ಸತತ ಎರಡನೇ ಬಾರಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ; ಅಭಿನಂದಿಸಿದ ಪ್ರಧಾನಿ ಮೋದಿ
ಲುಸ್ಸಾನ್ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾ
ಸಂಪೂರ್ಣ ಗಾಯದಿಂದ ಚೇತರಿಸಿಕೊಂಡು ಜಾವೆಲಿನ್ ಸ್ಪರ್ಧೆಗೆ ಮರಳಿರುವ ಚಿನ್ನದ ಹುಡುಗ
5ನೇ ಪ್ರಯತ್ನದಲ್ಲಿ 87.66 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದ ನೀರಜ್ ಚೋಪ್ರಾ
ನವದೆಹಲಿ(ಜು.01): ಟೋಕಿಯೋ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ತಮ್ಮ ಅದ್ಭುತ ಲಯವನ್ನು ಮುಂದುವರೆಸಿದ್ದು, ಇದೀಗ ಲುಸ್ಸಾನ್ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರೋಬ್ಬರಿ ಒಂದು ತಿಂಗಳ ಬಳಿಕ ಸಂಪೂರ್ಣ ಗಾಯದಿಂದ ಚೇತರಿಸಿಕೊಂಡು ಜಾವೆಲಿನ್ ಸ್ಪರ್ಧೆಗೆ ಮರಳಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ, ಶುಕ್ರವಾರ ತಡರಾತ್ರಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಸರಣಿಯ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನೀರಜ್ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. " ಲುಸ್ಸಾನ್ ಡೈಮಂಡ್ ಲೀಗ್ ಮಿಂಚಿದ ನೀರಜ್ ಚೋಪ್ರಾಗೆ ಅಭಿನಂದನೆಗಳು. ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಕ್ಕೆ ಅಭಿನಂದನೆಗಳು. ಅವರ ಪ್ರತಿಭೆ, ಬದ್ದತೆ ಹಾಗೂ ನಿರಂತರ ಸಾಧಿಸಬೇಕೆನ್ನುವ ಛಲ ಅಮೋಘವಾದದ್ದು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
25 ವರ್ಷದ ನೀರಜ್ ಚೋಪ್ರಾ, ಕಳೆದ ತಿಂಗಳು ಅಭ್ಯಾಸ ನಡೆಸುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಕಳೆದೊಂದು ತಿಂಗಳಿನಲ್ಲಿ ನೀರಜ್ ಚೋಪ್ರಾ ಮೂರು ಪ್ರಮುಖ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಇದೀಗ ಲುಸ್ಸಾನ್ ಡೈಮಂಡ್ ಲೀಗ್ ಸ್ಪರ್ಧೆಯ 5ನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ನೀರಜ್ ಚೋಪ್ರಾ, ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿದರು. ಇದಾದ ಬಳಿಕ ಎರಡನೇ ಪ್ರಯತ್ನದಲ್ಲಿ 83.52 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಮೂರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 85.04 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿದರು. ಇನ್ನು ನೀರಜ್ ಚೋಪ್ರಾ ಅವರ ನಾಲ್ಕನೇ ಪ್ರಯತ್ನ ಪೌಲ್ ಆಯಿತು. ಇನ್ನು ಐದನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.66 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟರು. ಇನ್ನು ಆರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 84.15 ಮೀಟರ್ ದೂರ ಎಸೆಯುವ ಮೂಲಕ ತಮ್ಮ ಕೊನೆಯ ಪ್ರಯತ್ನ ಮುಗಿಸಿದರು.
Asian Kabaddi Championship 2023: ಇರಾನ್ ಬಗ್ಗುಬಡಿದು 8ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಕಬಡ್ಡಿ ತಂಡ
ಇನ್ನುಳಿದಂತೆ ಜರ್ಮನಿಯ ಜೂಲಿನ್ ವೆಬರ್ 87.03 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ಜೆಕ್ ಗಣರಾಜ್ಯದ ಜೇಕೊಬ್ ವೆಡ್ಲೆಜೆಕ್ 86.13 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ನೀರಜ್ ಚೋಪ್ರಾ ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಲುಸ್ಸಾನ್ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಚೊಚ್ಚಲ ಬಾರಿಗೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಕೆಲವು ತಿಂಗಳಿನಲ್ಲೇ ನೀರಜ್ ಚೋಪ್ರಾ ಡೈಮಂಡ್ ಲೀಗ್ ಟ್ರೋಫಿ ಫೈನಲ್‌ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಭಾರತದ ಸೂಪರ್ ಸ್ಟಾರ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಡೈಮಂಡ್ ಲೀಗ್ ಟೂರ್ನಿಯ ಮೊದಲ ಚರಣದಲ್ಲಿ ಕೂಡಾ ಚಿನ್ನದ ಪದಕ ಜಯಿಸಿದ್ದರು. ಮೇ 05ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಪರ್ಧೆಯನ್ನು ಜಯಿಸಿದ್ದರು. ನೀರಜ್ ಚೋಪ್ರಾ ಅವರ ವೈಯುಕ್ತಿಕ ಶ್ರೇಷ್ಠ ಸಾಧನೆ 89.94 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ.