Asianet Suvarna News Asianet Suvarna News

RIP Pele: ಫುಟ್ಬಾಲ್ ದಂತಕಥೆ ಪೀಲೆ ನಿಧನದಿಂದ ಕ್ರೀಡಾ ಜಗತ್ತಿಗೇ ಸೂತಕ!

ಫುಟ್ಬಾಲ್‌ ದಂತಕಥೆ ನಿಧನಕ್ಕೆ ವಿಶ್ವದೆಲ್ಲೆಡೆ ಶೋಕಾಚರಣೆ
ನಾಡಿದ್ದು ಸಾರ್ವಜನಿಕ ದರ್ಶನ, ಮಂಗಳವಾರ ಅಂತ್ಯಕ್ರಿಯೆ
ಪೀಲೆ ಪಾರ್ಥೀವ ಶರೀರವನ್ನು ಅವರ ಹುಟ್ಟೂರು ಸ್ಯಾಂಟೋಸ್‌ನಲ್ಲಿರುವ ವಿಲಾ ಬೆಲ್ಮಿರೊ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.

RIP Pele Funeral and burial of football legend Pele to take place in hometown Santos Football world pay tribute kvn
Author
First Published Dec 31, 2022, 10:45 AM IST

ಸಾವೊ ಪಾಲೊ(ಡಿ.31): ಫುಟ್ಬಾಲ್‌ ದಂತಕಥೆ, ಪೀಲೆ ಎಂದೇ ಜಗತ್ೊ್ರಸಿದ್ಧಿ ಪಡೆದಿರುವ ಬ್ರೆಜಿಲ್‌ನ ಎಡ್ಸನ್‌ ಅರಾಂಟೆಸ್‌ ಡೊ ನಾಸಿಮೆಂಟೊ ಗುರುವಾರ ಇಹಲೋಕ ತ್ಯಜಿಸಿದ್ದಾರೆ. 82 ವರ್ಷದ ಪೀಲೆ ಕ್ಯಾನ್ಸರ್‌ ವಿರುದ್ಧದ ಹೋರಾಟವನ್ನು ಕೊನೆಗೂ ಗೆಲ್ಲಲು ಸಾಧ್ಯವಾಗಲಿಲ್ಲ. ಪೀಲೆ ನಿಧನದಿಂದ ಕ್ರೀಡಾ ಜಗತ್ತಿಗೇ ಸೂತಕ ಬಂದಂತಾಗಿದ್ದು, ವಿಶ್ವದೆಲ್ಲೆಡೆ ಶೋಕಾಚರಣೆ ನಡೆಸಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಮೂತ್ರಪಿಂಡ ಹಾಗೂ ಪ್ರಾಸ್ಟೇಟ್‌ ಸಮಸ್ಯೆಯಿಂದ ಬಳಲುತ್ತಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2022ರ ನವೆಂಬರ್‌ನಲ್ಲಿ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಪೀಲೆ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಅವರ ಕುಟುಂಬಸ್ಥರೆಲ್ಲರೂ ಆಸ್ಪತ್ರೆಗೆ ಧಾವಿಸಿದ್ದರು.

ಇಲ್ಲಿನ ಆಲ್ಬರ್ಚ್‌ ಐನ್‌ಸ್ಟಿನ್‌ ಆಸ್ಪತ್ರೆಯಲ್ಲಿ ಅಸುನೀಗಿದ ಪೀಲೆ ಅವರ ಪಾರ್ಥೀವ ಶರೀರವನ್ನು ಸೋಮವಾರ ಅವರ ಹುಟ್ಟೂರು ಸ್ಯಾಂಟೋಸ್‌ನಲ್ಲಿರುವ ವಿಲಾ ಬೆಲ್ಮಿರೊ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಮಂಗಳವಾರ ಬೆಳಗ್ಗೆ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ದೇಶ-ವಿದೇಶಗಳ ಲಕ್ಷಾಂತರ ಅಭಿಮಾನಿಗಳು ತಾವು ಆರಾಧಿಸುವ ಪೀಲೆ ಅವರನ್ನು ಕೊನೆ ಬಾರಿಗೆ ನೋಡಲು ಆಗಮಿಸುವ ನಿರೀಕ್ಷೆ ಇದೆ. ಅಂತಿಮ ದರ್ಶನದ ಬಳಿಕ ಕೇವಲ ಕುಟುಂಬಸ್ಥರು ಪೀಲೆ ಅವರ ಅಂತಿಮ ಕ್ರಿಯೆ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಾಯಿ ವಾಸವಿರುವ ಮನೆ ಮುಂದೆ ಅಂತಿಮ ಯಾತ್ರೆ

ಪೀಲೆ ಅವರ ತಾಯಿ, 100 ವರ್ಷದ ಸೆಲೆಸ್ಟ್‌ ಅರಾಂಟೆಸ್‌ ಸ್ಯಾಂಟೋಸ್‌ನ ತಮ್ಮ ನಿವಾಸದಲ್ಲಿ ವಾಸವಿದ್ದಾರೆ. ಅವರು ಹಾಸಿಗೆ ಬಿಟ್ಟು ಓಡಾಡಲು ಸಾಧ್ಯವಿಲ್ಲ. ಹೀಗಾಗಿ ಅಂತಿಮ ಯಾತ್ರೆ ವೇಳೆ ತಾಯಿಯ ಮನೆ ಮುಂದೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ. 3 ವಿವಾಹವಾಗಿದ್ದ ಪೀಲೆಗೆ ಒಟ್ಟು 7 ಜನ ಮಕ್ಕಳಿದ್ದಾರೆ.

