FIFA World Cup ಸೂಪರ್ ಸಕ್ಸಸ್..! ಲಕ್ಷಾಂತರ ಕೋಟಿ ರುಪಾಯಿ ಖರ್ಚು ಮಾಡಿದ ಕತಾರ್‌ಗೇನು ಲಾಭ?
ಕತಾರ್‌ನಲ್ಲಿ ಅದ್ದೂರಿಯಾಗಿ ನಡೆದ ಫಿಫಾ ವಿಶ್ವಕಪ್ ಟೂರ್ನಿ
29 ದಿನಗಳ ಕಾಲ ನಡೆದ ಕಾಲ್ಚೆಂಡಿನ ಸಮರಕ್ಕೆ ಅದ್ಧೂರಿ ತೆರೆ
ಟೀಕೆ, ವಿವಾದ ಹಾಗೂ ಸವಾಲುಗಳನ್ನು ಮೆಟ್ಟಿನಿಂತ ಕತಾರ್
ಲುಸೈಲ್(ಡಿ.19): 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ನೋಡನೋಡುತ್ತಿದ್ದಂತೆ ಮುಕ್ತಾಯಗೊಂಡಿದೆ. ಶುರುವಿನಿಂದ ಕೊನೆಯವರೆಗೂ ರೋಚಕತೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಟೂರ್ನಿ, ಹಲವು ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿದ್ದಲ್ಲೇ, ಹತ್ತಾರು ದಾಖಲೆಗಳಿಗೂ ವೇದಿಕೆಯಾಯಿತು. ಒಮ್ಮೆಲೇ ಲಕ್ಷಾಂತರ ಪ್ರವಾಸಿಗರು, ಮೂಲಸೌಕರ್ಯದ ಕೊರತೆ, ತಾಪಮಾನದ ಆತಂಕ, ವೈರಸ್ ಭೀತಿ, ಆರ್ಥಿಕ ಸಮಸ್ಯೆ, ಸಾಂಪ್ರದಾಯಿಕ ನೀತಿ ನಿಯಮಗಳ ಪಾಲನೆ ಹೀಗೆ ಹಲವು ಗೊಂದಲ, ಟೀಕೆ, ಸವಾಲು, ಸಮಸ್ಯೆಗಳೆನ್ನೆಲ್ಲಾ ಮೆಟ್ಟಿನಿಂತು ಪುಟ್ಟರಾಷ್ಟ್ರ ಕತಾರ್ ಯಶಸ್ವಿಯಾಗಿ ಟೂರ್ನಿ ಆಯೋಜಿಸಿ ಸೈ ಎನಿಸಿಕೊಂಡಿದೆ.
ವಿಶ್ವಕಪ್ ಆತಿಥ್ಯವನ್ನು ಕತಾರ್‌ಗೇಕೆ ಕೊಟ್ಟೆವು ಎಂದು ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಟೂರ್ನಿ ಆರಂಭಕ್ಕೂ ಮುನ್ನ ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಹೇಳಿದ್ದರು. ಟೂರ್ನಿ ಮುಗಿಯುವ ವೇಳೆಗೆ ಹಾಲಿ ಅಧ್ಯಕ್ಷ ಗಿಯೋನಿ ಇನ್ಫಾಂಟಿನೋ ಇದು ಈ ವರೆಗಿನ ಶ್ರೇಷ್ಠ ವಿಶ್ವಕಪ್ ಎಂದಿದ್ದಾರೆ. ಒಂದು ತಿಂಗಳಲ್ಲಿ ಫಿಫಾ ಮಟ್ಟಿಗೆ ಕತಾರ್ ಕುರಿತ ಅಭಿಪ್ರಾಯ ಬದಲಾಗಿರುವುದು ಸತ್ಯ.
ನಿರೀಕ್ಷಿಸಿದಷ್ಟು ಪ್ರೇಕ್ಷಕರು
ಕತಾರ್ ಅಂದಾಜು 10ರಿಂದ 12 ಲಕ್ಷ ವಿದೇಶಿ ಪ್ರವಾಸಿಗರನ್ನು ನಿರೀಕ್ಷೆ ಮಾಡುತ್ತಿತ್ತು. ವರದಿಗಳ ಪ್ರಕಾರ 10 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಕತಾರ್‌ಗೆ ಬಂದು ಹೋಗಿದ್ದಾರೆ. ಕ್ರೀಡಾಂಗಣಗಳಲ್ಲಿ ಪಂದ್ಯಗಳ ವೀಕ್ಷಣೆ ಜೊತೆಗೆ ದೋಹಾ ನಗರದ ಸುತ್ತ ಮುತ್ತ ಆಯೋಜಿಸಿದ್ದ ಅನೇಕ ‘ಫ್ಯಾನ್ ಫೆಸ್ಟಿವಲ್’ಗಳಲ್ಲಿ ಪಾಲ್ಗೊಂಡಿದ್ದಾರೆ.
