ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿಫ್ರೀ ಕಿಕ್‌ನಲ್ಲಿ ಗೋಲು ಬಾರಿಸಿ ತಂಡವನ್ನು ಸೆಮೀಸಿಗೆ ಕೊಂಡೊಯ್ದ ಸುನಿಲ್ ಚೆಟ್ರಿರೆಫ್ರಿ ತೀರ್ಪು ವಿರೋದಿಸಿ ಮೈದಾನ ತೊರೆದು ವಿವಾದವೆಬ್ಬಿಸಿದ ಕೇರಳ ಬ್ಲಾಸ್ಟರ್ಸ್
ಬೆಂಗಳೂರು(ಮಾ.04): ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಇತಿಹಾಸದಲ್ಲೇ ರೆಫ್ರಿ ತೀರ್ಪು ವಿರೋಧಿಸಿ ತಂಡವೊಂದು ಮೈದಾನ ತೊರೆದ ಘಟನೆ ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಡೆಯಿತು. ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಸುನಿಲ್ ಚೆಟ್ರಿ ಫ್ರೀ ಕಿಕ್ ಮೂಲಕ ಬಾರಿಸಿದ ಗೋಲು, ಬೆಂಗಳೂರು ಎಫ್‌ಸಿ ತಂಡವನ್ನು ಸೆಮಿಫೈನಲ್‌ಗೇರಿಸಿತು.
ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಬಿಎಫ್‌ಸಿ ಹಲವು ಗೋಲು ಬಾರಿಸುವ ಅವಕಾಶ ಪಡೆದರೂ ಯಶಸ್ಸು ಕಾಣಲಿಲ್ಲ. ಕೇರಳ ಸಹ ತನಗೆ ಸಿಕ್ಕ ಅನೇಕ ಅವಕಾಶಗಳನ್ನು ವ್ಯರ್ಥ ಮಾಡಿತು. ನಿಗದಿತ 90 ನಿಮಿಷಗಳ ಆಟ ಮುಕ್ತಾಯಗೊಂಡ ಬಳಿಕ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು.
ಈ ವೇಳೆ 96ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್‌ನಲ್ಲಿ ಚೆಟ್ರಿ, ಕೇರಳ ಗೋಲ್‌ಕೀಪರ್‌ನನ್ನು ವಂಚಿಸುವಲ್ಲಿ ಯಶಸ್ವಿಯಾದರು. ರೆಫ್ರಿ ಗೋಲು ಮಾನ್ಯಗೊಳಿಸುತ್ತಿದ್ದಂತೆ ವಿರೋಧಿಸಲು ಶುರು ಮಾಡಿದ ಕೇರಳ ಆಟಗಾರರನ್ನು ಕೋಚ್ ವುಕೊಮನೊವಿಚ್ ಮೈದಾನದಿಂದ ಹೊರ ಕರೆದರು. ಸುಮಾರು 20 ನಿಮಿಷಗಳಿಗೂ ಹೆಚ್ಚಿನ ಸಮಯ ಕಾಯ್ದ ಬಳಿಕ ಮ್ಯಾಚ್ ಕಮೀಷನರ್ ಬಿಎಫ್‌ಸಿ ವಿಜಯಿ ಎಂದು ಘೋಷಿಸುವಂತೆ ರೆಫ್ರಿಗೆ ಸೂಚಿಸಿದರು.
ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಬಿಎಫ್‌ಸಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಬಿಎಫ್‌ಸಿ ಆಟಗಾರರು ಸಹ ಸೆಮೀಸ್‌ಗೇರಿದ ಸಂಭ್ರಮದಲ್ಲಿ ತೇಲಿದರು. ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ಬಿಎಫ್‌ಸಿಗೆ ಮುಂಬೈ ಸಿಟಿ ಎಫ್‌ಸಿ ಎದುರಾಗಲಿದೆ. ಶನಿವಾರ 2ನೇ ಎಲಿಮಿನೇಟರ್‌ನಲ್ಲಿ ಮೋಹನ್ ಬಗಾನ್ ಹಾಗೂ ಒಡಿಶಾ ಎದುರಾಗಲಿವೆ.