Pele Passed Away: ಫುಟ್ಬಾಲ್‌ ದಂತಕಥೆ ಬ್ರೆಜಿಲ್‌ನ ಪೀಲೆ ಇನ್ನಿಲ್ಲ

ಪೀಲೆಯ ಮ್ಯಾಜಿಕ್‌ ಉಳಿಯಲಿದೆ: ನೇಯ್ಮರ್‌

ಪೀಲೆ ನಿಧನಕ್ಕೆ ಖ್ಯಾತ ನಾಮ ಫುಟ್ಬಾಲಿಗರು ಮಾತ್ರವಲ್ಲದೇ ವಿವಿಧ ಕ್ರೀಡೆಗಳ ದಿಗ್ಗಜರೂ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪೀಲೆಯ ಆಟದಿಂದ ತಾವು ಅನುಭವಿಸಿದ ಖುಷಿಯ ಕ್ಷಣಗಳ ಬಗ್ಗೆ ಬರೆದುಕೊಂಡಿದ್ದಾರೆ. ಬ್ರೆಜಿಲ್‌ನ ತಾರಾ ಫುಟ್ಬಾಲಿಗ, ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ಪರ ಪೀಲೆ ಅವರ ಅತಿಹೆಚ್ಚು ಗೋಲುಗಳ(77) ದಾಖಲೆಯನ್ನು ಸರಿಗಟ್ಟಿದ ನೇಯ್ಮರ್‌ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಬರಹ ಹಾಕಿದ್ದಾರೆ. ‘ಪೀಲೆ ಫುಟ್ಬಾಲ್‌ಗೆ ಕಾಲಿಡುವ ಮೊದಲು ಫುಟ್ಬಾಲ್‌ ಕೇವಲ ಒಂದು ಕ್ರೀಡೆಯಾಗಿತ್ತು. ಅವರು ಫುಟ್ಬಾಲ್‌ ಅನ್ನು ಒಂದು ಕಲೆಯಾಗಿ, ಮನರಂಜನೆಯಗಿ ಬದಲಿಸಿದರು. ಬಡವರು, ಕರಿಯರ ಧ್ವನಿಯಾದರು. ಅವರಿಂದಾಗಿ ಬ್ರೆಜಿಲ್‌ಗೆ ವಿಶೇಷ ಸ್ಥಾನಮಾನ ಸಿಕ್ಕಿತು. ಅವರು ನಮ್ಮನ್ನಗಲಿದ್ದಾರೆ. ಆದರೆ ಅವರ ಮ್ಯಾಜಿಕ್‌ ಉಳಿಯಲಿದೆ. ಪೀಲೆ ಶಾಶ್ವತ’ ಎಂದು ನೇಯ್ಮರ್‌ ಬರೆದಿದ್ದಾರೆ.

ಭಾರತಕ್ಕೂ ಎರಡು ಬಾರಿ ಬಂದಿದ್ದ ಪೀಲೆ!

ಪೀಲೆ ಭಾರತಕ್ಕೆ ಎರಡು ಬಾರಿ ಆಗಮಿಸಿದ್ದರು. ಮೊದಲು 1997ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದಿದ್ದ ಮೋಹನ್‌ ಬಗಾನ್‌ ವಿರುದ್ಧದ ಸ್ನೇಹಾರ್ಥ ಪಂದ್ಯದಲ್ಲಿ ನ್ಯೂಯಾರ್ಕ್ ಕಾಸ್ಮೊಸ್‌ ತಂಡದ ಪರ ಆಡಿದ್ದರು. ಪೀಲೆಯ ಕಾಲ್ಚಳಕದ ಮೋಡಿಗೆ ಕೋಲ್ಕತಾ ಮೂಖವಿಸ್ಮತಗೊಂಡಿತ್ತು. ಬಳಿಕ 2015ರಲ್ಲಿ ದೆಹಲಿಯಲ್ಲಿ ನಡೆದಿದ್ದ ಸುಬ್ರೊತೋ ಕಪ್‌ ಫೈನಲ್‌ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಬೆಂಗಳೂರಲ್ಲೂ ಶೋಕಾಚರಣೆ

‘ಮಿನಿ ಬ್ರೆಜಿಲ್‌’ ಎಂದೇ ಕರೆಸಿಕೊಳ್ಳುವ ಬೆಂಗಳೂರಲ್ಲಿನ ಗೌತಮಪುರದಲ್ಲಿರುವ ಪೀಲೆ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ) ಗೌರವ ಸಲ್ಲಿಸಿತು. ರಾಜ್ಯ ಫುಟ್ಬಾಲ್‌ ಸಂಸ್ಥೆ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

Follow Us:
Download App:
  • android
  • ios