Pele Passed Away: ಫುಟ್ಬಾಲ್ ದಂತಕಥೆ ಬ್ರೆಜಿಲ್‌ನ ಪೀಲೆ ಇನ್ನಿಲ್ಲ
ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್‌ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ (82) ಅನಾರೋಗ್ಯ ಕಾರಣದಿಂದ ನಿಧನರಾದರು.
ಬ್ರೆಸಿಲಿಯಾ (ಡಿ.30): ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್‌ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ (82) ಅನಾರೋಗ್ಯ ಕಾರಣದಿಂದ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಕಾಯಿಲೆಗಳ ಕಾರಣದಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಫುಟ್‌ಬಾಲ್ ಇತಿಹಾಸದಲ್ಲಿ ಉತ್ತಮ ಆಟಕ್ಕೆ ಹೆಸರಾಗಿದ್ದ ಪೀಲೆ ಬ್ರೆಜಿಲಿಯಾ ಫುಟ್‌ಬಾಲ್ ಕ್ಲಬ್ ಸ್ಯಾಂಟೋಸ್ ಮತ್ತು ಬ್ರೆಜಿಲ್ ರಾಷ್ಟ್ರೀಯ ತಂಡದೊಂದಿಗೆ ಸುಮಾರು 2 ದಶಕಗಳ ಕಾಲ ಆಡಿ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಮೈದಾನದಲ್ಲಿ ತಮ್ಮ ವೇಗದ ಮತ್ತು ಚಾಕಚಕ್ಯತೆಯ ಚಲನೆ ಮೂಲಕ ಎದುರಾಳಿ ಆಟಗಾರರನ್ನು ಸಹ ಬೆರಗುಗೊಳಿಸಿದ್ದರು.
ಪೀಲೆ ಆಡಿರುವ 650 ಲೀಗ್, 1,281 ಸೀನಿಯರ್ ಪಂದ್ಯಗಳ ಕಾರಣದಿಂದಾಗಿ ಫುಟ್‌ಬಾಲ್ ಇತಿಹಾಸದಲ್ಲಿ ‘ಕಿಂಗ್’ ಎಂಬ ಹೆಸರನ್ನು ಗಳಿಸಿಕೊಂಡಿದ್ದರು. ತಮ್ಮ 17ನೇ ವಯಸ್ಸಿನಲ್ಲೇ 1958ರಲ್ಲಿ ಸ್ವೀಡನ್‌ನಲ್ಲಿ ನಡೆದ ಫುಟ್‌ಬಾಲ್ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದರು.
ಫುಟ್ಬಾಲ್ ದಂತಕತೆ ಪೀಲೆ ಜೆರ್ಸಿ 23.72 ಲಕ್ಷಕ್ಕೆ ಸೇಲ್!
1997ರಲ್ಲಿ ಪೀಲೆ ಬ್ರಿಟನ್ ರಾಣಿಯಿಂದ ಪ್ರತಿಷ್ಠಿತ ‘ನೈಟ್’ ಪದವಿಗೆ ಭಾಜನರಾದರು. ಒಟ್ಟು 92 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪೀಲೆ 77 ಗೋಲುಗಳನ್ನು ಗಳಿಸಿದ್ದಾರೆ. ಎಲ್ಲಾ ಕ್ಲಬ್‌ಗಳು ಸೇರಿದಂತೆ ಒಟ್ಟು 840 ಪಂದ್ಯಗಳನ್ನು ಆಡಿರುವ ಪೀಲೆ 775 ಗೋಲು ಬಾರಿಸಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಪೀಲೆ ನಿಧನಕ್ಕೆ ಜಗತ್ತಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
ವಿಶ್ವಕಪ್ ಗೆಲುವು: ಪೀಲೆ ಅವರು 1958, 1962 ಹಾಗೂ 1972ರಲ್ಲಿ ಬ್ರೆಜಿಲ್‌ಗೆ ಫುಟ್‌ಬಾಲ್ ವಿಶ್ವಕಪ್ ತಂದುಕೊಟ್ಟಿದ್ದರು. ಮೂರು ವಿಶ್ವಕಪ್ ಗೆದ್ದ ಏಕೈಕ ಆಟಗಾರ ಎಂಬ ದಾಖಲೆ ಇವತ್ತಿಗೂ ಅವರ ಹೆಸರಿನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಮೂತ್ರಪಿಂಡ ಹಾಗೂ ಪ್ರಾಸ್ಟೇಟ್ ಸಮಸ್ಯೆಯಿಂದ ಬಳಲುತ್ತಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2022ರ ನವೆಂಬರ್‌ನಲ್ಲಿ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
1958ರಲ್ಲಿ ಸ್ವೀಡನ್‌ನಲ್ಲಿ ನಡೆದ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ಪೀಲೆ ಅವರು ಗೋಲ್ ಬಾರಿಸಿದ್ದರು. ತನ್ಮೂಲಕ ಬ್ರೆಜಿಲ್ ವಿಶ್ವಕಪ್ ಗೆಲ್ಲಲು ನೆರವಾಗಿದ್ದರು. ಪೀಲೆ ಅವರ ಅಂತ್ಯಕ್ರಿಯೆ ಯಾವಾಗ ನಡೆಯಲಿದೆ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.