ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಗೆ ಸಜ್ಜಾಗುತ್ತಿದೆ ಬೆಂಗಳೂರು
ನಾಡಿದ್ದಿನಿಂದ ಫುಟ್ಬಾಲ್ ಟೂರ್ನಿ, ಭರದ ಸಿದ್ಧತೆ
ಕೆಲ ತಂಡಗಳಿಂದ ಅಭ್ಯಾಸ ಶುರು
ಭಾರತ-ಪಾಕ್ ಪಂದ್ಯದ ಟಿಕೆಟ್ಗೆ ಹೆಚ್ಚಿನ ಬೇಡಿಕೆ
ಬೆಂಗಳೂರು(ಜೂ.19): 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್ಶಿಪ್ಗೆ ಕ್ಷಣಗಣನೆ ಆರಂಭವಾಗಿದ್ದು, ದಕ್ಷಿಣ ಏಷ್ಯಾದ 8 ತಂಡಗಳ ನಡುವಿನ ರೋಚಕ ಕಾದಾಟಕ್ಕೆ ಆತಿಥ್ಯ ವಹಿಸಲು ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸಜ್ಜಾಗುತ್ತಿದೆ. ಟೂರ್ನಿಗೆ ಬೇಕಾದ ಅಂತಿಮ ಹಂತದ ಸಿದ್ಧತೆಗಳು ಕೂಡಾ ಕ್ರೀಡಾಂಗಣದಲ್ಲಿ ಭರದಿಂದ ಸಾಗುತ್ತಿದೆ.
ಟೂರ್ನಿಗೆ ಬುಧವಾರ(ಜೂ.21) ಚಾಲನೆ ಸಿಗಲಿದ್ದು, ಜುಲೈ 4ರಂದು ಮುಕ್ತಾಯಗೊಳ್ಳಲಿದೆ. 8 ಬಾರಿ ಚಾಂಪಿಯನ್ ಭಾರತದ ಜೊತೆ ಕುವೈತ್, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಲೆಬನಾನ್, ಮಾಲ್ಡೀವ್‌್ಸ ಹಾಗೂ ಭೂತಾನ್ ತಂಡಗಳು ಟೂರ್ನಿಯಲ್ಲಿ ಸೆಣಸಾಡಲಿವೆ. ಈ ಪೈಕಿ ನೇಪಾಳ, ಮಾಲ್ಡೀವ್‌್ಸ ಹಾಗೂ ಬಾಂಗ್ಲಾ ಆಟಗಾರರು ಈಗಾಗಲೇ ಬೆಂಗಳೂರಿಗೆ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಭಾರತ ಸೇರಿದಂತೆ ಇತರ ತಂಡಗಳು ಸೋಮವಾರ ನಗರಕ್ಕೆ ಕಾಲಿಡಲಿವೆ.
3 ಕಡೆ ಅಭ್ಯಾಸ: ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳಿಗೆ 3 ಕ್ರೀಡಾಂಗಣಗಳಲ್ಲಿ ಅಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್ಎ)ಯ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ, ಎಚ್ಐಎಲ್ ಮೈದಾನ ಹಾಗೂ ಸೌತ್ ಯುನೈಟೆಡ್ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣಗಳಲ್ಲಿ ತಂಡಗಳು ಅಭ್ಯಾಸ ನಡೆಸಲಿವೆ. ನೇಪಾಳ ಹಾಗೂ ಬಾಂಗ್ಲಾ ತಂಡಗಳು ಭಾನುವಾರ ಅಭ್ಯಾಸ ಆರಂಭಿಸಿದವು. ಆಟಗಾರರು ಉಳಿಯಲು ನಗರದ 3 ಖಾಸಗಿ ಹೋಟೆಲ್ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ಎಫ್ಎ ಕಾರ್ಯದರ್ಶಿ ಸತ್ಯನಾರಾಯಣ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಭಾರತ-ಪಾಕ್ ಪಂದ್ಯದ ಟಿಕೆಟ್ಗೆ ಹೆಚ್ಚಿನ ಬೇಡಿಕೆ
ಪಂದ್ಯಗಳ ಟಿಕೆಟ್ ಈಗಾಗಲೇ ಆನ್ಲೈನ್ನಲ್ಲಿ ಮಾರಾಟವಾಗುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವೆ ಜೂ.21ಕ್ಕೆ ನಡೆಯಲಿರುವ ಪಂದ್ಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಇನ್ನು, ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ಪ್ರಕ್ರಿಯೆ ಸೋಮವಾರ ಆರಂಭವಾಗಲಿದೆ. ಕಂಠೀರವ ಕ್ರೀಡಾಂಗಣ ಹಾಗೂ ಕೆಎಸ್ಎಫ್ಎ ಕ್ರೀಡಾಂಗಣದಲ್ಲಿ ಟಿಕೆಟ್ಗಳನ್ನು ಖರೀದಿಸಬಹುದು ಎಂದು ಕೆಎಸ್ಎಫ್ಎ ತಿಳಿಸಿದೆ.
