್ರೇಯಾಂಕದಲ್ಲಿರುವ ಜಪಾನ್‌ 4 ಸ್ಥಾನ ಬಡ್ತಿ ಪಡೆದು 20ನೇ ಸ್ಥಾನಕ್ಕೇರಿದೆ.

Follow Us:
Download App:
  • android
  • ios