ಸಂತೋಷ್ ಟ್ರೋಫಿ: ಕರ್ನಾಟಕ ಫುಟ್ಬಾಲ್ ತಂಡಕ್ಕೆ ಹ್ಯಾಟ್ರಿಕ್ ಗೆಲುವು
ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ರಾಜ್ಯ ಫುಟ್ಬಾಲ್ ತಂಡಕ್ಕೆ ಹ್ಯಾಟ್ರಿಕ್ ಜಯಭೇರಿ
ಕರ್ನಾಟಕ ತಂಡಕ್ಕೆ ಲಡಾಖ್ ವಿರುದ್ಧ ರಾಜ್ಯ ತಂಡ 3-2 ಗೋಲುಗಳಿಂದ ಗೆಲುವು
ಕರ್ನಾಟಕ ಗುಂಪು 1ರಲ್ಲಿ 9 ಅಂಕದೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆ
ನವದೆಹಲಿ(ಡಿ.28): ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಪ್ರಧಾನ ಸುತ್ತಿಗೇರುವ ನಿರೀಕ್ಷೆಯಲ್ಲಿದೆ. ಮಂಗಳವಾರ ಲಡಾಖ್ ವಿರುದ್ಧ ರಾಜ್ಯ ತಂಡ 3-2 ಗೋಲುಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಕರ್ನಾಟಕ ಗುಂಪು 1ರಲ್ಲಿ 9 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಒಂದೂ ಗೆಲುವು ಕಾಣದ ಲಡಾಖ್ ಕೊನೆ ಸ್ಥಾನದಲ್ಲೇ ಉಳಿಯಿತು.
9ನೇ ನಿಮಿಷದಲ್ಲೇ ಮೊಹಮದ್ ಇಲ್ಯಾಸ್ ಗೋಲು ಬಾರಿಸಿ ಲಡಾಖ್‌ಗೆ ಮುನ್ನಡೆ ಒದಗಿಸಿದರು. ಆದರೆ 27ನೇ ನಿಮಿಷದಲ್ಲಿ ಅಭಿಷೇಕ್ ಶಂಕರ್ ದಾಖಲಿಸಿದ ಗೋಲಿನಿಂದ ರಾಜ್ಯ ತಂಡ ಸಮಬಲ ಸಾಧಿಸಿತು. ಬಳಿಕ ಜೇಕಬ್ ಜಾನ್(54ನೇ ನಿಮಿಷ), ರಾಬಿನ್ ಯಾದವ್(80ನೇ ನಿಮಿಷ) ಗೋಲು ಹೊಡೆದು ರಾಜ್ಯವನ್ನು ಜಯದತ್ತ ಕೊಂಡೊಯ್ದರು. 93ನೇ ನಿಮಿಷದಲ್ಲಿ ಸ್ಟಾಂಜಿನ್ ಗಿಲಿಕ್ ಲಡಾಖ್ ಪರ ಗೋಲು ಹೊಡೆದರೂ ಸೋಲು ತಪ್ಪಿಸಲು ಆಗಲಿಲ್ಲ. ಕರ್ನಾಟಕ ತನ್ನ 4ನೇ ಪಂದ್ಯದಲ್ಲಿ ಗುರುವಾರ ತ್ರಿಪುರಾ ವಿರುದ್ಧ ಸೆಣಸಾಡಲಿದೆ.
ರಾಷ್ಟ್ರೀಯ ಬಾಸ್ಕೆಟ್‌ಬಾಲ್: ರಾಜ್ಯಕ್ಕೆ ಕಂಚು
ಇಂದೋರ್: ಇಲ್ಲಿ ನಡೆದ 37ನೇ ರಾಷ್ಟ್ರೀಯ ಯುವ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಬಾಲಕಿಯರ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಮಂಗಳವಾರ ರಾಜಸ್ಥಾನ ವಿರುದ್ಧ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ರಾಜ್ಯ ತಂಡ 73-72 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. ಆಧ್ಯಾ ನಾಗಲಿಂಗ 20, ಯಶಸ್ವಿನಿ ಹಗೂ ನಿಧಿ ಉಮೇಶ್ ತಲಾ 16 ಅಂಕ ಸಂಪಾದಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬ್ಯಾಡ್ಮಿಂಟನ್ ರ‍್ಯಾಂಕಿಂಗ್: 8ನೇ ಸ್ಥಾನಕ್ಕೆ ಪ್ರಣಯ್
ನವದೆಹಲಿ: ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೆ ಜೀವನಶ್ರೇಷ್ಠ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. 30 ವರ್ಷದ ಪ್ರಣಯ್ ಈ ಮೊದಲು 2018ರಲ್ಲೂ 8ನೇ ಸ್ಥಾನ ಪಡೆದುಕೊಂಡಿದ್ದರು. ಬಳಿಕ 2019ರಲ್ಲಿ 34ನೇ ಸ್ಥಾನಕ್ಕೆ ಕುಸಿದಿದ್ದ ಅವರು ಈ ವರ್ಷ ಥಾಮಸ್ ಕಪ್ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಮತ್ತೆ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ಕರ್ನಾಟಕ ಕ್ರಿಕೆಟ್ ತಂಡಕ್ಕೆ ವಿಜಯಪುರ ಬಾಲಕಿಯರಿಬ್ಬರು ಆಯ್ಕೆ
ಮತ್ತೊರ್ವ ಯುವ ಶಟ್ಲರ್ ಲಕ್ಷ್ಯ ಸೇನ್ 7ನೇ ಸ್ಥಾನದಲ್ಲಿ ಮುಂದುವರಿದಿದ್ದು, ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ 1 ಸ್ಥಾನ ಕುಸಿದು 12ನೇ ಸ್ಥಾನದಲ್ಲಿದ್ದಾರೆ. ಮಹಿಳಾ ರ‍್ಯಾಂಕಿಂಗ್‌ನಲ್ಲಿ 1 ಸ್ಥಾನ ಹಿಂಬಡ್ತಿ ಪಡೆದು 7ನೇ ಸ್ಥಾನಕ್ಕೆ ಜಾರಿದ್ದು, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ 5ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಡೆವಿಸ್ ಕಪ್ ಟೆನಿಸ್: ಭಾರತ ತಂಡ ಪ್ರಕಟ
ನವದೆಹಲಿ: 2023ರ ಫೆಬ್ರವರಿಯಲ್ಲಿ ಡೆನ್ಮಾರ್ಕ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ಟೆನಿಸ್ ವಿಶ್ವ ಗುಂಪು-1 ಟೂರ್ನಿಯ ಡೆನ್ಮಾರ್ಕ್ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಪ್ರಕಟಿಸಲಾಗಿದೆ. ಅನುಭವಿ ಆಟಗಾರರಾದ ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ರಾಮಕುಮಾರ್ ರಾಮನಾಥನ್, ಪ್ರಜ್ಞೇಶ್ ಗುಣೇಶ್ವರನ್ ಹಾಗೂ ಶಶಿಕುಮಾರ್ ಮುಕುಂದ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸುಮಿತ್ ನಗಾಲ್ ಮೀಸಲು ಆಟಗಾರನಾಗಿ ಪ್ರಯಾಣಿಸಲಿದ್ದಾರೆ. ಪಂದ್ಯಗಳು ಫೆ.3 ಮತ್ತು 4ಕ್ಕೆ ನಡೆಯಲಿವೆ. ಕಳೆದ ಮಾಚ್‌ರ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದಿದ್ದ ಮೊದಲ ಹಂತದ ಪಂದ್ಯದಲ್ಲಿ ಭಾರತ 4-0 ರಲ್ಲಿ ಡೆನ್ಮಾರ್ಕ್ ವಿರುದ್ಧ ಗೆದ್ದಿತ್ತು. ಬಳಿಕ ನಾರ್ವೆ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡಿತ್ತು.