Wrestlers Protest ಬಬಿತಾರಿಂದ ಕುಸ್ತಿ ಹೋರಾಟಕ್ಕೆ ಧಕ್ಕೆ: ಸಾಕ್ಷಿ ಮಲಿಕ್
ಪಾಕ್ ಆಗಮನ ವಿಳಂಬ
ಆಟಗಾರರ ವೀಸಾ ಸಮಸ್ಯೆಯಿಂದಾಗಿ ಪಾಕಿಸ್ತಾನ ತಂಡ ಬೆಂಗಳೂರಿಗೆ ತಡವಾಗಿ ಆಗಮಿಸಲಿದೆ. ಆಟಗಾರರು ಸದ್ಯ ಮಾರಿಷಸ್ನಲ್ಲಿ ಉಳಿದುಕೊಂಡಿದ್ದು, ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಆದರೆ ಟೂರ್ನಿಯ ಮೊದಲ ಪಂದ್ಯಕ್ಕೆ ಪಾಕ್ ತಂಡ ಲಭ್ಯವಿರಲಿದೆ ಎಂದು ಕೆಎಸ್ಎಫ್ಎ ಖಚಿತಪಡಿಸಿದೆ.
ವನಿತಾ ಫುಟ್ಬಾಲ್: ಇಂದು ಕರ್ನಾಟಕ- ಚಂಡೀಗಢ
ಅಮೃತ್ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಿರುವ ಕನಾರ್ಟಕ ನಿರ್ಣಾಯಕ ಪಂದ್ಯದಲ್ಲಿ ಸೋಮವಾರ ಚಂಡೀಗಢ ವಿರುದ್ಧ ಸೆಣಸಲಿದೆ. ಆರಂಭಿಕ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 0-4 ಅಂತರದಲ್ಲಿ ಸೋತಿದ್ದ ರಾಜ್ಯ ತಂಡ ಶನಿವಾರ ಪಂಜಾಬ್ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟಿತ್ತು. ಸದ್ಯ 2 ಪಂದ್ಯಗಳಲ್ಲಿ ಕೇವಲ 1 ಅಂಕ ಸಂಪಾದಿಸಿ ‘ಎ’ ಗುಂಪಿನಲ್ಲಿ 5ನೇ ಸ್ಥಾನದಲ್ಲಿರುವ ರಾಜ್ಯ ತಂಡ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸುವ ಆಸೆ ಜೀವಂತವಾಗಿರಲಿದೆ. 6 ತಂಡಗಳಿರುವ ಗುಂಪಿನಲ್ಲಿ ಅಗ್ರ 2 ತಂಡಗಳು ಮಾತ್ರ ಸೆಮೀಸ್ಗೇರಲಿವೆ.
ಫುಟ್ಬಾಲ್: 2ನೇ ಬಾರಿ ಭಾರತ ಚಾಂಪಿಯನ್
ಭುವನೇಶ್ವರ: 3ನೇ ಆವೃತ್ತಿಯ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಭಾರತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಲೆಬನಾನ್ ವಿರುದ್ಧದ 3ನೇ ಆವೃತ್ತಿಯ ಟೂರ್ನಿಯ ಫೈನಲ್ನಲ್ಲಿ 2-0 ಗೋಲುಗಳಿಂದ ಗೆದ್ದ ಭಾರತ, ಮುಂಬರುವ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಮೊದಲಾರ್ಧ ಗೋಲಿಲ್ಲದೇ ಮುಕ್ತಾಯಗೊಂಡರೂ ದ್ವಿತೀಯಾರ್ಧದ ಆರಂಭದಲ್ಲೇ ಸುನಿಲ್ ಚೆಟ್ರಿ(46ನೇ ನಿಮಿಷ) ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಬಳಿಕ 65ನೇ ನಿಮಿಷದಲ್ಲಿ ಚಾಂಗ್ಟೆ ಹೊಡೆದ ಆಕರ್ಷಕ ಗೋಲು ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿತು. 2018ರ ಚೊಚ್ಚಲ ಆವೃತ್ತಿಯಲ್ಲೂ ಭಾರತ ಪ್ರಶಸ್ತಿ ಗೆದ್ದಿತ್ತು. 2019ರಲ್ಲಿ ಉತ್ತರ ಕೊರಿಯಾ ಚಾಂಪಿಯನ್ ಆಗಿತ್ತು.