SAFF Cup 2023: ಇಂದು ಭಾರತ vs ಲೆಬನಾನ್ ಸೆಮೀಸ್‌ ಸೆಣಸಾಟ..!

ಸ್ಯಾಫ್ ಕಪ್ ಚಾಂಪಿಯನ್‌ಶಿಪ್‌ನಲ್ಲಿಂದು ಸೆಮಿಫೈನಲ್ ಕದನ
ಸುನಿಲ್ ಚೆಟ್ರಿ ನೇತೃತ್ವದ ಭಾರತಕ್ಕೆ ಬಲಿಷ್ಠ ಲೆಬನಾನ್‌ ಸವಾಲು
ಮೊದಲ ಸೆಮಿಫೈನಲ್‌ನಲ್ಲಿ ಕುವೈತ್‌ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ

SAFF Cup 2023 India vs Lebanon Semi Final Clash today kvn

ಬೆಂಗಳೂರು(ಜು.01): 14ನೇ ಆವೃತ್ತಿಯ ಸ್ಯಾಫ್‌ ಕಪ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ ಹಣಾಹಣಿ ಶನಿವಾರ ನಡೆಯಲಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್‌ ಭಾರತಕ್ಕೆ ಬಲಿಷ್ಠ ಲೆಬನಾನ್‌ ಸವಾಲು ಎದುರಾಗಲಿದೆ.

8 ಬಾರಿ ಚಾಂಪಿಯನ್‌ ಭಾರತ ಲೀಗ್‌ ಹಂತದಲ್ಲಿ ಕುವೈತ್‌ ವಿರುದ್ಧದ ಡ್ರಾದ ಹೊರತಾಗಿಯೂ ಅತ್ಯುತ್ತಮ ಪ್ರದರ್ಶನ ತೋರಿದೆ. ನಾಯಕ ಸುನಿಲ್‌ ಚೆಟ್ರಿ 3 ಪಂದ್ಯಗಳಲ್ಲಿ 5 ಗೋಲು ಬಾರಿಸಿದ್ದು, ಅವರ ಪ್ರದರ್ಶನವೇ ತಂಡದ ಗೆಲುವು-ಸೋಲು ನಿರ್ಧರಿಸುವಂತಿದೆ. ಇನ್ನು, ಕಳೆದ 9 ಪಂದ್ಯಗಳಲ್ಲಿ ಭಾರತ ಕೇವಲ 1 ಗೋಲು ಬಿಟ್ಟು ಕೊಟ್ಟಿದ್ದು, ಎದುರಾಳಿಯನ್ನು ಮತ್ತೊಮ್ಮೆ ಕಟ್ಟಿಹಾಕಲು ರಕ್ಷಣಾ ಪಡೆ ಕಾಯುತ್ತಿದೆ.

Neeraj Chopra: ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ

8ನೇ ಮುಖಾಮುಖಿ: ಭಾರತ ಹಾಗೂ ಲೆಬನಾನ್‌ ಈವರೆಗೆ 7 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 3 ಪಂದ್ಯಗಳಲ್ಲಿ ಲೆಬನಾನ್‌, 2ರಲ್ಲಿ ಭಾರತ ಗೆಲುವು ಸಾಧಿಸಿದೆ. ಉಳಿದಂತೆ 2 ಪಂದ್ಯಗಳು ಡ್ರಾಗೊಂಡಿದೆ. ಆದರೆ ಇತ್ತೀಚಿಗೆ ನಡೆದ ಇಂಟರ್‌ ಕಾಂಟಿನೆಂಟಲ್‌ ಕಪ್ ಟೂರ್ನಿಯಲ್ಲಿ ಭಾರತ, ಲೆಬನಾನ್‌ ವಿರುದ್ಧ 2 ಪಂದ್ಯಗಳಲ್ಲೂ ಅಜೇಯವಾಗಿತ್ತು. ಇದೇ ಪ್ರದರ್ಶನ ತೋರಿ 13ನೇ ಬಾರಿ ಫೈನಲ್‌ಗೇರಲು ಭಾರತ ಕಾತರಿಸುತ್ತಿದ್ದರೆ, ಮೊದಲ ಟೂರ್ನಿಯಲ್ಲೇ ಪ್ರಶಸ್ತಿ ಸುತ್ತಿಗೇರುವ ನಿರೀಕ್ಷೆ ಲೆಬನಾನ್ ಆಟಗಾರರಲ್ಲಿದೆ.

ಸ್ಟಿಮಾಕ್‌ಗೆ 2 ಪಂದ್ಯ ನಿಷೇಧ!