FIFA World Cup: ಲಿಯೋನೆಲ್ ಮೆಸ್ಸಿಗೆ ಗೋಲ್ಡನ್ ಬಾಲ್, ಎಂಬಾಪೆಗೆ ಗೋಲ್ಡನ್ ಬೂಟ್..!
ದಾಖಲೆ ಟಿಕೆಟ್ ಮಾರಾಟ
ಈ ವಿಶ್ವಕಪ್‌ನಲ್ಲಿ ಅಂದಾಜು 30 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಫಿಫಾ ಪ್ರಕಾರ ಅತಿಹೆಚ್ಚು ಟಿಕೆಟ್ ಮಾರಾಟಕ್ಕೆ ಸಾಕ್ಷಿಯಾದ ವಿಶ್ವಕಪ್‌ಗಳಲ್ಲಿ ಇದೂ ಒಂದು. 2018ರಲ್ಲಿ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 33 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು.
17 ಲಕ್ಷ ಕೋಟಿ ರುಪಾಯಿ ವೆಚ್ಚ, ಕೇವಲ 1 ಲಕ್ಷ ಕೋಟಿ ರುಪಾಯಿ ಆದಾಯ!
ಕತಾರ್ ಫುಟ್ಬಾಲ್ ವಿಶ್ವಕಪ್ ಆಯೋಜಿಸಲು ಬರೋಬ್ಬರಿ 220 ಬಿಲಿಯನ್ ಡಾಲರ್(ಅಂದಾಜು 17 ಲಕ್ಷ ಕೋಟಿ ರು.) ವೆಚ್ಚ ಮಾಡಿತ್ತು. ವಿಶ್ವಕಪ್‌ಗಾಗಿಯೇ ಮೆಟ್ರೋ ರೈಲು ಆರಂಭಿಸಿದ್ದ ಕತಾರ್, 7 ಕ್ರೀಡಾಂಗಣಗಳನ್ನು ಹೊಸದಾಗಿ ನಿರ್ಮಿಸಿತ್ತು. ಸುಮಾರು 100 ಹೊಸ ಹೋಟೆಲ್‌ಗಳು, ಹತ್ತಾರು ಅಪಾರ್ಚ್‌ಮೆಂಟ್‌ಗಳನ್ನು ಕಟ್ಟಿತ್ತು. ಇಷ್ಟು ಖರ್ಚು ಮಾಡಿದ ಕತಾರ್‌ಗೆ ವಿಶ್ವಕಪ್ ವೇಳೆ ಪ್ರವಾಸಿಗರ ಆಗಮನ, ಹೋಟೆಲ್ ಬುಕ್ಕಿಂಗ್, ಪ್ರಯಾಣ ವೆಚ್ಚ ಇವುಗಳಿಂದ ಆಗಿರುವ ವ್ಯವಹಾರ ಅಂದಾಜು 17 ಬಿಲಿಯನ್ ಡಾಲರ್(ಅಂದಾಜು 1 ಲಕ್ಷ ಕೋಟಿ ರು.) ಎನ್ನಲಾಗಿದೆ.
ವಿಶ್ವಕಪ್ ಆಯೋಜಿಸಿದ್ದರಿಂದ ಕತಾರ್‌ಗೇನು ಲಾಭ?
ಕೇವಲ ಕ್ರೀಡಾಪ್ರೇಮದಿಂದ ಕತಾರ್ ಫುಟ್ಬಾಲ್ ವಿಶ್ವಕಪ್ ಆಯೋಜನೆಯಂತಹ ಮಹತ್ಕಾರ್ಯಕ್ಕೆ ಕೈಹಾಕಲಿಲ್ಲ. ಇದರ ಹಿಂದೆ ರಾಜಕೀಯ ಲಾಭ, ಅಂತಾರಾಷ್ಟ್ರೀಯ ವ್ಯವಹಾರ ಹೀಗೆ ಹಲವು ಕಾರಣಗಳಿವೆ. ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ರಫ್ತಿನಲ್ಲಿ ಕತಾರ್ ಮುಂಚೂಣಿಯಲ್ಲಿದೆ. ಯುರೋಪಿನ ಬಹುತೇಕ, ಅಮೆರಿಕಕ್ಕೂ ಸೇರಿದಂತೆ ಇನ್ನೂ ಹಲವು ದೇಶಗಳು ಎಲ್‌ಎನ್‌ಜಿಗೆ ಕತಾರ್ ಮೇಲೆ ಅವಲಂಬಿತಗೊಂಡಿವೆ. ಇತ್ತೀಚೆಗೆ ಕತಾರ್ ಹಲವು ರಾಷ್ಟ್ರಗಳ ನಡುವೆ ರಾಜಕೀಯ ಸಂಧಾನ ನಡೆಸಲು ಸಹ ಕೈಹಾಕಿದೆ. ಅಮೆರಿಕ ಹಾಗೂ ಇರಾನ್ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿದೆ. ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿ ಜಗತ್ತಿನ ಮುಂದೆ ತನ್ನ ಶಕ್ತಿ ಪ್ರದರ್ಶಿಸಿರುವ ಕತಾರ್, ವಿವಿಧ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಎದುರು ನೋಡುತ್ತಿದೆ.