ವಿವಾದಕ್ಕೆ ಕಾರಣವೇನು?
ಫ್ರೀ ಕಿಕ್ ವೇಳೆ ಚೆಟ್ರಿ ಹಾಗೂ ಕೆಲ ಬಿಎಫ್‌ಸಿ ಆಟಗಾರರು ಕೇರಳ ಆಟಗಾರರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ನಡುವೆ ಚೆಟ್ರಿ ಬಾರಿಸಿದ ಚೆಂಡು ಗೋಲು ಪೆಟ್ಟಿಗೆ ಸೇರಿತು. ರೆಫ್ರಿ ಗೋಲು ದಾಖಲಾಯಿತು ಎಂದು ಘೋಷಿಸಿದರು. ಆದರೆ ಫ್ರೀ ಕಿಕ್‌ಗೂ ಮುನ್ನ ರೆಫ್ರಿ ಸೂಚನೆ ನೀಡಲಿಲ್ಲ. ತಾವು ಸಿದ್ಧರಿರಲಿಲ್ಲ ಎಂದು ಕೇರಳ ಆಟಗಾರರು ಪ್ರತಿಭಟಿಸಲು ಶುರು ಮಾಡಿದರು. ಕೋಚ್ ವುಕೊಮನೊವಿಚ್ ಆಟಗಾರರನ್ನು ಮೈದಾನ ಬಿಟ್ಟು ಬರುವಂತೆ ಕರೆದರು.
Indian Super League: ಪ್ಲೇ-ಆಫ್‌ನಲ್ಲಿ ಇಂದು ಬಿಎಫ್‌ಸಿ-ಕೇರಳ ಫೈಟ್
ನಾಯಕ ಏಡ್ರಿಯನ್ ಲುನಾ ರೆಫ್ರಿ ಕ್ರಿಸ್ಟಲ್ ಜಾನ್ ಜೊತೆ ಜಗಳಕ್ಕೇ ಇಳಿದರು. ಚೆಟ್ರಿ ಕೇರಳ ಆಟಗಾರರನ್ನು ಸಮಾಧನಪಡಿಸಿ ಆಟ ಮುಂದುವರಿಸುವಂತೆ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಕೇರಳ ಆಟಗಾರರು ಮೈದಾನಕ್ಕೆ ವಾಪಸಾಗದ ಕಾರಣ ಗೆಲುವನ್ನು ಬಿಎಫ್‌ಸಿಗೆ ನೀಡಲಾಯಿತು.
ಸ್ಟಾಫರ್ಡ್ ಕಪ್ ಫುಟ್ಬಾಲ್: ಚೆನ್ನೈಯಿನ್ ಫೈನಲ್ಗೆ
ಬೆಂಗಳೂರು: ಸ್ಟಾಫರ್ಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ಡೆಲ್ಲಿ ಎಫ್‌ಸಿ ವಿರುದ್ಧ ನಡೆದ ಸೆಮಿಫೈನಲ್ನಲ್ಲಿ ಚೆನ್ನೈಯಿನ್ ತಂಡ ಪೆನಾಲ್ಟಿಶೂಟೌಟ್ನಲ್ಲಿ 4-2 ಗೆಲುವು ಸಾಧಿಸಿತು. ನಿಗದಿತ ಅವಧಿ ಮುಕ್ತಾಯದ ವೇಳೆಗೆ ಉಭಯ ತಂಡಗಳು 2-2ರಿಂದ ಸಮಬಲಗೊಂಡಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಮೊರೆಹೋಗಲಾಯಿತು. ಶನಿವಾರ ಮತ್ತೊಂದು ಸೆಮೀಸ್ನಲ್ಲಿ ಬೆಂಗಳೂರು ಯುನೈಟೆಡ್ ಎಫ್‌ಸಿ ಹಾಗೂ ಬೆಂಗಳೂರಿನ ಎಎಸ್ಸಿ ತಂಡಗಳು ಮುಖಾಮುಖಿಯಾಗಲಿವೆ.
