SAFF Cup 2023: ಬೆಂಗಳೂರಲ್ಲಿಂದು ಭಾರತ-ಪಾಕ್ ಫುಟ್ಬಾಲ್
ಬೆಂಗಳೂರಲ್ಲಿ ಇಂದು ಭಾರತ-ಪಾಕ್ ಫುಟ್ಬಾಲ್
14ನೇ ಆವೃತ್ತಿ ಸ್ಯಾಫ್ ಕಪ್ಗೆ ಇಂದು ಚಾಲನೆ
ಟೂರ್ನಿಗೆ ಕಂಠೀರವ ಕ್ರೀಡಾಂಗಣ ಆತಿಥ್ಯ
8 ತಂಡ ಭಾಗಿ, ಜು.4ಕ್ಕೆ ಫೈನಲ್
ಬೆಂಗಳೂರು(ಜೂ.21): 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್ಶಿಪ್ಗೆ ವೇದಿಕೆ ಸಜ್ಜುಗೊಂಡಿದ್ದು, ದಕ್ಷಿಣ ಏಷ್ಯಾದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಗೆ ಬುಧವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಮೊದಲ ದಿನವೇ ಭಾರತ ಹಾಗೂ ಪಾಕಿಸ್ತಾನ ಎದುರಾಗಲಿವೆ. ಟೂರ್ನಿಯಲ್ಲಿ ಈ ಬಾರಿ 8 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ, ಪಾಕಿಸ್ತಾನ ಸೇರಿದಂತೆ ವಿವಿಧ ತಂಡಗಳ ರೋಚಕ ಕದನಕ್ಕೆ ಸಾಕ್ಷಿಯಾಗಲು ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೂರ್ನಿಯ ಎಲ್ಲಾ 15 ಪಂದ್ಯಗಳಿಗೂ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
8 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಹಾಗೂ ಕುವೈಟ್ ತಂಡಗಳಿದ್ದರೆ, ‘ಬಿ’ ಗುಂಪಿನಲ್ಲಿ ಲೆಬನಾನ್, ಮಾಲ್ಡೀವ್್ಸ, ಭೂತಾನ್ ಹಾಗೂ ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್ ಪ್ರವೇಶಿಸಲಿದ್ದು, ಜುಲೈ 4ರಂದು ಫೈನಲ್ ನಡೆಯಲಿದೆ. ಬುಧವಾರ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮಧ್ಯಾಹ್ನ 3.30ಕ್ಕೆ ಕುವೈಟ್ ಹಾಗೂ ನೇಪಾಳ ಸೆಣಸಲಿವೆ.
9ನೇ ಪ್ರಶಸ್ತಿ ಗೆಲ್ಲಲು ಭಾರತ ತಂಡ ಕಾತರ
ಟೂರ್ನಿಯಲ್ಲಿ ಈವರೆಗೆ ಭಾರತ ತಂಡವೇ ಪ್ರಾಬಲ್ಯ ಸಾಧಿಸಿದ್ದು, 8 ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಉಳಿದಂತೆ ಮಾಲ್ಡೀವ್್ಸ 2, ಬಾಂಗ್ಲಾದೇಶ, ಅಷ್ಘಾನಿಸ್ತಾನ ಹಾಗೂ ಶ್ರೀಲಂಕಾ ತಲಾ 1 ಬಾರಿ ಪ್ರಶಸ್ತಿ ಗೆದ್ದಿವೆ. ಆತಿಥೇಯ ಭಾರತ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದು, ಪ್ರಾಬಲ್ಯ ಮುಂದುವರಿಸುವ ನಿರೀಕ್ಷೆಯಿದೆ. ಭಾರತ 2003ರ ಆವೃತ್ತಿ ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿದೆ ಎನ್ನುವುದು ಗಮನಾರ್ಹ.
ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಗೆ ಸಜ್ಜಾಗುತ್ತಿದೆ ಬೆಂಗಳೂರು
ಮೊದಲ ಬಾರಿ ಬೆಂಗ್ಳೂರು ಆತಿಥ್ಯ
ಸ್ಯಾಫ್ ಕಪ್ ಟೂರ್ನಿಗೆ ಇದೇ ಮೊದಲ ಬಾರಿ ಬೆಂಗಳೂರು ಆತಿಥ್ಯ ವಹಿಸುತ್ತಿದೆ. ಈ ಮೊದಲು 3 ಬಾರಿ ಭಾರತದಲ್ಲಿ ಟೂರ್ನಿ ನಡೆದಿತ್ತು. 1999ರಲ್ಲಿ ಮೊದಲ ಬಾರಿ ಗೋವಾದಲ್ಲಿ ನಡೆದಿದ್ದರೆ, 2011ರಲ್ಲಿ ನವದೆಹಲಿ ಆತಿಥ್ಯ ವಹಿಸಿತ್ತು. ಬಳಿಕ 2015ರಲ್ಲಿ ಕೇರಳದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಟೂರ್ನಿಗೆ ಆತಿಥ್ಯ ವಹಿಸಿದಾಗ ಭಾರತವೇ ಚಾಂಪಿಯನ್ ಆಗಿತ್ತು ಎನ್ನುವುದು ವಿಶೇಷ.
