90ನೇ ಗೋಲು: ಸಕ್ರಿಯ ಫುಟ್ಬಾಲಿಗರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆಟ್ರಿ!
ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಮಣಿಸಿದ ಭಾರತ
ಪಾಕ್ ಎದುರು ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ಸುನಿಲ್ ಚೆಟ್ರಿ ಪಡೆ
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 90 ಗೋಲು ಬಾರಿಸಿದ ಸುನಿಲ್ ಚೆಟ್ರಿ
ಬೆಂಗಳೂರು(ಜೂ.22): ಪಾಕಿಸ್ತಾನ ವಿರುದ್ಧದ ಸ್ಯಾಫ್ ಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಭಾರತದ ನಾಯಕ ಸುನಿಲ್ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 90 ಗೋಲುಗಳನ್ನು ಪೂರೈಸಿದರು. ಇದರೊಂದಿಗೆ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಲೇಷ್ಯಾದ ಮೊಖ್ತಾರ್ ದಹಾರಿ(89) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದರು.
138 ಪಂದ್ಯಗಳನ್ನು ಆಡಿರುವ ಚೆಟ್ರಿ, ಅತಿಹೆಚ್ಚು ಗೋಲು ಬಾರಿಸಿರುವ ಏಷ್ಯಾ ಆಟಗಾರರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೋ 123 ಗೋಲುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇರಾನ್‌ನ ಅಲಿ ಡಾಯಿ 109 ಗೋಲುಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 103 ಗೋಲು ಬಾರಿಸಿ 3ನೇ ಸ್ಥಾನ ಪಡೆದಿದ್ದಾರೆ. 2005ರ ಜೂ.12ರಂದು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಚೆಟ್ರಿ, ತಮ್ಮ ಚೊಚ್ಚಲ ಪಂದ್ಯದಲ್ಲೇ ಮೊದಲ ಅಂತಾರಾಷ್ಟ್ರೀಯ ಗೋಲು ಬಾರಿಸಿದ್ದರು.
ಪಂದ್ಯಕ್ಕೆ 6 ಗಂಟೆ ಮೊದಲು ಬೆಂಗ್ಳೂರಿಗೆ ಪಾಕಿಸ್ತಾನ ತಂಡ!
ಬೆಂಗಳೂರು: ಪಾಕಿಸ್ತಾನ ಆಟಗಾರರು 2 ಬ್ಯಾಚ್‌ಗಳಲ್ಲಿ ಬೆಂಗಳೂರಿಗೆ ಆಗಮಿಸಿದರು. ಬುಧವಾರ ಬೆಳಗ್ಗಿನ ಜಾವ 1 ಗಂಟೆ ವೇಳೆಗೆ ಮಾರಿಷಸ್ನಿಂದ ಮುಂಬೈಗೆ ಬಂದಿಳಿದ ತಂಡದಲ್ಲಿ ಆಟಗಾರರು, ಕೋಚಿಂಗ್ ಸಿಬ್ಬಂದಿ ಸೇರಿ ಒಟ್ಟು 32 ಸದಸ್ಯರಿದ್ದು ಎಲ್ಲರಿಗೂ ಒಂದೇ ವಿಮಾನದಲ್ಲಿ ಟಿಕೆಟ್ ಹೊಂದಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ 2 ಬ್ಯಾಚ್‌ಗಳಲ್ಲಿ ತಂಡವು ಬೆಂಗಳೂರು ತಲುಪಿತು. ಮೊದಲ ಬ್ಯಾಚ್ ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ಹೊರಟರೆ, 2ನೇ ಬ್ಯಾಚ್ ಬೆಳಗ್ಗೆ 9.15ರ ವಿಮಾನದಲ್ಲಿ ಪ್ರಯಾಣಿಸಿತು. 2ನೇ ಬ್ಯಾಚ್‌ನಲ್ಲಿದ್ದ ಸದಸ್ಯರು ಕಂಠೀರವ ಕ್ರೀಡಾಂಗಣದ ಬಳಿ ನಿಗದಿಯಾಗಿರುವ ಹೋಟೆಲ್ ತಲುಪಿದಾಗ ಮಧ್ಯಾಹ್ನ 1 ಗಂಟೆ. ಅಂದರೆ ಪಂದ್ಯ ಆರಂಭಗೊಳ್ಳಲು ಕೇವಲ 6 ಗಂಟೆ ಮೊದಲು.
SAFF ಚಾಂಪಿಯನ್‌ಶಿಪ್ ಫುಟ್ಬಾಲ್, ಪಾಕಿಸ್ತಾನ ವಿರುದ್ಧ 4-0 ಅಂತರದಿಂದ ಭಾರತಕ್ಕೆ ಗೆಲುವು!
ಪಾಕ್ ತಂಡಕ್ಕೆ ಬಿಗಿ ಭದ್ರತೆ
ಬೆಂಗಳೂರಿಗೆ ಆಗಮಿಸಿರುವ ಪಾಕಿಸ್ತಾನ ತಂಡಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ನಗರದ ಪೊಲೀಸರ ಸರ್ಪಗಾವಲಿನಲ್ಲಿ ತಂಡವು ಹೋಟೆಲ್‌ನಿಂದ ಪಂದ್ಯ, ಅಭ್ಯಾಸಕ್ಕೆ ತೆರಳಲಿದೆ. ಹೋಟೆಲ್ ಸುತ್ತಮುತ್ತಲು ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತಾ ತಂಡಕ್ಕೆ ಮಾಹಿತಿ ನೀಡದೆ, ಅವರ ಅನುಪಸ್ಥಿತಿಯಲ್ಲಿ ಎಲ್ಲೂ ಹೊರಹೋಗದಂತೆ ಪಾಕ್ ತಂಡದಲ್ಲಿರುವ ಎಲ್ಲಾ ಸದಸ್ಯರಿಗೂ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಕುವೈತ್ ಶುಭಾರಂಭ
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ 3-1 ಗೋಲುಗಳಿಂದ ಗೆದ್ದು ಕುವೈತ್ ಶುಭಾರಂಭ ಮಾಡಿತು. ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಕುವೈತ್, ಮೊದಲಾರ್ಧದಲ್ಲೇ 2 ಗೋಲು ಬಾರಿಸಿತು. ಬಳಿಕ 65ನೇ ನಿಮಿಷದಲ್ಲಿ ಮತ್ತೊಂದು ಗೋಲಿನ ಮೂಲಕ 3-0 ಮುನ್ನಡೆ ಪಡೆಯಿತು. ಬಳಿಕ 4 ನಿಮಿಷಗಳ ನಂತರ ನೇಪಾಳ ಗೋಲು ಬಾರಿಸಿದರೂ ಸೋಲು ತಪ್ಪಿಸಲಾಗಲಿಲ್ಲ.
ಇಂದಿನ ಪಂದ್ಯಗಳು
ಲೆಬನಾನ್-ಬಾಂಗ್ಲಾದೇಶ, ಮಧ್ಯಾಹ್ನ 3.30ಕ್ಕೆ
ಮಾಲ್ಡೀವ್್ಸ-ಭೂತಾನ್, ಸಂಜೆ 7.30ಕ್ಕೆ
ರೊನಾಲ್ಡೋ 200 ಅಂತಾರಾಷ್ಟ್ರೀಯ ಪಂದ್ಯ: ಗಿನ್ನೆಸ್ ದಾಖಲೆ!
ರೇಕ್ಜಾವಿಕ್(ಐಸ್ಲೆಂಡ್): ಫುಟ್ಬಾಲ್ ಮಾಂತ್ರಿಕ, ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೊ 200 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ. 2003ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ್ದ ರೊನಾಲ್ಡೋ ಮಂಗಳವಾರ ಐಸ್ಲೆಂಡ್ ವಿರುದ್ಧದ ಯುರೋಪಿಯನ್ ಚಾಂಪಿಯನ್‌ಶಿಪ್ ಅರ್ಹತಾ ಪಂದ್ಯದ ಮೂಲಕ ಈ ಮೈಲಿಗಲ್ಲು ಸಾಧಿಸಿದರು. 38 ವರ್ಷದ ರೊನಾಲ್ಡೋ ಪಂದ್ಯದಲ್ಲಿ 1 ಗೋಲು ಬಾರಿಸಿದ್ದು, ಒಟ್ಟು ಗೋಲು ಗಳಿಕೆಯನ್ನು 123ಕ್ಕೆ ಏರಿಸಿದರು