ಟೂರ್ನಿಯ ಪಾಕಿಸ್ತಾನ ಹಾಗೂ ಕುವೈತ್‌ ವಿರುದ್ಧದ ಪಂದ್ಯದ ವೇಳೆ 2 ಬಾರಿ ರೆಡ್‌ ಕಾರ್ಡ್‌ ಪಡೆದಿರುವ ಭಾರತದ ಕೋಚ್‌ ಇಗೋರ್‌ ಸ್ಟಿಮಾಕ್‌ಗೆ 2 ಪಂದ್ಯಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ 500 ಯುಎಸ್‌ ಡಾಲರ್‌(ಸುಮಾರು 41,000 ರು.) ದಂಡ ವಿಧಿಸಲಾಗಿದೆ.

ಭಾರತದ ಪಂದ್ಯ: ಸಂಜೆ 7.30ಕ್ಕೆ, 
ನೇರಪ್ರಸಾರ: ಫ್ಯಾನ್‌ಕೋಡ್‌, ಡಿಡಿ ಭಾರತಿ

ಲೆಬನಾನ್ ಒಂದು ಬಲಿಷ್ಠ ತಂಡ. ನಮ್ಮ ಬಗ್ಗೆಯೂ ಲೆಬನಾನ್‌ಗೆ ಇದೇ ಅಭಿಪ್ರಾಯವಿದೆ ಎನ್ನುವ ನಂಬಿಕೆ ಇದೆ. ಇತ್ತೀಚಿಗೆ ನಡೆದ ಇಂಟರ್‌ ಕಾಂಟಿನೆಂಟಲ್‌ ಕಪ್‌ನಲ್ಲಿ ಲೆಬನಾನ್‌ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದೇವೆ - ಸುನಿಲ್‌ ಚೆಟ್ರಿ, ಭಾರತ ತಂಡದ ನಾಯಕ

ಕುವೈತ್‌ಗೆ ಬಾಂಗ್ಲಾ ಸವಾಲು

ಮೊದಲ ಸೆಮಿಫೈನಲ್‌ನಲ್ಲಿ ಕುವೈತ್‌ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. 2008ರ ಚಾಂಪಿಯನ್‌ ಬಾಂಗ್ಲಾ 4ನೇ ಫೈನಲ್‌ ಮೇಲೆ ಕಣ್ಣಿಟ್ಟಿದ್ದರೆ, ಕುವೈತ್‌ ಮೊದಲ ಪ್ರಯತ್ನದಲ್ಲೇ ಫೈನಲ್‌ ತಲುಪುವ ಕಾತರದಲ್ಲಿದೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಆಗಸ್ಟ್‌ 3ರಿಂದ ಡುರಾಂಡ್‌ ಕಪ್‌ ಫುಟ್ಬಾಲ್‌ ಟೂರ್ನಿ

ನವದೆಹಲಿ: ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್‌ ಟೂರ್ನಿ ಎನಿಸಿರುವ ಡುರಾಂಡ್ ಕಪ್‌ನಲ್ಲಿ 27 ವರ್ಷಗಳ ಬಳಿಕ ಮತ್ತೊಮ್ಮೆ ಈ ಬಾರಿ ವಿದೇಶಿ ತಂಡಗಳು ಪಾಲ್ಗೊಳ್ಳಲಿವೆ. ಶುಕ್ರವಾರ 132ನೇ ಆವೃತ್ತಿಯ ಟೂರ್ನಿಯ ಟ್ರೋಫಿ ಟೂರ್‌ಗೆ ಚಾಲನೆ ನೀಡಿದ ಆಯೋಜಕರು ವಿದೇಶಿ ತಂಡಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ. 

ಈ ಬಾರಿ ಟೂರ್ನಿ ಆಗಸ್ಟ್‌ 3ರಿಂದ ಸೆಪ್ಟೆಂಬರ್ 3ರ ವರೆಗೆ ಕೋಲ್ಕತಾ ಸೇರಿದಂತೆ 4 ಕಡೆಗಳಲ್ಲಿ ನಡೆಯಲಿದ್ದು, ನೇಪಾಳ, ಭೂತಾನ್‌, ಬಾಂಗ್ಲಾದೇಶದ ತಂಡಗಳು ಸೇರಿ ಒಟ್ಟು 24 ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿ 1,888ರಲ್ಲಿ ಆರಂಭಗೊಂಡಿದ್ದು, ಕಳೆದ ಬಾರಿ ಸುನಿಲ್‌ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ಚಾಂಪಿಯನ್‌ ಆಗಿತ್ತು.

Latest Videos
Follow Us:
Download App:
  • android
  • ios