5 ವರ್ಷಗಳ ಬಳಿಕ ಭಾರತ-ಪಾಕ್ ಸೆಣಸು!
ಭಾರತ ತನ್ನ ಆರಂಭಿಕ ಪಂದ್ಯದಲ್ಲೇ ಬುಧವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಎರಡು ತಂಡಗಳು 2018ರಲ್ಲಿ ಕೊನೆ ಬಾರಿ ಮುಖಾಮುಖಿಯಾಗಿದ್ದವು. 2021ರ ಆವೃತ್ತಿಯಲ್ಲಿ ಪಾಕಿಸ್ತಾನ ಆಡಿರಲಿಲ್ಲ. 5 ವರ್ಷಗಳ ಬಳಿಕ ಮತ್ತೊಮ್ಮೆ ಸಾಂಪ್ರದಾಯಿಕ ಬದ್ಧ ಎದುರಾಳಿಗಳು ಕಾದಾಡಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಈ ಪಂದ್ಯದ ಬಹುತೇಕ ಟಿಕೆಟ್ಗಳು ಮಾರಾಟಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ನಿರೀಕ್ಷೆಯಿದೆ.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಫ್ಯಾನ್ ಕೋಡ್
ಏನಿದು ಸ್ಯಾಫ್ ಕಪ್?
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್(ಸ್ಯಾಫ್) ಆಯೋಜಿಸುವ ಟೂರ್ನಿಯು 2 ವರ್ಷಗಳಿಗೊಮ್ಮೆ ನಡೆಯಲಿದೆ. 1993ರಲ್ಲಿ ಆರಂಭಗೊಂಡ ಈ ಟೂರ್ನಿಯಲ್ಲಿ ದಕ್ಷಿಣ ಏಷ್ಯಾದ 7 ರಾಷ್ಟ್ರಗಳು ಭಾಗವಹಿಸುತ್ತಾ ಬಂದಿವೆ. ಈ ವರ್ಷ ಜನವರಿಯಲ್ಲಿ ಶ್ರೀಲಂಕಾಕ್ಕೆ ಫಿಫಾ ನಿಷೇಧ ಹೇರಿದ ಕಾರಣ, ಟೂರ್ನಿಯ ಗುಣಮಟ್ಟಹಾಗೂ ಸ್ಪರ್ಧಿಸುವ ತಂಡಗಳನ್ನು ಹೆಚ್ಚಿಸುವ ಉದ್ದೇಶದಿಂದ ಲೆಬನಾನ್ ಹಾಗೂ ಕುವೈಟ್ ತಂಡಗಳಿಗೆ ಆಹ್ವಾನ ನೀಡಲಾಯಿತು. ಭಾರತ ಹಾಗೂ ನೇಪಾಳ ಈ ವರೆಗಿನ ಎಲ್ಲಾ 13 ಆವೃತ್ತಿಗಳಲ್ಲಿ ಆಡಿದ್ದು, ಬಾಂಗ್ಲಾ 13ನೇ ಬಾರಿಗೆ ಕಣಕ್ಕಿಳಿಯಲಿದೆ. ಮಾಲ್ಡೀವ್್ಸ ಹಾಗೂ ಪಾಕಿಸ್ತಾನ 12ನೇ ಬಾರಿಗೆ, ಭೂತಾನ್ 9ನೇ ಬಾರಿಗೆ ಸ್ಪರ್ಧಿಸಲಿವೆ.
ಭಾರತದ ವೇಳಾಪಟ್ಟಿ
ದಿನಾಂಕ ಎದುರಾಳಿ ಸಮಯ
ಜೂ.21 ಪಾಕಿಸ್ತಾನ ಸಂಜೆ 7.30
ಜೂ.24 ನೇಪಾಳ ಸಂಜೆ 7.30
ಜೂ.27 ಕುವೈಟ್ ಸಂಜೆ 7.30