Santosh Trophy: ಇಂದು ಕರ್ನಾಟಕ-ಮೇಘಾಲಯ ಫೈನಲ್ ಹಣಾಹಣಿ, ಇತಿಹಾಸ ಬರೆಯುತ್ತಾ ರಾಜ್ಯ ತಂಡ?
ಸಂತೋಷ್ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ-ಮೇಘಾಲಯ ಫೈನಲ್ ಫೈಟ್
ಐದು ದಶಕಗಳ ಬಳಿಕ ಸಂತೋಷ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಕರ್ನಾಟಕ
5ನೇ ಬಾರಿಗೆ ಸಂತೋಷ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿ ರಾಜ್ಯ ತಂಡ
ರಿಯಾದ್(ಮಾ.04): 54 ವರ್ಷಗಳ ಬಳಿಕ ಮತ್ತೊಮ್ಮೆ ಪ್ರತಿಷ್ಠಿತ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಅಲಂಕರಿಸಲು ಎದುರು ನೋಡುತ್ತಿರುವ ಕರ್ನಾಟಕ ತಂಡ ಶನಿವಾರ ಫೈನಲ್‌ನಲ್ಲಿ ಮೇಘಾಲಯ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ರಿಯಾದ್ನ ಕಿಂಗ್ ಫಹದ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಟೂರ್ನಿಯ ಅಂತಿಮ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕೇರಳವನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದ ಕರ್ನಾಟಕ, ಸೆಮಿಫೈನಲ್ನಲ್ಲಿ 6 ಬಾರಿ ಚಾಂಪಿಯನ್ ಸರ್ವಿಸಸ್ ವಿರುದ್ಧ ಗೆಲುವು ಸಾಧಿಸಿತ್ತು. 1968-69ರಲ್ಲಿ ಕೊನೆ ಬಾರಿ ಪ್ರಶಸ್ತಿ ಗೆದ್ದಿದ್ದ ರಾಜ್ಯ ತಂಡ, ಕೊನೆ ಬಾರಿಗೆ ಫೈನಲ್‌ನಲ್ಲಿ ಆಡಿದ್ದು 1975-76ರಲ್ಲಿ. ಇದೀಗ 5ನೇ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ ಮೇಘಾಲಯ ಸೆಮೀಸ್‌ನಲ್ಲಿ ಮಾಜಿ ಚಾಂಪಿಯನ್ ಪಂಜಾಬ್ಗೆ ಸೋಲುಣಿಸಿದ್ದು, ಚೊಚ್ಚಲ ಪ್ರಯತ್ನದಲ್ಲೇ ಐತಿಹಾಸಿಕ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಎರಡೂ ತಂಡಗಳು ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.
ಪಂದ್ಯ: ರಾತ್ರಿ 9ಕ್ಕೆ, ನೇರಪ್ರಸಾರ: ಫ್ಯಾನ್ಕೋಡ್
ಭಾರತದ ಪುರುಷರ ಹಾಕಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಫುಲ್ಟನ್ ಕೋಚ್
ನವದೆಹಲಿ(ಮಾ.04): ಭಾರತದ ಪುರುಷರ ಹಾಕಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಕ್ರೇಗ್ ಫುಲ್ಟನ್ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ತಂಡ ಹಾಕಿ ವಿಶ್ವಕಪ್ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಬಳಿಕ ಆಸ್ಪ್ರೇಲಿಯಾದ ಗ್ರಹಾಂ ರೀಡ್ ರಾಜೀನಾಮೆ ನೀಡಿದ್ದರು. ಇದರಿಂದ ತೆರವುಗೊಂಡಿದ್ದ ಸ್ಥಾನವನ್ನು ಫುಲ್ಟನ್ ತುಂಬಲಿದ್ದಾರೆ.
ದಕ್ಷಿಣ ಆಫ್ರಿಕಾ ಪರ 195 ಪಂದ್ಯಗಳನ್ನಾಡಿರುವ ಫುಲ್ಟನ್‌ಗೆ ಕೋಚಿಂಗ್ನಲ್ಲಿ 25 ವರ್ಷಗಳ ಅನುಭವವಿದೆ. ಅವರ ಮಾರ್ಗದರ್ಶನದಲ್ಲಿ ಐರ್ಲೆಂಡ್ 100 ವರ್ಷಗಳಲ್ಲೇ ಮೊದಲ ಬಾರಿಗೆ 2016ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ಹಾಲಿ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡದೊಂದಿಗೂ ಕೆಲಸ ಮಾಡಿದ ಅನುಭವವಿರುವ ಪುಲ್ಟನ್ಗೆ 2015ರ ಎಫ್‌ಐಎಚ್ ಶ್ರೇಷ್ಠ ಕೋಚ್ ಪ್ರಶಸ್ತಿ ಲಭಿಸಿತ್ತು. ಅವರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ತಿಳಿಸಿದ್ದಾರೆ.
Indian Super League: ಸೆಮೀಸ್‌ಗೆ ಬೆಂಗಳೂರು ಎಫ್‌ಸಿ ಲಗ್ಗೆ..! ವಿವಾದ ಮಾಡಿ ಮೈದಾನ ತೊರೆದ ಕೇರಳ
ಕಬಡ್ಡಿ ಫೈನಲ್‌ಗೆ ಭಾರತ
ಉರ್ಮಿಯಾ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಎರಡನೇ ಆವೃತ್ತಿಯ ಕಿರಿಯರ ಕಬಡ್ಡಿ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೇರಲಿದೆ. ಚೊಚ್ಚಲ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಶುಕ್ರವಾರ ಸೆಮೀಸ್‌ನಲ್ಲಿ 75-29ರಲ್ಲಿ ಜಯಿಸಿತು. ಮತ್ತೊಂದು ಸೆಮೀಸ್‌ನಲ್ಲಿ ನೇಪಾಳವನ್ನು ಹಾಲಿ ಚಾಂಪಿಯನ್ ಇರಾನ್ 60-37ರಲ್ಲಿ ಮಣಿಸಿತು. ಭಾನುವಾರ ಫೈನಲ್ ನಡೆಯಲಿದೆ.